ಕೂಡಿಗೆ, ಜ. 19: ಕೊಡಗು ಜಿಲ್ಲಾಮಟ್ಟದ ಖೇಲೋ ಇಂಡಿಯಾ ಕ್ರೀಡಾಕೂಟ ಕೂಡಿಗೆ ಕ್ರೀಡಾಶಾಲೆಯಲ್ಲಿ ನಡೆಯಿತು. ರಾಷ್ಟ್ರೀಯ ಆರ್.ಡಿ. ಚಾಂಪಿಯನ್ ರವಿ ತಮ್ಮಯ್ಯ ಜ್ಯೋತಿ ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರಕಾರಗಳು ಈ ರೀತಿಯ ಕ್ರೀಡಾಕೂಟಗಳನ್ನು ಆಯೋಜಿಸಿದಲ್ಲಿ ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಗುರುತಿಸಲು ಸಹಕಾರಿಯಾಗುತ್ತಿದೆ ಎಂದರು.
ಮುಖ್ಯ ಅಥಿತಿಗಳಾಗಿದ್ದ ದೈಹಿಕ ಶಿಕ್ಷಕ ಸದಾಶಿವ ಪಲ್ಲದ್ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳೆಸಿಕೊಂಡಲ್ಲಿ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು. ಕೂಡಿಗೆ ಕ್ರೀಡಾಶಾಲೆಯ ಅಥ್ಲೇಟಿಕ್ ತರಬೇತುದಾರ ಅಂತೋಣಿ ಡಿಸೋಜ ಮಾತನಾಡಿ, ಕ್ರೀಡಾಪಟುಗಳಲ್ಲಿ ಶಿಸ್ತು, ಸಮಯಪಾಲನೆ, ಶ್ರದ್ಧೆ ಇದ್ದರೆ ಪ್ರತಿಫಲ ದೊರೆಯಲು ಸಾಧ್ಯ ಎಂದರು.
14 ರಿಂದ 17 ವರ್ಷ ವಯೋಮಿತಿಯ ಬಾಲಕ-ಬಾಲಕಿಯರ ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಜಿಲ್ಲೆಯ ಸುಮಾರು 600 ಕ್ರೀಡಾಪಟುಗಳು ಭಾಗವಹಿಸಿದ್ದು, ಇದರಲ್ಲಿ ಪ್ರಥಮ ಸ್ಥಾನ ಗಳಿಸಿದ ಕ್ರೀಡಾಪಟುಗಳು ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.
ಈ ಸಂದರ್ಭ ಕ್ರೀಡಾಶಾಲೆಯ ಹಾಕಿ ತರಬೇತುದಾರರಾದ ಸಂಜಯ್ ಬಾಣದ್, ಬಿಂದ್ಯಾ, ಮಡಿಕೇರಿ ದೈಹಿಕ ಶಿಕ್ಷಣ ಶಿಕ್ಷಕ ರಮೇಶ್ ಸೇರಿದಂತೆ ಸಿಬ್ಬಂದಿ ವರ್ಗ ಇದ್ದರು.