ಮಡಿಕೇರಿ, ಜೂ. 20 : ಅನ್ನಭಾಗ್ಯ ಯೋಜನೆ ಸಮರ್ಪಕ ಅನುಷ್ಠಾನ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ನ್ಯಾಯಬೆಲೆ ಅಂಗಡಿಗಳ ಸೂಕ್ತ ಮೇಲ್ವಿಚಾರಣೆ ಗಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಿತಿಯನ್ನು ಸರ್ಕಾರ ರಚಿಸಿದೆ.
ಅಧಿಕಾರೇತರ ಸದಸ್ಯರನ್ನು ನೇಮಕ ಮಾಡಿದ್ದು, ರಾಜಮ್ಮ ರುದ್ರಯ್ಯ (ಶನಿವಾರಸಂತೆ), ಪುಟ್ಟಲಕ್ಷ್ಮಿ (ಇಬ್ನಿವಳವಾಡಿ), ವಿ.ಪಿ. ಸುರೇಶ್ (ಮೇಕೇರಿ), ಮರ್ವಿನ್ ಲೋಬೋ(ಆರ್ಜಿ ಗ್ರಾಮ), ಬಲ್ಯಮೀದೇರಿರ ನವೀನ್ (ಹೈಸೊಡ್ಲೂರು) ಇವರನ್ನು ನಿಯೋಜಿಸಿದೆ.
ಜಿಲ್ಲಾ ಜಾಗೃತಿ ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು (ಅಧ್ಯಕ್ಷರು), ಜಿ.ಪಂ. ಅಧ್ಯಕ್ಷರು (ಉಪಾಧ್ಯಕ್ಷರು), ಜಿಲ್ಲಾಧಿಕಾರಿ (ಸದಸ್ಯರು), ಜಿ.ಪಂ. ಸಿಇಓ (ಸದಸ್ಯರು) ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಉಪ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಜಿಲ್ಲಾ ಜಾಗೃತಿ ಸಮಿತಿ ಸಭೆಯು ನಗರದ ಆಹಾರ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ನಡೆಯಿತು. ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳ ಕಾರ್ಯನಿರ್ವಹಣೆ, ಮೇಲುಸ್ತುವಾರಿ ಮಾಡುವದು, ಜಿಲ್ಲಾ ಮತ್ತು ತಾಲೂಕು ಮಟ್ಟದ ಸಗಟು ಮಳಿಗೆ ಬಗ್ಗೆ ನಿಗಾವಹಿಸುವದು, ಪಡಿತರ ಚೀಟಿ ಕೋರಿ ಸಲ್ಲಿಸಿರುವ ಹೊಸ ಅರ್ಜಿಗಳನ್ನು ಮತ್ತು ಅನುಮೋದಿತ-ತಿರಸ್ಕøತ ಹಾಗೂ ಕೈಬಿಡಲಾಗಿರುವ ನಕಲಿ ಪಡಿತರ ಚೀಟಿಗಳನ್ನು ಮೇಲುಸ್ತುವಾರಿ ಮಾಡುವದು. ಅನ್ನಭಾಗ್ಯ ಯೋಜನೆ ಬಲಪಡಿಸಲು ಹಾಗೂ ಸಮರ್ಪಕ ಅನುಷ್ಠಾನಕ್ಕೆ ಸಲಹೆಗಳನ್ನು ನೀಡುವದು ಜಾಗೃತಿ ಸಮಿತಿಯ ಕಾರ್ಯಚಟುವಟಿಕೆಯಾಗಿದೆ.
ಸಭೆಯಲ್ಲಿ ಸಮಿತಿ ಸದಸ್ಯ ವಿ.ಪಿ. ಶಶಿಧರ್ ಅವರು ಜಿಲ್ಲೆಯಲ್ಲಿ ಎಷ್ಟು ನ್ಯಾಯಬೆಲೆ ಅಂಗಡಿಗಳಿವೆ. ಸಂಚಾರಿ ನ್ಯಾಯಬೆಲೆ ಅಂಗಡಿಗಳೆಷ್ಟು, ಮತ್ತಿತರ ಬಗ್ಗೆ ಮಾಹಿತಿ ಪಡೆದರು. ಇದಕ್ಕೆ ಮಾಹಿತಿ ನೀಡಿದ ಆಹಾರ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ್ ನಾಯಕ್ ಜಿಲ್ಲೆಯಲ್ಲಿ ಒಟ್ಟು 290 ನ್ಯಾಯಬೆಲೆ ಅಂಗಡಿಗಳಿದ್ದು, ಎರಡು ಸಂಚಾರಿ ವಾಹನಗಳ ಮೂಲಕ 20ಕ್ಕೂ ಹೆಚ್ಚು ಕೇಂದ್ರಗಳಿಗೆ ಪಡಿತರ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸುವ ಆಹಾರ ಧಾನ್ಯ ಪೋಲಾಗದಂತೆ ನೋಡಿಕೊಳ್ಳಬೇಕು. ಗೋಧಿಗಿಂತ ಅಕ್ಕಿಯನ್ನು ಹೆಚ್ಚು ವಿತರಿಸುವಂತಾಗಬೇಕು ಎಂದು ವಿ.ಪಿ. ಸುರೇಶ್ ಸಲಹೆ ಮಾಡಿದರು.
ಸದಸ್ಯರಾದ ರಾಜಮ್ಮ ರುದ್ರಯ್ಯ, ಪುಟ್ಟಲಕ್ಷ್ಮಿ, ಮರ್ವಿನ್ ಲೋಬೋ ಅವರು ಸಂಚಾರಿ ವಾಹನದ ಮೂಲಕ ವಿತರಣೆಯಾಗುವ ಪಡಿತರ ಬಗ್ಗೆ ಗ್ರಾಮಗಳಿಗೆ ಮೊದಲೇ ಮಾಹಿತಿ ದೊರೆಯುವಂತಾಗಬೇಕು ಎಂದು ಸಲಹೆ ಮಾಡಿದರು.