ನಾಪೆÇೀಕ್ಲು, ಜು. 20: ಸ್ಥಳೀಯ ನಾಡ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಕಡತ ವಿಲೇವಾರಿ ಅಭಿಯಾನ ನಡೆಯಿತು.

ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಸ್ವಾಗತದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುತ್ತಿದ್ದಂತೆ ನಾಪೆÇೀಕ್ಲು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ಸಾರ್ವಜನಿಕರಾದ ಪಾಂಡಂಡ ನರೇಶ್, ಮಾನವ ಹಕ್ಕು ಆಯೋಗ ಮತ್ತು ಭ್ರಷ್ಟಾಚಾರ ವಿರೋಧಿ ಸಮಿತಿ ಜಿಲ್ಲಾಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ, ಎನ್.ಎಸ್. ಉದಯಶಂಕರ್, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಕುಲ್ಲೇಟಿರ ಅಜಿತ್ ನಾಣಯ್ಯ, ಅರುಣ್ ಬೇಬ ಮತ್ತಿತರರು ಮಡಿಕೇರಿ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಣ ಇಲ್ಲದವರಿಗೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾ ಗಿದೆ. ತಹಶೀಲ್ದಾರರು ಕೊಡಗು ಜಿಲ್ಲೆಯನ್ನು ಮಾರಾಟ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿ ದರು. ಈ ಸಂದರ್ಭ ಜಿಲ್ಲಾಧಿಕಾರಿ ಗಳಿಗೆ ದಾಖಲಾತಿ ಸಮೇತ ಮೌಖಿಕ ದೂರು ಸಲ್ಲಿಸಿದ ಕುಲ್ಲೇಟಿರ ಅಜಿತ್ ನಾಣಯ್ಯ ತನ್ನ ಆಸ್ತಿಗೆ ಸಂಬಂಧಿಸಿ ದಂತೆ ದಾಖಲಾತಿ ಸರಿಪಡಿಸಲು ಕಳೆದ 33 ವರ್ಷಗಳಿಂದ ಕಂದಾಯ ಇಲಾಖಾ ಕಚೇರಿಗೆ ಅಲೆಯುತ್ತಿದ್ದೇನೆ. ಆದರೂ ಯಾವದೇ ಪ್ರಗತಿ ಕಂಡಿಲ್ಲ ಎಂದು ದೂರಿದರು. ಇದಕ್ಕುತ್ತರಿಸಿದ ಜಿಲ್ಲಾಧಿಕಾರಿಗಳು ಇದಕ್ಕೆ ಸಂಬಂಧಿಸಿ ದಂತೆ ಅಧಿಕಾರಿಗಳ ಮಾಹಿತಿ ಪಡೆಯುವದಾಗಿ ಭರವಸೆ ನೀಡಿದರು.

ನಾಪೆÇೀಕ್ಲು ಬಸ್ ನಿಲ್ದಾಣದ ಸ್ಥಳದ ಬಗ್ಗೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ಬಸ್ ನಿಲ್ದಾಣಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಒಂದು ಏಕರೆ ಜಾಗವನ್ನು ಖರೀದಿಸಿದೆ. ಅದರ ಬಾಪ್ತು ರೂ. 1 ಲಕ್ಷ ಲೋಕೋಪಯೋಗಿ ಇಲಾಖೆಗೆ ನೀಡಿದೆ. ಆದರೆ ಕಳೆದ ಮೂರು ವರ್ಷಗಳಿಂದ ಲೋಕೋಪಯೋಗಿ ಇಲಾಖೆಯ ಖಾತೆಯಿಂದ ಗ್ರಾಮ ಪಂಚಾಯಿತಿ ಖಾತೆಗೆ ಈ ಸ್ಥಳ ವರ್ಗಾವಣೆಗೊಂಡಿಲ್ಲ. ಜಿಲ್ಲಾ ಪಂಚಾಯಿತಿ ವತಿಯಿಂದ ಬಸ್ ನಿಲ್ದಾಣ ಕಾಮಗಾರಿಗೆ ರೂ. 20 ಲಕ್ಷ ಕಾಯ್ದಿರಿಸಲಾಗಿದೆ. ಸರಕಾರಿ ಕೆಲಸಗಳು ಇಷ್ಟು ವಿಳಂಬವಾಗುತ್ತಿದ್ದರೆ ಸಾರ್ವಜನಿಕರ ಪಾಡೇನು? ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಜಿಲ್ಲಾಧಿಕಾರಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಇದರ ಬಗ್ಗೆ ಮಾಹಿತಿ ಪಡೆಯಲಾಗುವದೆಂದರು.

ನಂತರ ಮಾತನಾಡಿದ ಸಾರ್ವಜನಿಕರು ‘ಇ-ಸ್ವತ್ತು’ ಕಾನೂನಿನಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈ ಕಾನೂನನ್ನು ಸಡಿಲಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಜಿಲ್ಲೆಯಲ್ಲಿ ‘ಇ-ಸ್ವತ್ತು’ ಕಾನೂನು ಚಾಲ್ತಿಯಲ್ಲಿಲ್ಲ ಎಂದು ವಿವರಣೆ ನೀಡಿದರು. ಜಿಲ್ಲೆಯಲ್ಲಿ ಕಾಡಾನೆಯಿಂದ ಉಂಟಾಗುವ ನಷ್ಟಕ್ಕೆ ಪುಡಿಗಾಸಿನ ಪರಿಹಾರ ನೀಡಲಾಗುತ್ತಿದೆ. ಕಾಡು ಹಂದಿಗಳ ಉಪಟಳ ಕೂಡ ಜಿಲ್ಲೆಯಲ್ಲಿ ಮಿತಿ ಮೀರಿದೆ. ಕೃಷಿಕರ ಹೆಚ್ಚಿನ ಫಸಲು ಕಾಡು ಹಂದಿಯ ಪಾಲಾಗುತ್ತಿದೆ. ಒಂದೋ ಈ ನಷ್ಟಕ್ಕೆ ಪರಿಹಾರ ನೀಡಿ. ಇಲ್ಲವಾದರೆ ಕಾಡು ಹಂದಿಗೆ ಗುಂಡು ಹಾರಿಸಲು ಪರವಾನಿಗೆ ನೀಡಿ ಎಂದು ಮಾಜಿ ತಾಲೂಕು ಪಂಚಾಯಿತಿ ಸದಸ್ಯ ನೆರವಂಡ ಉಮೇಶ್ ಆಗ್ರಹಿಸಿದರು.

ಈ ಎಲ್ಲಾ ಅಹವಾಲು, ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳನ್ನು ತಿಳಿಯುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಜನರ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ದೊರೆತಿದೆ. ಗ್ರಾಮೀಣ ಪ್ರದೇಶದ ಹೆಚ್ಚಿನ ಜನರು ಅವಿದ್ಯಾವಂತರಾಗಿದ್ದು, ಅವರು ಕಂದಾಯ ಕಚೇರಿಗೆ ಭೇಟಿ ನೀಡುವ ಸಂದರ್ಭ ಅವರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಸಂಪೂರ್ಣ ಮಾಹಿತಿ ಪಡೆದು ಅವರಿಗೆ ಸೂಕ್ತ ಮಾರ್ಗ ದರ್ಶನ ನೀಡಬೇಕು ಎಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ, ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.