ಸೋಮವಾರಪೇಟೆ, ಜ. 30: ಇಲ್ಲಿನ ಇಂದಿರಾಗಾಂಧಿ ಅಭಿಮಾನಿಗಳ ಸಂಘ ಹಾಗೂ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಆರ್ಎಂಸಿ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾಟದಲ್ಲಿ ಹೊಸತೋಟದ ರೈಸಿಂಗ್ ಸ್ಟಾರ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಫೈನಲ್ ಪಂದ್ಯಾಟಕ್ಕೆ ಹೊಸತೋಟದ ರೈಸಿಂಗ್ ಸ್ಟಾರ್ ಹಾಗು ಸಿದ್ಧಲಿಂಗಪುರದ ತಂಡಗಳು ಪ್ರವೇಶಿಸಿದ್ದವು. ಸಿದ್ಧಲಿಂಗಪುರದ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಸೆಮಿಫೈನಲ್ನಲ್ಲಿ ಪರಾಭವಗೊಂಡ ತಣ್ಣೀರುಹಳ್ಳ ತಂಡವು ಹಾನಗಲ್ನ ಕಾನ್ವೆಂಟ್ಬಾಣೆ ತಂಡವನ್ನು ಮಣಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಪಂದ್ಯಾಟದಲ್ಲಿ ಜಿಲ್ಲೆಯ ಒಟ್ಟು 10 ತಂಡಗಳು ಪಾಲ್ಗೊಂಡಿದ್ದವು. ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಇದೇ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು.
30ನೇ ವರ್ಷದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದ ಫೈನಲ್ಗೆ ಸೋಮವಾರಪೇಟೆ ಅರುಣ್ ಫ್ರೆಂಡ್ಸ್ ‘ಎ’ ಮತ್ತು ಕುಶಾಲನಗರದ ಜೆಬಿಎಸ್ಸಿ ಸಲಾಂ ತಂಡ ಪ್ರವೇಶಿಸಿವೆ. ಭಾನುವಾರದಂದು ನಡೆದ ಪ್ರಥಮ ಸೆಮಿಫೈನಲ್ ಪಂದ್ಯಾಟದಲ್ಲಿ ಸೋಮವಾರಪೇಟೆಯ ಅರುಣ್ ಫ್ರೆಂಡ್ಸ್ ‘ಎ’ ತಂಡವು ಇಂದಿರಾಗಾಂಧಿ ಅಭಿಮಾನಿಗಳ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯಾಟದಲ್ಲಿ ಅರುಣ್ ಫ್ರೆಂಡ್ಸ್ ‘ಬಿ’ ತಂಡವನ್ನು ಕುಶಾಲನಗರದ ಜೆಬಿಎಸ್ಸಿ ಸಲಾಂ ತಂಡವು 23-14 ಅಂಕಗಳಿಂದ ಮಣಿಸಿ ಎರಡನೇ ತಂಡವಾಗಿ ಫೈನಲ್ ಪ್ರವೇಶಿಸಿತು. ಅರುಣ್ ಫ್ರೆಂಡ್ಸ್ ‘ಬಿ’ ತಂಡವು ಇಂದಿರಾಗಾಂಧಿ ಅಭಿಮಾನಿಗಳ ಸಂಘದ ತಂಡವನ್ನು 22-15 ಅಂಕಗಳಿಂದ ಮಣಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು. ಕಬಡ್ಡಿ ಪಂದ್ಯಾಟಕ್ಕೆ ಒಟ್ಟು 14 ತಂಡಗಳು ಪಾಲ್ಗೊಂಡಿದ್ದವು. ತೀರ್ಪುಗಾರರಾಗಿ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ನ ಆನಂದ, ಪ್ರವೀಣ, ಬಿದ್ದಪ್ಪ, ಇಸಾಕ್ ಹಾಗು ಅಮೃತ್ ಕಾರ್ಯ ನಿರ್ವಹಿಸಿದರು.