ಒಡೆಯನಪುರ, ನ. 12: ದೇಶ ರಕ್ಷಣೆಗಾಗಿ ದುಡಿಯುತ್ತಿರುವ ಸೈನಿಕರಿಗೆ ಗೌರವ ಕೊಡುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ದೇಶ ರಕ್ಷಣೆಗಾಗಿ ದುಡಿಯುವ ಸೈನಿಕರು ನಿವೃತ್ತಿಯಾದ ನಂತರ ಮಾಜಿ ಸೈನಿಕರ ಸಂಸಾರ ಜೀವನ ನಡೆಸಲು ಕಷ್ಟಪಡುತ್ತಾರೆ. ಮಾಜಿ ಸೈನಿಕರ ಒಳಿತಿಗಾಗಿ ಸೈನಿಕ ಕಲ್ಯಾಣ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದರೂ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಾಲಂಬಿ ಶ್ರೀ ವಿನಾಯಕ ಯುವಕ ಸಂಘದ ಸದಸ್ಯರುಗಳು ಜಿಲ್ಲಾ ಸೈನಿಕ ಕಲ್ಯಾಣ ನಿಧಿಗೆ ಕೈಲಾದಷ್ಟು ಹಣವನ್ನು ಸಂಗ್ರಹಿಸಲು ನಿರ್ಣಹಿಸಿ ಸಂಗ್ರಹಿಸಿದ್ದ ಹಣವನ್ನು ಜಿಲ್ಲಾ ಸೈನಿಕ ಕಲ್ಯಾಣ ನಿಧಿಗೆ ಅರ್ಪಿಸಿದ್ದಾರೆ.
ಯುವಕ ಸಂಘದ ಸದಸ್ಯರುಗಳು ಮೂರೂವರೆ ಸಾವಿರ ರೂಪಾಯಿಗಳನ್ನು ಮಾಲಂಬಿ ಗ್ರಾಮದ ನಿವೃತ್ತ ಸೈನಿಕ ಪಿ.ಎನ್. ಗಂಗಾಧರ್ ಅವರಿಗೆ ಹಸ್ತಾಂತರಿಸಿದರು. ಚೆಕ್ ಸ್ವೀಕರಿಸಿ ಮಾತನಾಡಿದ ನಿವೃತ್ತ ಸೈನಿಕ ಗಂಗಾಧರ್, ಯುವ ಜನಾಂಗದವರಲ್ಲಿ ದೇಶಭಕ್ತಿ ಇದ್ದಲ್ಲಿ ಸಮಾಜ ಅಭಿವೃದ್ಧಿಯಾಗುತ್ತದೆ. ಸೈನಿಕರು ದೇಶಕ್ಕಾಗಿ ದುಡಿಯುತ್ತಾರೆ. ಆದರೆ ಅದೇ ಸೈನಿಕರು ನಿವೃತ್ತಿಯಾದ ನಂತರ ಅವರ ಸಂಸಾರ ಜೀವನ ಸಾಗಿಸಲು ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ಸೈನಿಕ ಕಲ್ಯಾಣ ಸಂಸ್ಥೆಗೆ ಸಂಘ-ಸಂಸ್ಥೆಗಳು ಆರ್ಥಿಕ ಸಹಾಯವನ್ನು ನೀಡುವದರಿಂದ ಮಾಜಿ ಸೈನಿಕರಿಗೆ ಸಹಾಯ ವಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿರುವ ಯುವಕ ಸಂಘದ ಸದಸ್ಯರು ಸೇರಿಕೊಂಡು ಸಂಗ್ರಹ ಮಾಡಿದ ಹಣವನ್ನು ಸೈನಿಕ ಕಲ್ಯಾಣ ನಿಧಿಗೆ ಅರ್ಪಣೆ ಮಾಡಿರುವದು ಶ್ಲಾಘನಿಯ ವಾದದ್ದು. ಯುವಕ ಸಂಘದ ಈ ಸಮಾಜ ಮುಖೇನ ಸೇವೆ ಇತರೆ ಯುವಕ ಸಂಘಗಳಿಗೆ ಮಾದರಿಯಾಗಿದೆ ಎಂದರು.
ಈ ಸಂದರ್ಭ ಶ್ರೀ ವಿನಾಯಕ ಯುವಕ ಸಂಘದ ಅಧ್ಯಕ್ಷ ಲಿಂಗರಾಜ್, ಗ್ರಾಮದ ಪ್ರಮುಖರಾದ ಶಿವಪ್ಪ, ದಿನೇಶ್, ದೇವೇಂದ್ರ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರು ಹಾಜರಿದ್ದರು.