ಶ್ರೀಮಂಗಲ, ಆ. 18: ಕೊಡಗು ಜಿಲ್ಲಾ ಬೆಳೆಗಾರ ಒಕ್ಕೂಟದಿಂದ ಜಿಲ್ಲೆಯ ಕಾಫಿ ಬೆಳೆಗಾರರ ಸಮಸ್ಯೆ ಪರಿಹರಿಸಲು ಹಾಗೂ ವಿವಿಧ ಬೇಡಿಕೆ ಈಡೇರಿಸಲು ಶ್ರೀಮಂಗಲದಲ್ಲಿ ಉಸ್ತುವಾರಿ ಸಚಿವ ಎಂ.ಆರ್. ಸೀತರಾಮ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಜಿಲ್ಲಾ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ನೇತೃತ್ವದಲ್ಲಿ ಸಲ್ಲಿಸಲಾದ ಬೇಡಿಕೆಗಳ ಬಗ್ಗೆ ವಿಶೇಷ ಗಮನ ಹರಿಸುವಂತೆ ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಿದ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿದ್ದಾಟಂಡ ಟಿ. ಪ್ರದೀಪ್, ಜಿ.ಪಂ. ಸದಸ್ಯ ಮುಕ್ಕಾಟೀರ ಶಿವು ಮಾದಪ್ಪ, ಅವರು ಬೆಳೆಗಾರರ ಸಮಸ್ಯೆ ಬಗೆಹರಿಸಲು ಮನವಿ ಮಾಡಿದರು.

ಮುಖ್ಯವಾಗಿ ಕೊಡಗು ಜಿಲ್ಲೆ ಕಾವೇರಿ-ಲಕ್ಷ್ಮಣ ತೀರ್ಥ ನದಿ ಪಾತ್ರದ ಪ್ರದೇಶವಾಗಿದ್ದು, ಭತ್ತದ ಕೃಷಿಯಿಂದ ಈ ನದಿಗಳ ಹರಿಯುವಿಕೆಗೆ ತುಂಬಾ ಅನುಕೂಲವಾಗಿದೆ. ಭತ್ತದ ಕೃಷಿ ಭೂಮಿಯಲ್ಲಿ ಕೃಷಿ ಸಮಯದ ಮಳೆಗಾಲದ ಆರು ತಿಂಗಳು ಮಳೆ ನೀರನ್ನು ಹಿಡಿದಿಟ್ಟುಕೊಂಡು ಭೂಮಿಯಲ್ಲಿ ಇಂಗಿಸಿ ಅಂತರ್ಜಲ ಹೆಚ್ಚಿಸಿ ನದಿಗಳಿಗೆ ಬಿಡುಗಡೆ ಮಾಡುತ್ತದೆ. ಆದ್ದರಿಂದ ಕೊಡಗಿನ ಭತ್ತದ ಗದ್ದೆಗಳು ಪಾಳು ಬಿಡುವದನ್ನು ತಪ್ಪಿಸಿ ಲಾಭದಾಯಕವಾಗಿ ಮಾಡಲು ಕೇರಳ ಮಾದರಿಯಲ್ಲಿ ಏಕರೆಗೆ ಕನಿಷ್ಟ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುವದು.

2014-15 ರ ಸಾಲಿನಲ್ಲಿ ಅತಿವೃಷ್ಟಿಗೆ ಜಿಲ್ಲೆಯ 120 ಗ್ರಾಮಗಳು ತುತ್ತಾಗಿ ಶೆ 50 ಕ್ಕಿಂತ ಹೆಚ್ಚು ಕಾಫಿ ಫಸಲು ಸೇರಿದಂತೆ ಭತ್ತ ಹಾಗೂ ತೋಟಗಾರಿಕಾ ಬೆಳೆಗಳು ನಷ್ಟವಾಗಿರುತ್ತದೆ.

ಈ ಸಂದರ್ಭ ಪರಿಹಾರಕ್ಕಾಗಿ ಬೆಳೆಗಾರರು ಅರ್ಜಿ ಸಲ್ಲಿಸಿದ್ದು, ಇಂತಹ ಅರ್ಜಿಗಳ ಪರಿಹಾರಕ್ಕಾಗಿ ರೂ. 22 ಕೋಟಿ ಅನುದಾನಕ್ಕಾಗಿ ಜಿಲ್ಲಾಡಳಿತ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ . ಆದರೆ ಅನುದಾನ ಬಿಡುಗಡೆ ಆಗದ ಕಾರಣ ಇದುವರೆಗೆ ಪರಿಹಾರ ವಿತರಣೆ ಆಗಿಲ್ಲ. ಕೂಡಲೇ ಈ ಅನುದಾನವನ್ನು ಬಿಡುಗಡೆ ಮಾಡಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು.

ಕೊಡಗು ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು. 2016 ರ ಬೇಸಿಗೆಯಲ್ಲಿ ಜಿಲ್ಲೆಯಾದ್ಯಂತ ದಾಖಲೆ ಪ್ರಮಾಣದ ತಾಪಮಾನದಿಂದ ಬರಗಾಲಕ್ಕೆ ಜಿಲ್ಲೆ ತುತ್ತಾಗಿದೆ. ಇದರಿಂದ ಕಾಫಿ, ಕರಿಮೆಣಸು, ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ನಷ್ಟವಾಗಿದೆ. 2016-17 ರ ಸಾಲಿನಲ್ಲಿ ಅಂದರೆ ಮುಂದಿನ ಫಸಲು ಕಾಫಿ,ಶೇ 60 ರಿಂದ 70, ಕರಿಮೆಣಸು ಫಸಲು ಶೇ 80 ರಷ್ಟು ಕುಂಠಿತವಾಗಲಿದೆ. ಪ್ರಸಕ್ತ ವರ್ಷದ ಮಳೆಗಾಲದಲ್ಲಿಯೂ ಜಿಲ್ಲೆಯ ಬಹುತೇಕ ಕಡೆ ಸಾಮಾನ್ಯ ಮಳೆ ಆಗದೆ, ಮಳೆ ಕೊರತೆ ಎದುರಾಗಿ ಬೆಳೆಗಳಿಗೆ ನಷ್ಟವಾಗಿದೆ. ಆದ್ದರಿಂದ ಜಿಲ್ಲೆಯ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು.

ಸಹಕಾರ ಬ್ಯಾಂಕುಗಳಿಂದ ಏಕರೆಗೆ 35 ಸಾವಿರದಂತೆ ಬಡ್ಡಿ ರಹಿತ ಸಾಲ ರೂ 3 ಲಕ್ಷ ಮಿತಿಯಲ್ಲಿ ನೀಡಲಾಗುತ್ತಿದೆ. ಆದರೆ ಇದರಿಂದ ಸಣ್ಣ ಹಿಡುವಳಿದಾರರಿಗೆ ಪೂರ್ಣ ಪ್ರಮಾಣದ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಏಕರೆಗೆ ಕನಿಷ್ಟ 75 ಸಾವಿರದವರೆಗೆ ಸಾಲ ನೀಡು ವಂತಾದರೆ ಸಣ್ಣ ರೈತರ ಸ್ವಾವಲಂಬನೆ ಹಾಗೂ ಅಭಿವೃದ್ಧಿಗೆ ಸಹಕಾರ ನೀಡಿದಂತಾಗುತ್ತದೆ. ಕೊಡಗು ಜಿಲ್ಲೆಯಲ್ಲಿ ವಾಡಿಕೆಯಂತೆ ಆರು ತಿಂಗಳ ಕಾಲ ಮಳೆಗಾಲವಿರುತ್ತದೆ. ಆದ್ದರಿಂದ ರಸ್ತೆಗಳನ್ನು ನಿರ್ವಹಣೆ ಮಾಡಲು ಸಿಬ್ಬಂದಿಗಳು ಇರುವದಿಲ್ಲ. ಇದರಿಂದ ರಸ್ತೆಗಳಲ್ಲಿ ನೀರು ನಿಂತು ಹಾಗೂ ಚರಂಡಿ ನಿರ್ವಹಣೆ ಇಲ್ಲದೆ ಬಹುಬೇಗ ಹಾಳಾಗುತ್ತದೆ. ಆದ್ದರಿಂದ ಹಿಂದಿನಂತೆ ಲೋಕೋಪಯೋಗಿ ಇಲಾಖೆಗೆ ಗ್ಯಾಂಗ್‍ಮೆನ್‍ಗಳನ್ನು ನೇಮಕ ಮಾಡಿ ರಸ್ತೆ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದೆ. ಈ ಸಂದರ್ಭ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಒಕ್ಕೂಟದ ಸ್ಥಾಪಕ ಸದಸ್ಯ ಮಾಣೀರ ಮುತ್ತಪ್ಪ, ನಿರ್ದೇಶಕರಾದ ಕೈಬುಲೀರ ಎಂ. ಹರೀಶ್, ಟಿ. ಶೆಟ್ಟಿಗೇರಿ ಗ್ರಾ.ಪಂ. ಸದಸ್ಯ ಚೊಟ್ಟೆಯಂಡಮಾಡ ಉದಯ, ಪ್ರಮುಖರಾದ ಅಪ್ಪಚ್ಚಂಗಡ ಮೋಟಯ್ಯ, ಮತ್ತಿತರರು ಹಾಜರಿದ್ದರು.