ಸೋಮವಾರಪೇಟೆ, ಡಿ. 28: ಈಗಾಗಲೇ ಕೊಡಗು ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದ್ದು, ಕುಡಿಯುವ ನೀರಿಗೆ ತೊಂದರೆ ಎದುರಾಗುವ ಪ್ರದೇಶಗಳಲ್ಲಿ ತುರ್ತು ಅವಶ್ಯವಿದ್ದರೆ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಕೊಳವೆ ಬಾವಿ ತೆಗೆಯಬಹುದಾಗಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪ ರಾಜೇಶ್ ಹೇಳಿದರು. ತಾಲೂಕು ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷೆ ಪುಷ್ಪ ರಾಜೇಶ್ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಈಗಾಗಲೇ ತಾಲೂಕಿನ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಅಗತ್ಯ ಇರುವ ಕಡೆ ಕೊಳವೆ ಬಾವಿ ತೆಗೆಯಬೇಕಾಗಿದೆ. ತೋಳೂರು ಶೆಟ್ಟಳ್ಳಿಯ ಸುಭಾಷ್ ನಗರದಲ್ಲಿ ಕೊಳವೆ ಬಾವಿಯಲ್ಲಿ ನೀರು ಬರುತ್ತಿಲ್ಲ. ಈ ತಿಂಗಳ ಅಂತ್ಯದ ಒಳಗೆ ಬದಲಿ ವ್ಯವಸ್ಥೆಯನ್ನು ಮಾಡಬೇಕು ಎಂದು ನೀರಾವರಿ ಇಲಾಖೆ ಅಭಿಯಂತರರಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಭಿಯಂತರ ರಮೇಶ್, ಟಾಸ್ಕ್‍ಫೋರ್ಸ್‍ನಲ್ಲಿ ಕುಡಿಯುವ ನೀರಿನ ಯೋಜನೆಗೆ 45 ಲಕ್ಷ ರೂ. ಅನುದಾನ ಬಂದಿದೆ. ಈಗಾಗಲೇ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸಭೆಗೆ ತಿಳಿಸಿದರು.

ಗ್ರಾಮ ವಿಕಾಸ ಯೋಜನೆಯಡಿ ತಾಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿದ್ದು, ಪ್ರತಿ ಪಂಚಾಯಿತಿಗೆ ತಲಾ 75 ಲಕ್ಷ ಬಿಡುಗಡೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಭಿಯಂತರ ವೀರೇಂದ್ರ ಸಭೆಗೆ ತಿಳಿಸಿದರು. ನಾಕೂರು ಶಿರಂಗಾಲ, ಕಿರಗಂದೂರು, ನಿಡ್ತ, ಕೆದಕಲ್ ಪಂಚಾಯಿತಿಗಳಲ್ಲಿ ಕಾಮಗಾರಿ ನಡೆಸಲು ತಾಂತ್ರಿಕ ಅನುಮೋದನೆ ದೊರೆತಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲಿದ್ದು, ಶೀಘ್ರವೇ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದರು.

ಮುಖ್ಯಮಂತ್ರಿಗಳ ಗ್ರಾಮೀಣ ಸಡಕ್ ಯೋಜನೆಯಡಿ 107ಲಕ್ಷ ಮಂಜೂರಾತಿಗೆ ಅನುಮೋದನೆ ದೊರೆತಿದ್ದು, 38 ಕಾಮಗಾರಿಗಳ ಪೈಕಿ 18 ಕಾಮಗಾರಿಗಳು ಪೂರ್ಣಗೊಂಡಿದ್ದು, 7 ಪ್ರಗತಿಯಲ್ಲಿವೆ. ಕೆರೆಗಳ ನಿರ್ವಹಣೆಗೆ 29 ಲಕ್ಷ ಹಣವನ್ನು ಕಾಯ್ದಿರಿ¸ Àಲಾಗಿದೆ. ಮಳೆಹಾನಿ ದುರಸ್ತಿ ಯೋಜನೆಯಡಿ 25 ಲಕ್ಷ ಅನುದಾನ ಬಂದಿದೆ ಎಂದರು.

(ಮೊದಲ ಪುಟದಿಂದ) ಈಗಾಗಲೇ ಜಿಲ್ಲೆಯಿಂದ ಹೊರ ಭಾಗಕ್ಕೆ ಜಾನುವಾರುಗಳ ಸಾಗಾಣಿಕೆ ಕುರಿತು ದೂರು ಬಂದಿದ್ದು, ಇದನ್ನು ತಡೆಯಲು ಗಡಿ ಭಾಗಗಳಲ್ಲಿ ತಪಾಸಣೆ ಗೇಟ್ ಅಳವಡಿಸುವಂತೆ ಜಿಲ್ಲಾಧಿಕಾರಿ ಗಳ ಆದೇಶದಲ್ಲಿ ತಿಳಿಸಲಾಗಿದೆ. ತಕ್ಷಣವೇ ಇದನ್ನು ಕಾರ್ಯರೂಪಕ್ಕೆ ತರಲು ಅನುಮತಿ ಪಡೆಯಬೇಕಾಗಿದೆ ಎಂದು ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಚಿಟ್ಟಿಯಪ್ಪ ಹೇಳಿದರು.

ಶಿಶು ಅಭಿವೃದ್ದಿ ಯೋಜನಾ ಇಲಾಖೆ ವತಿಯಿಂದ ಸಮೃದ್ದಿ ಯೋಜನೆಯಡಿ ಮಹಿಳೆಯರಿಗೆ ಬೀದಿ ಬದಿಯಲ್ಲಿ ವ್ಯಾಪಾರ ನಡೆಸಲು 10 ಸಾವಿರ ಸಹಾಯಧನ ನೀಡಲಾಗುತ್ತಿದೆ. 18ರಿಂದ 60ರ ವಯೋಮಿತಿಯ ಮಹಿಳೆಯರಿಗೆ ಈ ಯೋಜನೆ ಅನ್ವಯಿಸಲಿದ್ದು ಜಿಲ್ಲಾ ಮಟ್ಟದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವದು ಎಂದು ಇಲಾಖಾಧಿಕಾರಿ ಸಭೆಗೆ ತಿಳಿಸಿದರು.

ಸಣ್ಣ ನೀರಾವರಿ ಇಲಾಖಾ ವತಿಯಿಂದ 2016-17ನೇ ಸಾಲಿನಲ್ಲಿ ತಾಲೂಕಿನ 19 ಕೆರೆಗಳ ಪುನಶ್ಚೇತನಕ್ಕೆ 2.82ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ 8 ಕೆರೆಗಳ ಕಾಮಗಾರಿ ಮುಗಿದಿದೆ ಎಂದು ಅಧಿಕಾರಿ ಸಭೆಗೆ ತಿಳಿಸಿದರು.

ತಾಲೂಕಿನ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ, ಗ್ರಾಮೀಣ ರಸ್ತೆಗಳ ಬದಿಯಲ್ಲಿ ಕಾಡುಗಳನ್ನು ಕಡಿಯದೇ ಇರುವದರಿಂದ ಅಪಘಾತಗಳು ಹೆಚ್ಚು ಸಂಭವಿಸುತ್ತಿದೆ. ಇಲಾಖೆಗೆ ಹಣ ಬಿಡುಗಡೆ ಆಗುತ್ತಿದ್ದರೂ ಕಾಡುಗಳನ್ನು ತೆರವುಗೊಳಿಸಲು ಏಕೆ ಮುಂದಾಗುತ್ತಿಲ್ಲ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಲೋಕೋಪಯೋಗಿ ಇಲಾಖೆಯ ಅಭಿಯಂತರ ಮಹೇಂದ್ರ ಕುಮಾರ್‍ರವರಿಗೆ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಭಿಯಂತರರು ಈಗಾಗಲೇ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಹಕಾರ ಕೋರಿದ್ದೇವೆ. ಅವರು ಸ್ಪಂದಿಸಿದರೆ ತಕ್ಷಣವೇ ಕೆಲಸ ಪ್ರಾರಂಭಿಸಲಾಗುವದು ಎಂದರು. ರಸ್ತೆ ಬದಿಯಲ್ಲಿ ಕೆಲವು ತೋಟ ಮಾಲೀಕರು ಮರಗಳನ್ನು ಕಡಿದು ಸಂಗ್ರಹಿಸುತ್ತಿದ್ದಾರೆ. ಇನ್ನೂ ಕೆಲವೆಡೆ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗೆ ಬೇಲಿ ಹಾಕುವ ಮೂಲಕ ಒತ್ತುವರಿ ಮಾಡುತ್ತಿದ್ದಾರೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಿ. ಚಂದ್ರಶೇಖರ್ ಹೇಳಿದರು. ಸಭೆಯಲ್ಲಿ ಕಂದಾಯ ಇಲಾಖೆ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಗೈರು ಹಾಜರಾಗಿದ್ದರು. ವೇದಿಕೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಧರ್ಮಪ್ಪ ಉಪಸ್ಥಿತರಿದ್ದರು.