ಮಡಿಕೇರಿ, ಜ. 3: ಕೊಡಗು ಜಿಲ್ಲೆಯ ಮೂರು ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಗಳಿಗೆ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಇದೀಗ ಈ ಚುನಾವಣೆಯ ಕಾವು ಏರುತ್ತಿದೆ. ರಾಜಕೀಯ ಚಿಹ್ನೆಯಡಿ ನಡೆಯುವ ಚುನಾವಣೆ ಇದಲ್ಲದಿದ್ದರೂ ರಾಜಕೀಯ ಹಿನ್ನೆಲೆಯೊಂದಿಗೇ ಚುನಾವಣೆಯ ಬಿರುಸು ಹೆಚ್ಚಾಗತೊಡಗಿದೆ. ಜಿಲ್ಲೆಯಲ್ಲಿ ಮಡಿಕೇರಿ, ಸೋಮವಾರಪೇಟೆ ಹಾಗೂ ಗೋಣಿಕೊಪ್ಪಲುವಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಇದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಚುನಾವಣೆಗೆ ರಂಗ ಸಜ್ಜಾಗಿದೆ. ಮಡಿಕೇರಿಯ 11 ಕೃಷಿಕರ ಕ್ಷೇತ್ರ ಒಂದು ವರ್ತಕರ ಕ್ಷೇತ್ರ ಹಾಗೂ ಸಹಕಾರ ಮಾರುಕಟ್ಟೆ ವ್ಯವಹಾರ ಸಂಘದ ಒಂದು ಕ್ಷೇತ್ರ ಸೇರಿದಂತೆ ಒಟ್ಟು 13ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ. ಸೋಮವಾರಪೇಟೆ ಹಾಗೂ ಗೋಣಿಕೊಪ್ಪಲುವಿನಲ್ಲಿ ತಲಾ 11 ಕೃಷಿಕರ ಕ್ಷೇತ್ರ ಹಾಗೂ ತಲಾ ಒಂದೊಂದು ವರ್ತಕರ ಕ್ಷೇತ್ರ ಸೇರಿ ಒಟ್ಟು 24 ಕ್ಷೇತ್ರಗಳಿವೆ.
ನಾಮಪತ್ರ ಹಿಂಪಡೆಯಲು ನಿನ್ನೆ ಕೊನೆಯ ದಿನವಾಗಿದ್ದು, ಮಡಿಕೇರಿ ಎಪಿಎಂಸಿಗೆ ನಾಲ್ಕು ಮಂದಿ ಹಾಗೂ ಗೋಣಿಕೊಪ್ಪಲು ಎಪಿಎಂಸಿಗೆ ಓರ್ವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸೋಮವಾರಪೇಟೆ ಎಪಿಎಂಸಿಯ ಎಲ್ಲಾ 12 ಕ್ಷೇತ್ರಕ್ಕೂ ಚುನಾವಣೆ ಅನಿವಾರ್ಯವಾಗಿದೆ.
ಮಡಿಕೇರಿ ಎಪಿಎಂಸಿಗೆ ಮರಗೋಡು ಕ್ಷೇತ್ರದಿಂದ ಕಾಂಗೀರ ಸತೀಶ್, ನಾಪೋಕ್ಲುವಿನಿಂದ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ನರಿಯಂದಡ ದಿಂದ ಚೇನಂಡ ಈ. ಗಿರೀಶ್ ಪೂಣಚ್ಚ ಹಾಗೂ ಸಹಕಾರ ಮಾರುಕಟ್ಟೆ ವ್ಯವಹಾರ ಸಂಘದ ಕ್ಷೇತ್ರದಿಂದ ಎಂ.ಕೆ. ಕುಟ್ಟಪ್ಪ ಅವಿರೋಧವಾಗಿ ಆಯ್ಕೆಗೊಂಡಿದ್ದು, ಅಧಿಕೃತ ಘೋಷಣೆಯಷ್ಟೆ ಬಾಕಿ ಉಳಿದಿದೆ. ಗೋಣಿಕೊಪ್ಪಲು ಎಪಿಎಂಸಿಗೆ ಪೊನ್ನಂಪೇಟೆ ಕ್ಷೇತ್ರದಿಂದ ಚೀಯಕಪೂವಂಡ ಜಿ. ಸುಬ್ರಮಣಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ತಾ. 12ರಂದು ಚುನಾವಣೆಗೆ ವ್ಯವಸ್ಥೆ: ಕೃಷಿ ಭೂಮಿ ಹೊಂದಿದ್ದು, ಆರ್ಟಿಸಿಯಲ್ಲಿ ಹೆಸರಿರುವವರು ಮಾತ್ರ ಈ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ತಾ. 12 ರಂದು ಬೆಳಿಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಜಿಲ್ಲಾಡಳಿತ ಚುನಾವಣೆಗೆ ಅಗತ್ಯ ಸಿದ್ಧತೆ ನಡೆಸಿದೆ. ಮಡಿಕೇರಿ ಎಪಿಎಂಸಿಯ 13ಕ್ಷೇತ್ರದ ಪೈಕಿ ನಾಲ್ಕು ಕ್ಷೇತ್ರದ ಚುನಾವಣೆ ಅವಿರೋಧ ಆಯ್ಕೆಯಿಂದಾಗಿ ರದ್ದಾಗಲಿದೆ. ತಾಲೂಕಿನಲ್ಲಿ ಒಟ್ಟು 30,777 ಮತದಾರರಿದ್ದು, 36 ಬೂತ್ಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ಇದೀಗ ಅವಿರೋಧ ಆಯ್ಕೆಯಿಂದಾಗಿ ಮತದಾರರ ಸಂಖ್ಯೆ 22,269 ಆಗಲಿದ್ದು, 9 ಬೂತ್ ಕಡಿಮೆಯಾಗಲಿದೆ. ಇದೀಗ 9 ಕ್ಷೇತ್ರಕ್ಕೆ ಒಟ್ಟು 19 ಮಂದಿ ಕಣದಲ್ಲಿದ್ದಾರೆ.
ಸೋಮವಾರಪೇಟೆಸೋಮವಾರಪೇಟೆ ಎಪಿಎಂಸಿಯ ಎಲ್ಲಾ 12 ಕ್ಷೇತ್ರಕ್ಕೂ ಅಭ್ಯರ್ಥಿಗಳು ಕಣದಲ್ಲಿದ್ದು, ಜಿದ್ದಾಜಿದ್ದಿನ ಸ್ಪರ್ಧೆ ನಡೆಯುತ್ತಿದೆ. 12 ಕ್ಷೇತ್ರಕ್ಕೆ 33 ಮಂದಿ ಕಣದಲ್ಲಿದ್ದಾರೆ. ತಾಲೂಕಿನಲ್ಲಿ 23,771 ಮತದಾರರಿದ್ದು, 27 ಬೂತ್ಗಳನ್ನು ಮತ ಚಲಾವಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ.ಗೋಣಿಕೊಪ್ಪಲು
ಗೋಣಿಕೊಪ್ಪಲು ಎಪಿಎಂಸಿಗೆ ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು 30,351 ಮಂದಿಗೆ ಮತದಾನದ ಹಕ್ಕಿದೆ. 12 ಕ್ಷೇತ್ರದ ಚುನಾವಣೆಗೆ 48 ಬೂತ್ ತೆರೆಯಲು ವ್ಯವಸ್ಥೆ ಮಾಡಿದ್ದು, ಒಂದು ಕ್ಷೇತ್ರಕ್ಕೆ ಅವಿರೋಧ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ 5 ಬೂತ್ ಕಡಿಮೆಯಾಗಲಿದೆ.
ರಾಜಕೀಯ ಕಸರತ್ತು
ರಾಜಕೀಯ ರಹಿತ ಚುನಾವಣೆ ಇದಾದರೂ ರಾಜಕೀಯ ಪಕ್ಷಗಳು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಬೆಂಬಲಿಸುತ್ತಿವೆ. ಕಾಂಗ್ರೆಸ್, ಬಿಜೆಪಿಗೆ ಪ್ರತಿಷ್ಠೆಯ ಚುನಾವಣೆಯಾಗಿದ್ದು, ಜೆಡಿಎಸ್ ಕೂಡ ಹಲವೆಡೆ ಪ್ರಮುಖ ಪಾತ್ರವಹಿಸುತ್ತಿದೆ. ಈಗಾಗಲೇ ಮತಯಾಚನೆ ಬಿರುಸುಗೊಳ್ಳುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಭ್ಯರ್ಥಿಗಳು ತಮ್ಮ ಬೆಂಬಲಿಗರು, ಪಕ್ಷದ ಮುಖಂಡರೊಂದಿಗೆ ಮತದಾರರ ಮನೆ ಮನೆಗೆ ಭೇಟಿ ನೀಡುತ್ತಿದ್ದು, ಚುನಾವಣೆಯ ಕಾವು ಏರತೊಡಗಿದೆ.