ವೀರಾಜಪೇಟೆ, ಆ. 2: ದಕ್ಷಿಣ ಕೊಡಗಿನ ಕೆಲವು ಭಾಗಗಳಲ್ಲಿ ಹಿಂಗಾರು ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಮಾಡುವ ಬಗ್ಗೆ ಸರಕಾರದ ತೀರ್ಮಾನವನ್ನು ಭಾರತೀಯ ಜನತಾ ಪಾರ್ಟಿಯ ತಾಲೂಕು ಘಟಕ ತೀವ್ರವಾಗಿ ಖಂಡಿಸುತ್ತ್ತದೆಯೆಂದು ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ತಿಳಿಸಿದ್ದಾರೆ. ಅವರು ಇಂದು ವೀರಾಜಪೇಟೆ ಪ್ರೆಸ್ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದರು.
ಕೃತಕ ಮಳೆ ಸುರಿಸಿದಲ್ಲಿ ಇನ್ನಷ್ಟು ತೀವ್ರ ಹವಾಮಾನ ವೈಪರೀತ್ಯ ಉಂಟಾಗಲಿದ್ದು, ಅದು ಕೊಡಗಿನ ಪಾರಂಪರಿಕ ಬೆಳೆಗಳಾದ ಕಾಫಿ, ಕರಿಮೆಣಸು, ಏಲಕ್ಕಿ ಮತ್ತು ಭತ್ತದ ಬೆಳೆಯ ಮೇಲೆ ವಿಪರೀತ ಪರಿಣಾಮ ಉಂಟುಮಾಡಲಿದೆ. ಅಮೇರಿಕಾ ದಂತಹ ಅತಿ ಮುಂದುವರಿದ ರಾಷ್ಟ್ರಗಳಲ್ಲೂ ಕೃತಕ ಮಳೆ ಸಾಕಷ್ಟು ಸಫಲವಾಗಿರುವದಿಲ್ಲ. ಮಾತ್ರವಲ್ಲ ಅತಿಯಾದ ಆರ್ಥಿಕ ಹೊರೆಯನ್ನೂ ಇದಕ್ಕಾಗಿ ಸಹಿಸಬೇಕಾಗುತ್ತದೆ. ಬದಲಿಗೆ ಸರಕಾರವು ಮಳೆಯಿಲ್ಲದೆ ಕಷ್ಟ ಪಡುವ ರೈತರ ಸಾಲಮನ್ನಾದಂತಹ ಕ್ರಮಕ್ಕೆ ಮುಂದಾಗಲಿ. ಕಳೆದ ಸಾಲಿನಲ್ಲಿ ಜಿಲ್ಲೆಯ 120 ಗ್ರಾಮಗಳನ್ನು ಅತಿವೃಷ್ಟಿ ಪೀಡಿತ ಗ್ರಾಮಗಳೆಂದು ಗುರುತಿಸಲಾಗಿದ್ದರೂ ಇಂದಿನವರೆಗೂ ಈ ಬಗ್ಗೆ ಸರಕಾರದಿಂದ ಬಿಡಿಕಾಸು ಬಂದಿರುವದಿಲ್ಲ ಎಂದು ಭೀಮಯ್ಯ ಹೇಳಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ, ಪಟ್ರಪಂಡ ರಘು ನಾಣಯ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ಸುವಿನ್ ಗಣಪತಿ, ಕಾರ್ಯದರ್ಶಿ ವಾಟೇರಿರ ಬೋಪಣ್ಣ, ಜಿಲ್ಲಾ ವಕ್ತಾರ ಟಿ.ಪಿ. ಕೃಷ್ಣ ಹಾಜರಿದ್ದರು.