ವೀರಾಜಪೇಟೆ, ಅ. 14: ಭಾರತದಲ್ಲಿ ಎಲ್ಲರೂ ಶಾಂತಿ, ಸಹಬಾಳ್ವೆ, ಸಹೋದರತ್ವ ಬಯಸಿ ದವರಾಗಿದ್ದರೂ ಸಮಾಜದಲ್ಲಿ ಒಡಕುಗಳನ್ನು ಮೂಡಿಸುವ ಮೂಲಕ ಸಂವಿಧಾನಕ್ಕೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿರುವ ದುಷ್ಟ ಶಕ್ತಿಗಳನ್ನು ದೂರವಿಟ್ಟು ಜಾತ್ಯತೀತ ರಾಷ್ಟ್ರವನ್ನಾಗಿಸಲು ಯುವ ಸಮೂಹ ಮುಂದೆ ಬರಬೇಕೆಂದು ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕರೆ ನೀಡಿದರು.
ವೀರಾಜಪೇಟೆ ಎಮಿರೇಟ್ಸ್ ಸಭಾಂಗಣದಲ್ಲಿ ನಡೆದ ಜಾತ್ಯತೀತತೆಯೇ ಭಾರತದ ಜೀವದಾಳು ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಯಾವದೇ ಸರಕಾರಗಳು ಬಂದರೂ ಸಾಮಾನ್ಯ ಜನರಿಗೆ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ. ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಬೇಕಾದ ಸರಕಾರಗಳು ವೈಯಕ್ತಿಕ ಕಾರಣಗಳಿಗೆ ಹೆಚ್ಚು ಸಮಯ ವಿನಿಯೋಗಿಸುತ್ತಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಬಂದರೂ ಕುಟುಂಬ ಅಭಿವೃದ್ಧಿ ಆಗುತ್ತಿದೆಯೇ ಹೊರತು ಗ್ರಾಮದ ಅಭಿವೃದ್ಧಿ ಕಾಣುತ್ತಿಲ್ಲ ಎಂದು ಆರೋಪಿಸಿದರು.
ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಬಿ. ಅಫ್ಸರ್ ಮಾತನಾಡಿ, ಇಡೀ ವಿಶ್ವದಲ್ಲೇ ಮಾದರಿ ಸಂವಿಧಾನವನ್ನು ಡಾ. ಅಂಬೇಡ್ಕರ್ ಅವರು ಭಾರತಕ್ಕೆ ನೀಡಿದ್ದು, ಕೇಂದ್ರ ಸರಕಾರದ ಸಂಸದರಾದ ಯೋಗಿ ಆದಿತ್ಯನಾಥ್, ಸಾಕ್ಷಿ ಮಹರಾಜ್, ಸಾದ್ವಿ ಪ್ರಾಚಿ ಮುಂತಾದವರು ಬಹಿರಂಗವಾಗಿ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುವ ಮೂಲಕ ಜಾತ್ಯತೀತ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಶೌಕತ್ ಅಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ಉಪಾಧ್ಯಕ್ಷ ಲಿಯಾಕತ್ ಅಲಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ಮಡಿಕೇರಿ ನಗರಸಭಾ ಸದಸ್ಯರಾದ ಪೀಟರ್ ಮತ್ತು ಮನ್ಸೂರ್ ಉಪಸ್ಥಿತರಿದ್ದರು. ವೀರಾಜಪೇಟೆ ಘಟಕದ ಅಧ್ಯಕ್ಷ ಸಾಬಿತ್ ಸ್ವಾಗತಿಸಿ, ಶಹದೀರ್ ಅಲಿ ವಂದಿಸಿ, ಶರೀಫ್ ನಿರೂಪಿಸಿದರು.