ಮಡಿಕೇರಿ, ಆ. 31: ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆ ಮತ್ತು ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ಸ್ಥಳೀಯ ಶಾಸಕರುಗಳು ಪಾಲ್ಗೊಳ್ಳಲು ಸಾಧ್ಯವಾಗುವ ದಿನದಂತೇ ನಡೆಸಬೇಕೆನ್ನುವ ನಿಯಮವಿದ್ದರೂ ಕೊಡಗಿನ ಶಾಸಕರುಗಳನ್ನು ಕಡೆಗಣಿಸಿ ಸಭೆ ನಡೆಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ದಬ್ಬಾಳಿಕೆಯನ್ನು ಮೆರೆದಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎಂ.ಲೋಕೇಶ್ ಅವರು ಜಿಲ್ಲೆಯ ಶಾಸಕರು ಉಸ್ತುವಾರಿ ಸಚಿವರಿಗೆ ಅಸಹಕಾರ ನೀಡುತ್ತಿದ್ದಾರೆ ಎಂದು ನೀಡಿರುವ ಹೇಳಿಕೆ ಖಂಡನೀಯವೆಂದು ತಿಳಿಸಿದ್ದಾರೆ. ಶಾಸಕರಾದ ಕೆ.ಜಿ. ಬೋಪಯ್ಯ ಅವರು ದೂರವಾಣಿ ಮೂಲಕ ಸಚಿವರಿಗೆ ಕರೆ ಮಾಡಿ ಇತರ ಕಾರ್ಯಕ್ರಮಗಳು ಇರುವ ಕಾರಣ ಮತ್ತು ಪ್ರತಿ ಶುಕ್ರವಾರ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಬೇಕಾಗಿರುವದರಿಂದ ಸಭೆಯಲ್ಲಿ ಪಾಲ್ಗೊಳ್ಳುವದಿಲ್ಲವೆಂದು ಮುಂಚಿತವಾಗಿ ತಿಳಿಸಿದ್ದರು. ಆದರೆ ಶಾಸಕರ ಮನವಿಯನ್ನು ಕಡೆಗಣಿಸಿದ ಸಚಿವರು ಕಾಂಗ್ರೆಸ್ ಸರಕಾರದ ದರ್ಪದ ರಾಜಕಾರಣವನ್ನು ಪ್ರದರ್ಶಿಸಿದ್ದಾರೆ ಎಂದು ಆಪಾದಿಸಿದ್ದಾರೆ.
ಜಿಲ್ಲೆಯಲ್ಲಿ ಬಿಜೆಪಿ ಶಾಸಕರುಗಳು ಆಯ್ಕೆಯಾದಾಗಿನಿಂದ ಈ ರೀತಿಯ ನಿರ್ಲಕ್ಷ್ಯ ಮನೋಭಾವಗಳು ಕಾಂಗ್ರೆಸ್ ಆಡಳಿತದಿಂದ ಕಂಡು ಬಂದಿದೆ. ವಾರದ ಪ್ರತೀ ಶುಕ್ರವಾರ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ಶಾಸಕದ್ವಯರಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾಡುತ್ತಿದ್ದು, ಇದೇ ಕಾರಣದಿಂದ ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಈ ಕುರಿತು ಮೊದಲೇ ಮಾಹಿತಿ ನೀಡಿದ ಶಾಸಕರು ದಿನಾಂಕವನ್ನು ಬದಲಾಯಿಸುವಂತೆ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದ್ದರು. ಆದರೆ ಇದನ್ನೂ ಮೀರಿ ಸಭೆ ನಡೆಸುವ ಮೂಲಕ ಸಚಿವರು ಶಾಸಕರುಗಳ ಹಕ್ಕಿಗೆ ಚ್ಯುತಿ ಉಂಟು ಮಾಡುವ ಕಾರ್ಯ ಮಾಡಿದ್ದಾರೆ ಎಂದು ಅವರು ಹೇಳಿದ್ದರು.
ಅಭಿವೃದ್ಧಿ ಕಾರ್ಯಗಳ ಸಭೆ ಜಿಲ್ಲಾ ಉಸ್ತುವಾರಿ ಸಚಿವರ ಪಕ್ಷದ ಕಾರ್ಯಕ್ರಮದಂತೆ ನಡೆದ ಕಾರಣ ಜಿಲ್ಲೆಯ ಯಾವದೇ ಜನಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ವಿಷಯ ಆಧಾರಿತ ರಾಜಕಾರಣ ಮಾಡಬೇಕೆ ಹೊರತು ತಮ್ಮೊಳಗಿನ ಹುಳುಕನ್ನು ಗುಟ್ಟಾಗಿ ಇಟ್ಟುಕೊಂಡು ಕೇವಲ ಪ್ರಚಾರದ ದೃಷ್ಟಿಯಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹೇಳಿಕೆಗಳನ್ನು ನೀಡುವದನ್ನು ನಿಲ್ಲಿಸಬೇಕು ಅಥವಾ ಹೇಳಿಕೆಯ ವಿಚಾರದ ಕುರಿತು ಆಳವಾಗಿ ಆಲೋಚಿಸಿ ಮಾತನಾಡುವದು ಸೂಕ್ತವೆಂದು ಸುಬ್ರಮಣ್ಯ ಉಪಾಧ್ಯಾಯ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಶೀಘ್ರ ವೈದ್ಯರನ್ನು ನೇಮಕ ಮಾಡುವದಾಗಿ ಭರವಸೆ ನೀಡಿ ತಿಂಗಳುಗಳೇ ಕಳೆದಿದೆ. ಆದರೆ ಇಲ್ಲಿಯವರೆಗೆ ಯಾವದೇ ವೈದ್ಯರ ನೇಮಕಾತಿಯಾಗುತ್ತಿಲ್ಲ. ರಾಜ್ಯ ಕಾಂಗ್ರೆಸ್ ಸರಕಾರದ ದಬ್ಬಾಳಿಕೆಯ ಆಡಳಿತದಿಂದ ಬೇಸತ್ತ ವೈದ್ಯರು ಜಿಲ್ಲೆಯನ್ನು ತೊರೆಯುತ್ತಿರುವ ಬೆಳವಣಿಗೆಗಳು ಕಂಡು ಬಂದಿದೆ. ಆದರೆ ನಾಪೋಕ್ಲುವಿನ ವೈದ್ಯರೊಬ್ಬರು ಸೇರಿದಂತೆ ಕಾಂಗ್ರೆಸ್ನ ಕೃಪಾ ಕಟಾಕ್ಷಕ್ಕೆ ಒಳಗಾಗಿರುವ ವೈದ್ಯರುಗಳು ಮಾತ್ರ ಜಿಲ್ಲೆಯಲ್ಲೇ ಠಿಕಾಣಿ ಹೂಡಿದ್ದಾರೆ ಎಂದು ಆರೋಪಿಸಿರುವ ಸುಬ್ರಮಣ್ಯ ಉಪಾಧ್ಯಾಯ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಟೀಕಿಸಿದ್ದಾರೆ.
ಬಿಜೆಪಿ ಶಾಸಕರುಗಳು ಪ್ರತಿಭಟನೆಗಳಿಗಷ್ಟೇ ಸೀಮಿತವೆಂದು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹೇಳಿಕೆ ನೀಡಿರುವದು ಅತ್ಯಂತ ಖಂಡನೀಯ. ಶಾಸಕರು ಜನಪರವಾಗಿ ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ಹೋರಾಟಗಳನ್ನು ನಡೆಸುತ್ತಿದ್ದು, ರಾಜ್ಯ ಸರಕಾರ ಮಾಡುವ ತಪ್ಪುಗಳ ವಿರುದ್ಧ ಇನ್ನು ಮುಂದೆಯೂ ಹೋರಾಟಗಳು ನಡೆಯಲಿದೆ ಎಂದು ಸುಬ್ರಮಣ್ಯ ಉಪಾಧ್ಯಾಯ ಸ್ಪಷ್ಟಪಡಿಸಿದ್ದಾರೆ. ಕೊಡಗಿನ ನೆಲ, ಜಲ, ಸಂಸ್ಕøತಿಗೆ ದಕ್ಕೆಯಾದಾಗ ಅದರ ವಿರುದ್ಧ ಪ್ರತಿಭಟನೆಗಳನ್ನು ನಡೆಸುವದು ಅನಿವಾರ್ಯ. ಆದರೆ ಕೊಡಗಿನವರೇ ಆಗಿರುವ ಕೆ.ಎಂ. ಲೋಕೇಶ್ ಅವರಿಗೆ ಈ ಬಗ್ಗೆ ತಿಳಿಯದಿರುವದು ದುರದೃಷ್ಟಕರ ಎಂದು ವ್ಯಂಗ್ಯವಾಡಿದ್ದಾರೆ.