ಮಡಿಕೇರಿ. ಆ.24: ಕೊಡಗು ಜಿಲ್ಲೆಯಲ್ಲಿ ಅವ್ಯಾಹತವಾಗಿ ಕಂಡು ಬರುತ್ತಿರುವ ಮರ ಹನನ, ಕೋಟಿಗಟ್ಟಲೆ ಅಕ್ರಮ ಮರ ಕಡಿತಲೆ, ಇದರಿಂದಾಗಿ ನಿರಂತರ ಪರಿಸರ ನಾಶ, ತತ್ಪರಿಣಾಮ ಜಾಗತಿಕ ತಾಪಮಾನದ ಮೇಲೆ ದುಷ್ಪರಿಣಾಮವುಂಟಾಗುತ್ತಿದ್ದು ಸಂಬಂಧಿತ ಅನೇಕ ಅಕ್ರಮ ಪ್ರಕರಣಗಳನ್ನು ಸಿ.ಬಿ.ಐ ತನಿಖೆಗೆ ಒಳಪಡಿಸುವಂತೆ ಸಿ.ಎನ್. ಸಿ.ಸಂಘಟನೆ ಅಧ್ಯಕ್ಷ ಎನ್. ಯು. ನಾಚಪ್ಪ ಆಗ್ರಹಿಸಿದ್ದಾರೆ.
ಈ ಸಂಬಂಧ ನಾಚಪ್ಪ ಅವರು ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್, ಕೇಂದ್ರ ಪರಿಸರ ಮಂತ್ರಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸಿ.ಬಿ.ಐ ನಿರ್ದೇಶಕರು ಮತ್ತು ಎನ್ಫೋರ್ಸ್ ಮೆಂಟ್ ಡೈರೆಕ್ಟೊರೇಟ್ಗೆ ಜ್ಞಾಪನಾ ಪತ್ರವನ್ನು ತಾ. 19 ರಂದು ರವಾನಿಸಿದ್ದಾರೆ. ಅಲ್ಲದೆ, ಪ್ರತಿಗಳನ್ನು ಸರ್ವೋಚ್ಛ ನ್ಯಾಯಾಲ ಯದ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ತೀರತ್ ಸಿಂಗ್ ಠಾಕೂರ್, ಕರ್ನಾಟಕ ಹೈ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಎಸ್.ಕೆ ಮುಖರ್ಜಿ ಮತ್ತು ಯುನೆಸ್ಕೋ ಮಹಾ ನಿರ್ದೇಶಕಿ ಶ್ರೀಮತಿ ಐರಿನಾ ಬೊಕೊವಾ ಅÀವರಿಗೂ ಕಳುಹಿಸಲಾಗಿದೆ.
ಡೈಸಿ ಜೇಕಬ್ರವರಿಗೆ ಸೇರಿದ ಭಾಗಮಂಡಲದ ಕೋಪಟ್ಟಿ ಮಲೆಯ ಮರ ಯಜ್ಞ ಕರ್ಮಕಾಂಡದಲ್ಲಿ ಅಸೈನಾರ್ ಅವರ ಕೈವಾಡವಿರುವ ದಾಗಿ ಅವರು ಆರೋಪಿಸಿದ್ದಾರೆ. ಅರಣ್ಯಾಧಿಕಾರಿಗಳು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡಾಗ ಅಸೈನಾರ್À ಪರ ವಕಾಲತ್ತು ವಹಿಸಿದ ವಕೀಲರಾದ ಸುಬ್ಬಯ್ಯ ಹಾಗೂ ಸಹಕರಿಸಿದ ಅವರ ಪುತ್ರ- ಇವರುಗಳ ಸಹಕಾರದಿಂದ ಅಧಿಕಾರಿಗಳು ವಿಧಿಸಿದ್ದ ದಂಡ ಕಟ್ಟದಂತೆ ಅಸೈನಾರ್ ಅವರಿಗೆ ಅನುಕೂಲವುಂಟಾಯಿತು ಎಂದು ಅವರು ಆರೋಪಿಸಿದ್ದಾರೆ. ಹೀಗೆಯೇ ಜಿಲ್ಲೆಯ ಸುಂಟಿಕೊಪ್ಪದ ಎಸ್ಟೇಟ್ ಒಂದರಲ್ಲಿ ಸೇರಿದಂತೆ ಅನೇಕ ಅಕ್ರಮ ಕಡಿತಲೆ ಪ್ರಕರಣಗಳು ನಡೆದಿದ್ದು ಈ ಬಗ್ಗೆ ಸಿ.ಬಿ.ಐ ಕೂಲಂಕಶ ತನಿಖೆ ನಡೆಸುವಂತೆ ನಾಚಪ್ಪ ತಮ್ಮ ಮನವಿಯಲ್ಲಿ ಕೋರಿದ್ದಾರೆ.