ಮಡಿಕೇರಿ, ಡಿ.5 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರು ಯಾರು ಎನ್ನುವದನ್ನು ಪಕ್ಷದ ಹೈಕಮಾಂಡ್ ಸಧ್ಯದಲ್ಲಿಯೇ ನಿರ್ಧರಿಸಲಿದ್ದು, ಅಲ್ಲಿಯವರೆಗೆ ಯಾರೂ ಕೂಡ ಪರ-ವಿರೋಧ ಹೇಳಿಕೆಗಳನ್ನು ನೀಡಬಾರದೆಂದು ಜಿಲ್ಲಾ ಕಾಂಗ್ರೆಸ್ ಪ್ರಬಾರ ಅಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಲು ಆಕಾಂಕ್ಷಿಗಳಾಗಿರುವವರು ಲಿಖಿತ ರೂಪದಲ್ಲಿ ಜಿಲ್ಲಾ ಕಾಂಗ್ರೆಸ್‍ಗೆ ಅರ್ಜಿಯನ್ನು ನೀಡಿದರೆ ಅದನ್ನು ಕೆಪಿಸಿಸಿ ಗೆ ಕಳುಹಿಸಿ ಕೊಡಲಾಗುವದು ಮತ್ತು ನೂತನ ಅಧ್ಯಕ್ಷರ ನೇಮಕದ ವರೆಗೆ ತಾವೇ ಪ್ರಬಾರ ಅಧ್ಯಕ್ಷರಾಗಿ ಮುಂದುವರೆಯುತ್ತಿರುವದಾಗಿ ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಆಂತರಿಕ ವಿಚಾರಗಳನ್ನು ಪತ್ರಿಕೆಗಳ ಮೂಲಕ ಬಹಿರಂಗ ಪಡಿಸಿ ಪಕ್ಷಕ್ಕೆ ಮುಜುಗರ ಉಂಟು ಮಾಡುವವರ ಬಗ್ಗೆ ಲಿಖಿತ ರೂಪದ ಪುಕಾರನ್ನು ಡಿಸಿಸಿಯಿಂದ ಕೆಪಿಸಿಸಿ ಗೆ ಸಲ್ಲಿಸಲಾಗುವದೆಂದು ಅವರು ಎಚ್ಚರಿಕೆ ನೀಡಿದ್ದಾರೆ. ಪಕ್ಷದ ವೇದಿಕೆ ಬಿಟ್ಟು ಇತರ ವೇದಿಕೆ ಅಥವಾ ಸಂಘಟನೆಗಳ ಮೂಲಕ ಪಕ್ಷದ ಮತ್ತು ಸರಕಾರದ ವಿರುದ್ಧ ಟೀಕೆ ಮಾಡುವ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಕೆಪಿಸಿಸಿಗೆ ಕಳುಹಿಸಿ ಕೊಡಲಾಗುವದು.
ಐಗೂರು ಮಸೀದಿಯಲ್ಲಿ ಪವಿತ್ರ ಕುರ್‍ಅನ್ ಗ್ರಂಥವನ್ನು ಸುಟ್ಟು ಹಾಕಿರುವ ಮತ್ತು ವಕೀಲ ಪದ್ಮನಾಭ ಅವರ ಕಾರಿಗೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳನ್ನು ಪೊಲೀಸರು ತಕ್ಷಣ ಬಂಧಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿರುವದಾಗಿ ಟಿ.ಪಿ.ರಮೇಶ್ ತಿಳಿಸಿದ್ದಾರೆ.
ಸದಸ್ಯತ್ವ ಪಡೆಯಲು ಕರೆ
ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷರ ಮತ್ತು ಜಿಲ್ಲಾಧ್ಯಕ್ಷರ ಚುನಾವಣೆ ನಡೆಯಲಿದ್ದು, ಸದಸ್ಯತ್ವ ನೋಂದಣಿಗೆ ತಾ.12 ಕೊನೆಯ ದಿನವಾಗಿದೆ. ಅದರೊಳಗೆ ಯುವ ಸಮೂಹ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿರುವ ಟಿ.ಪಿ.ರಮೇಶ್ ತಾ.8 ರಿಂದ 11 ರವರೆಗೆ ನೋಂದಣಿಗೆ ಅವಕಾಶವಿದೆ ಎಂದು ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ ಸದಸ್ಯತ್ವ ನೋಂದಣಿ ನಡೆಯಲಿದ್ದು, ಮತದಾರರ ಗುರುತಿನ ಚೀಟಿ ಮತ್ತು ಭಾವಚಿತ್ರವನ್ನು ತರಬೇಕು. ಈ ಪ್ರಕ್ರಿಯೆಗೆ ಎಲ್ಲಾ ಕಾಂಗ್ರೆಸ್ ನಾಯಕರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಗ್ರಾ.ಪಂ ಮಟ್ಟದ ಕಾಂಗ್ರೆಸ್ ಅಧ್ಯಕ್ಷರುಗಳು ವಿಶೇಷ ಆಸಕ್ತಿ ವಹಿಸಬೇಕೆಂದು ಟಿ.ಪಿ.ರಮೇಶ್ ಕೋರಿದ್ದಾರೆ.