ಗೋಣಿಕೊಪ್ಪಲು, ಆ. 17: ಕೊಡಗು ಜಿಲ್ಲೆಯ 29 ಸರ್ಕಾರಿ ಆಸ್ಪತ್ರೆಯಲ್ಲಿ 19 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲ. ಈ ನಿಟ್ಟಿನಲ್ಲಿ ತಾ. 26 ರಂದು ಮಡಿಕೇರಿಗೆ ಆರೋಗ್ಯ ಸಚಿವರನ್ನು ಆಹ್ವಾನಿಸಲಾಗಿದ್ದು, ವೈದ್ಯರ ತುರ್ತು ನೇಮಕಾತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವದು ಎಂದು ಸಾಂಖ್ಯಿಕ ಮತ್ತು ಯೋಜನಾ, ವಿಜ್ಞಾನ-ತಂತ್ರಜ್ಞಾನ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಭರವಸೆ ನೀಡಿದರು.

ಸುಮಾರು ರೂ.10 ಲಕ್ಷ ವೆಚ್ಚದಲ್ಲಿ, 2012-13ನೇ ಸಾಲಿನ ಸುವರ್ಣ ಗ್ರಾಮ ಯೋಜನೆಯಲ್ಲಿ ನಿರ್ಮಿಸಲಾದ ನಿಟ್ಟೂರು ಗ್ರಾ.ಪಂ.ನ ನೂತನ ಕಟ್ಟಡವನ್ನು ಕಾರ್ಮಾಡುವಿನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಕೊಡಗು ಜಿಲ್ಲೆಗೆ ವೈದ್ಯರುಗಳೇ ಬರಲು ಹಿಂದೇಟು ಹಾಕುತ್ತಿದ್ದಾರೆ. ಈಚೆಗೆ ನಾಲ್ವರು ವೈದ್ಯರನ್ನು ಕೊಡಗಿಗೆ ನಿಯೋಜಿಸಲಾಗಿದ್ದು, ಕೇವಲ ಓರ್ವ ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇತರೆ ಮೂವರು ವೈದ್ಯರು ಕೊಡಗಿಗೆ ಬಂದು ವಾಪಾಸ್ಸಾಗಿದ್ದಾರೆ. ಇದೊಂದು ಗಂಭೀರ ಸಮಸ್ಯೆ ಯಾಗಿದ್ದು ಕೊಡಗಿನ ಸಾರ್ವಜನಿಕರು ವೈದ್ಯರನ್ನು ನಿಂದಿಸದೆ, ಹೊಂದಾಣಿಕೆಯೊಂದಿಗೆ ಉತ್ತಮ ಚಿಕಿತ್ಸೆ ಹೊಂದುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ನಿಟ್ಟೂರು ಗ್ರಾ.ಪಂ. ಕಟ್ಟಡ ನಿಧಾನಗತಿ ಪೂರ್ಣಗೊಂಡ ಬಗ್ಗೆ ತನಗೆ ಮಾಹಿತಿ ಇದ್ದು, ಇದೀಗ ಮತ್ತೆ ಜಿಲ್ಲೆಯ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ರೂ.50 ಕೋಟಿ ಮೊತ್ತ ವಿಶೇಷ ಅನುದಾನವನ್ನು ಬಜೆಟ್‍ನಲ್ಲಿ ಕಾದಿರಿಸಲಾಗಿದೆ. ಕಳೆದ ಮೂರು ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಸುಮಾರು ರೂ. 150 ಕೋಟಿ ವಿಶೇಷ ಅನುದಾನ ತಂದಂತಾಗಿದೆ ಎಂದರು.

ತಾನು ಉಸ್ತುವಾರಿ ವಹಿಸಿಕೊಂಡ ನಂತರ ಒಂದೂವರೆ ತಿಂಗಳಿನಲ್ಲಿ ಕೊಡಗಿನ ಬಹುತೇಕ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದ್ದು, ಖುದ್ದು ಸಮಸ್ಯೆಯನ್ನು ಆಲಿಸಿ ಪರಿಹಾರ ಸೂತ್ರ ಕಂಡುಕೊಳ್ಳುತ್ತಿದ್ದೇನೆ. ಮಳೆಗಾಲ ನಂತರ ಇಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಚುರುಕುಗೊಳಿಸಲಾಗುವದು. ಮೂರು ತಾಲೂಕು ಕಚೇರಿಗೂ ದಿಢೀರ್ ಭೇಟಿ ನೀಡುವ ಮೂಲಕ ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಮಟ್ಟದಲ್ಲಿ ಆಗುತ್ತಿರುವ ಕಡತ ವಿಲೇವಾರಿ ನಿಧಾನಗತಿಗೆ ಚುರುಕುಮುಟ್ಟಿಸಿದ್ದೇನೆ. ಅಪರ ಜಿಲಾಧಿಕಾರಿಗಳು ಸಾರ್ವಜನಿಕರಿಗೆ ಶೀಘ್ರ ಕಡತ ವಿಲೇವಾರಿ ನಿಟ್ಟಿನಲ್ಲಿ ತಾಲೂಕು ತಹಶೀಲ್ಧಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಶ್ರೀ ಸಾಮಾನ್ಯನಿಗೆ ಕಂದಾಯ ಇಲಾಖೆ ಮೂಲಕ ಅನ್ಯಾಯವಾದಲ್ಲಿ ಇನ್ನು ಮುಂದೆ ಸಹಿಸುವದಿಲ್ಲ ಎಂದು ಹೇಳಿದರು. ಜಿಲ್ಲೆಯಲ್ಲಿ ರಸ್ತೆ, ಆರೋಗ್ಯ ಇಲಾಖೆ ಹಾಗೂ ಅರಣ್ಯ ಹಕ್ಕುಪತ್ರ ವಿಚಾರವಾಗಿ ಹಲವು ಸಮಸ್ಯೆಗಳನ್ನು ಖುದ್ದು ಅರಿತಿದ್ದೇನೆ ಎಂದು ಹೇಳಿದರು.

ಇದೇ ಸಂದರ್ಭ ಸಚಿವರನ್ನು ಉದ್ಧೇಶಿಸಿ ಮಾಹಿತಿ ನೀಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್‍ಮಾಚಯ್ಯ ಅವರು ಜಿ.ಪಂ. ಹಾಗೂ ಗ್ರಾ.ಪಂ.ಗೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಬರುತ್ತಿಲ್ಲ. 14 ನೇ ಹಣಕಾಸು ಯೋಜನೆಯ ಅನುದಾನ ಇನ್ನೂ ಗ್ರಾ.ಪಂ.ಗೆ ಬಿಡುಗಡೆಗೊಂಡಿಲ್ಲ. ಪಶ್ಚಿಮ ಘಟ್ಟ ಯೋಜನೆ, ಗಡಿನಾಡು ಪ್ರದೇಶ ಅಭಿವೃದ್ಧಿ ಯೋಜನೆ ಹಾಗೂ ಗಿರಿಜನ ಅಭಿವೃದ್ಧಿ ಯೋಜನೆಯ ಅನುದಾನ ಜಿಲ್ಲೆಗೆ ಬಾರದೆ ಇಲ್ಲಿನ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಹೇಳಿದರು. ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್‍ದೇವಯ್ಯ ಅವರು, ಕೇರಳ ಮಾದರಿ ಇಲ್ಲಿನ ಭತ್ತದ ಗದ್ದೆಗೆ ಪುನಶ್ಚೇತನ ಕಾರ್ಯಕ್ರಮ ಹಾಗೂ ಪರಿಹಾರ ಬೇಕಾಗಿದೆ. ಬಾಳೆಲೆ ಕಂದಾಯ ಕಚೇರಿ ಶಿಥಿಲಾವಸ್ಥೆಯಲ್ಲಿದ್ದು ಕಂದಾಯ ಹಾಗೂ ನೆಮ್ಮದಿ ಕೇಂದ್ರ ಒಂದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುವಂತಾಗಬೇಕು ಎಂದು ಹೇಳಿದರು. ಮಾಚಂಗಡ ಸುಜ ಅವರು ಮಾತನಾಡಿ, ಗಿರಿಜನರೇ ಅಧಿಕವಿರುವ ಬಾಳೆಲೆ ಸರ್ಕಾರಿ ಆಸ್ಪತ್ರೆಗೆ ವೈದ್ಯರೇ ಇಲ್ಲ. ಶೀಘ್ರ ವೈದ್ಯರನ್ನು ನೇಮಕಮಾಡಿ ಇಲ್ಲವೆ ಇತರೇ ಆಸ್ಪತ್ರೆಗಳಿಂದ ವಾರಕ್ಕೆರಡು ಬಾರಿಯಾದರೂ ವೈದ್ಯರು ಭೇಟಿ ಮಾಡುವಂತೆ ಪೂರಕ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು, ನೂತನ ಉಸ್ತುವಾರಿ ಮಂತ್ರಿ ಎಲ್ಲ ಗ್ರಾಮೀಣ ಭಾಗಗಳಿಗೂ ನಿರಂತರ ಭೇಟಿ ನೀಡುವ ಮೂಲಕ ಅಭಿವೃದ್ಧಿಪರ ಚಿಂತನೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ 2 ವರ್ಷ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವದು ಹಾಗೂ ಎಲ್ಲೆಡೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಮೂಲಕ ಶೀಘ್ರ ಪರಿಹಾರ ಮಾರ್ಗ ಕಂಡುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭ ನಾಗರಹೊಳೆ ಬುಡಕಟ್ಟು ಕೃಷಿಕರ ಸಂಘದ ಮೂಲಕ ಕೊಡಗಿನಲ್ಲಿಯೇ ಪುನರ್ವಸತಿ ವ್ಯವಸ್ಥೆ ಕಲ್ಪಿಸಲು ಕೋರಿ ಮನವಿ ಪತ್ರವನ್ನು ಆದಿವಾಸಿ ಮುಖಂಡರು ಸಚಿವರಿಗೆ ನೀಡಿದರು.

ಬಾಳೆಲೆ-ಚೆನ್ನಂಗೊಲ್ಲಿ-ಗೋಣಿಕೊಪ್ಪಲು ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಮತ್ತೆ ಭಾರೀ ಹೊಂಡಗಳಾಗುತ್ತಿದೆ. ಮರು ಡಾಂಬರೀಕರಣ ಮಾಡಲು ಸಾರ್ವಜನಿಕರು ಸಚಿವರಿಗೆ ಮನವಿ ಮಾಡಿದರು.

ಗ್ರಾ.ಪಂ.ಅಧ್ಯಕ್ಷೆ ಕಾಡ್ಯಮಾಡ ಪಿ.ಅನಿತಾ ಅವರ ಅಧ್ಯಕ್ಷೆತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ಪ್ರದೀಪ್, ಜಿ.ಪಂ.ಸದಸ್ಯ ಬಾನಂಡ ಪ್ರಥ್ಯು, ತಾ.ಪಂ.ಸದಸ್ಯೆ ಎಂ.ಬಿ.ಸುನೀತಾ, ಗ್ರಾ.ಪಂ.ಉಪಾಧ್ಯಕ್ಷ ಪೆÇೀರಂಗಡ ಪವನ್ ಚಿಟ್ಟಿಯಪ್ಪ, ತಾ.ಪಂ. ಇ.ಓ. ಪಡ್ನೇಕರ್, ಚೆಕ್ಕೇರ ಸೂರ್ಯ, ಮೇಚಂಡ ವಾಸು, ಸೋಮೇಶ್, ಶರೀನ್ ಮುತ್ತಣ್ಣ, ತಿತಿಮತಿ ಗ್ರಾ.ಪಂ.ಅಧ್ಯಕ್ಷ ಶಿವಣ್ಣ, ತಾ.ಪಂ.ಸದಸ್ಯೆ ಪಿ.ಆರ್.ಪಂಕಜ, ಗೋಣಿಕೊಪ್ಪಲಿನ ಕುಲ್ಲಚಂಡ ಗಣಪತಿ, ಹಿರಿಯ ಕಾಂಗ್ರೆಸ್ಸಿಗರಾದ ಪಿ.ಕೆ.ಪೆÇನ್ನಪ್ಪ, ಮಾಜಿ ಜಿ.ಪಂ.ಸದಸ್ಯ ಎಂ.ಎಸ್.ಕುಶಾಲಪ್ಪ, ಸಚಿವರ ಆಪ್ತ ಸಹಾಯಕ ಕದ್ದಣಿಯಂಡ ಹರೀಶ್ ಮುಂತಾದವರು ಪಾಲ್ಗೊಂಡಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಸ್ವಾಗತಿಸಿ, ವಂದಿಸಿದರು.

ನಿಟ್ಟೂರು ಸುವರ್ಣ ಗ್ರಾಮ ಯೋಜನೆ ಅನುಷ್ಟಾನ ವಿಳಂಬಗತಿ ಬಗ್ಗೆ, ಗ್ರಾ.ಪಂ.ಕಟ್ಟಡ ನಿಧಾನಗತಿ ಬಗ್ಗೆ ‘ಶಕ್ತಿ’ ಸವಿವರ ವರದಿ ಮೂಲಕ ಬೆಳಕು ಚೆಲ್ಲಿದ್ದನ್ನು ಇಲ್ಲಿ ನೆನೆಯಬಹುದು. ವೀರಾಜಪೇಟೆ ಶಾಸಕ ಬೋಪಯ್ಯ ಅವರ ಒತ್ತಾಸೆಯಿಂದಾಗಿ ನಿಟ್ಟೂರನ್ನು ಸುವರ್ಣ ಗ್ರಾಮ ಯೋಜನೆಗೆ ಆಯ್ಕೆ ಮಾಡಲಾಗಿತ್ತು. - ವರದಿ:- ಟಿ.ಎಲ್.ಶ್ರೀನಿವಾಸ್