ಕೂಡಿಗೆ, ಆ. 28: ವಿಶ್ವೇಶ್ವರಯ್ಯ ತಾಂತ್ರಿಕ ವಸ್ತು ಸಂಗ್ರಹಾಲಯ, ಬೆಂಗಳೂರು, ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಸಮಿತಿ, ಕಲ್ಕತ್ತಾ ಮತ್ತು ಡಿಎಸ್‍ಇಆರ್‍ಟಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಯಟ್ ಸಂಸ್ಥೆಯ ಪ್ರಾಂಶುಪಾಲ ಎಸ್. ದೊಡ್ಡಮಲ್ಲಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ಅವಕಾಶಗಳನ್ನು ಬಳಸಿಕೊಳ್ಳುವದರ ಮೂಲಕ ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬರಬೇಕಾಗಿದೆ. ವಿದ್ಯಾರ್ಥಿಗಳು ತಮ್ಮಲ್ಲಿ ಸ್ವಯಂ ಆಸಕ್ತಿ ಬೆಳೆಸಿಕೊಂಡಾಗ ಮಾತ್ರ ಶಿಕ್ಷಕರು ಮಾರ್ಗದರ್ಶನ ನೀಡಲು ಸಾಧ್ಯ ಎಂದರು.

ಕಾರ್ಯಕ್ರಮ ಸಂಯೋಜಕ ವಿ. ವಿಜಯ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಫರ್ಧೆಯಲ್ಲಿ ಜಿಲ್ಲೆಯ ಮೂರು ತಾಲೂಕುಗಳಿಂದ ಒಟ್ಟು 19 ವಿದ್ಯಾರ್ಥಿಗಳು ಪಾಲ್ಗೊಂಡು ವಿಚಾರ ಮಂಡನೆ ಮಾಡಿದರು. ಸುಸ್ಥಿರ ಆಹಾರ ಭದ್ರತೆಗಾಗಿ ಬೇಳೆ ಕಾಳುಗಳು, ಸಾಧ್ಯತೆ ಮತ್ತು ಸವಾಲುಗಳು ವಿಚಾರಗೋಷ್ಠಿಯ ವಿಷಯವಾಗಿತ್ತು.

ಪ್ರಥಮ ಸ್ಥಾನವನ್ನು ಗಳಿಸಿದ ವೀರಾಜಪೇಟೆ ತಾಲೂಕಿನ ಅರವತೊಕ್ಲು ಸರ್ವ ದೈವತಾ ಪ್ರೌಢಶಾಲೆಯ ವಿದ್ಯಾರ್ಥಿ ಎಂ.ಎಂ. ಸಾಧಿಕ್ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾದರು. ಅಮ್ಮತ್ತಿ ಗುಡ್‍ಶೆಫರ್ಡ್ ಪ್ರೌಢಶಾಲೆಯ ರಿನ್ಸಿಪ್ರಿಯಾಂಕ ದ್ವಿತೀಯ, ವೀರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ ಗ್ರೇಟಲ್ ಡಿಸೋಜ ತೃತೀಯ ಬಹುಮಾನ ಪಡೆದುಕೊಂಡರು. ಅಲ್ಲದೆ ಕೊಡಗರಹಳ್ಳಿ ಶಾಂತಿನಿಕೇತನ ಪ್ರೌಢಶಾಲೆಯ ಲಕ್ಕಿ ಸೋಮಣ್ಣ, ಭಾಗಮಂಡಲ ಶ್ರೀ ಕಾವೇರಿ ಪ್ರೌಢಶಾಲೆಯ ಪ್ರಶಾಂತ್, ಬಸವನಹಳ್ಳಿ ಸ.ಪ್ರೌ. ಶಾಲೆಯ ಮುಬೀನಾ ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡರು.

ವಿವಿಧ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಮೌಲ್ಯಮಾಪಕರಾಗಿ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಮಾರ್ಗದರ್ಶಿ ಶಿಕ್ಷಕರು ಮತ್ತು ಪೋಷಕರು ಇದ್ದರು.