ಸೋಮವಾರಪೇಟೆ, ಡಿ. 19: ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ಇಲ್ಲಿನ ಕಸಾಪ ಭವನದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿ, ಜನವರಿ 10 ಮತ್ತು 11ರಂದು ಕುಶಾಲನಗರದ ರೈತ ಭವನದಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕು ಮತ್ತು ಹೋಬಳಿ ಮಟ್ಟದ ಎಲ್ಲಾ ಸಮಿತಿಗಳು ತಮ್ಮ ಜವಾಬ್ದಾರಿ ಯನ್ನು ಅರಿತು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಈಗಾಗಲೆ ಎಲ್ಲಾ ಸಮಿತಿಗಳು ಹಾಗೂ ಉಪಸಮಿತಿಗಳನ್ನು ರಚಿಸಲಾಗಿದ್ದು, ಕುಶಾಲನಗರದಲ್ಲಿ ಸಮ್ಮೇಳನದ ಸಿದ್ಧತೆಗೆ ಕಚೇರಿಯನ್ನು ಸಹ ತೆರೆಯಲಾಗಿದೆ. ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕಲಾ ತಂಡಗಳ ಪ್ರದರ್ಶನ ಮತ್ತು ಮೆರವಣಿಗೆ, ಕವಿಗೋಷ್ಠಿ, ವಿಚಾರಗೋಷ್ಠಿ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವಸ್ತು ಪ್ರದರ್ಶನ ಮತ್ತು ಮಾರಾಟ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.

ಅಧ್ಯಕ್ಷತೆಯನ್ನು ಸಾಹಿತ್ಯ ಪರಿಷತ್‍ನ ತಾಲೂಕು ಘಟಕದ ಅಧ್ಯಕ್ಷ ಎಚ್.ಜೆ. ಜವರಪ್ಪ ವಹಿಸಿದ್ದರು. ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಡಿ. ವಿಜೇತ್, ರಾಣಿ ರವೀಂದ್ರ, ಖಜಾಂಚಿ ಡಿ.ಪಿ.ಲೋಕೇಶ್ ಉಪಸ್ಥಿತರಿದ್ದರು.

ಸಭೆಗೂ ಮುನ್ನ ಕಸಾಪ ಸದಸ್ಯರಾಗಿದ್ದ ಹಿರಿಯ ಸಹಕಾರಿ ಧುರೀಣ ಕೊಡ್ಲಿಪೇಟೆಯ ಹೆಚ್.ಎಸ್. ಗಿರೀಶ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮೌನಾಚರಿಸಲಾಯಿತು.