ಮಡಿಕೇರಿ, ನ. 18: ಇತ್ತೀಚೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕೊಡವೇತರ ಕಾಂಗ್ರೆಸ್ಸಿಗರು ಪ್ರತ್ಯೇಕ ಸಭೆ ನಡೆಸಿ ಕೊಡವೇತರರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ನಿರ್ಣಯ ಕೈಗೊಂಡ ಬಗ್ಗೆ ಪಕ್ಷದ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಇಂದು ಸಭೆ ನಡೆಸಿದವರ ಜೊತೆ ಚರ್ಚಿಸಿದರು.
ಕಾಂಗ್ರೆಸ್ ಪಕ್ಷ ಒಂದು ಜಾತ್ಯತೀತ ಪಕ್ಷವಾಗಿದ್ದು, ಪಕ್ಷದಲ್ಲಿರುವ ಎಲ್ಲರಿಗೂ ಸಮಾನ ಅಧಿಕಾರ, ಸ್ಥಾನಮಾನ ನೀಡುವ ಅನಿವಾರ್ಯತೆ ಇದೆ. ಪ್ರತ್ಯೇಕವಾಗಿ ಸಭೆ ನಡೆಸಿದವರ ಬೇಡಿಕೆ ಸರಿಯಾಗಿದೆ. ಆದರೆ ಪಂಗಡ ಅಥವಾ ಜಾತಿಯ ಹೆಸರಿನಲ್ಲಿ ಬೇಡಿಕೆಗಳನ್ನು ಮುಂದಿಟ್ಟು ಗೊಂದಲಗಳನ್ನು ಸೃಷ್ಟಿಸದೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಾನಮಾನಗಳನ್ನು ಕೇಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೊಡಗು ಜಿಲ್ಲಾ ಕಾಂಗ್ರೆಸ್‍ನ ಎಲ್ಲಾ ಮುಖಂಡರೊಂದಿಗೆ ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ ಪಕ್ಷ ಮುಂದಿನ
(ಮೊದಲ ಪುಟದಿಂದ) ಹೆಜ್ಜೆ ಇಡಲಿದೆ ಎಂದು ಕಾರ್ಯಾಧ್ಯಕ್ಷರು ಭರವಸೆ ನೀಡಿರುವದಾಗಿ ಜಿಲ್ಲಾ ವಕ್ತಾರ ಕೆ.ಕೆ. ಮಂಜುನಾಥ್ ಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ, ಜಿಲ್ಲಾ ವಕ್ತಾರ ಕೆ.ಕೆ. ಮಂಜುನಾಥ್ ಕುಮಾರ್, ಉಪಾಧ್ಯಕ್ಷ ನಟೇಶ್ ಗೌಡ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ವಿ.ಕೆ. ಸತೀಶ್ ಕುಮಾರ್, ಪರಿಶಿಷ್ಟ ಪಂಗಡ ವಿಭಾಗದ ಕೆ.ಆರ್. ಚಂದ್ರ, ನಾಪೋಕ್ಲು ಬ್ಲಾಕ್ ಅಧ್ಯಕ್ಷ ರಮಾನಾಥ್, ಕಿಸಾನ್ ಘಟಕದ ಅಧ್ಯಕ್ಷ ಪಿ.ಎನ್. ಹರ್ಷ, ಪ್ರಮುಖರಾದ ಕೆದಂಬಾಡಿ ರಮೇಶ್, ಪಿ.ವಿ. ಸುರೇಶ್, ಲಾರೆನ್ಸ್, ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬಿ.ಬಿ. ಸತೀಶ್, ಸೋಮವಾರಪೇಟೆ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್, ಕೆದಂಬಾಡಿ ರಿಷಿ ಮತ್ತಿತರರು ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾದ ಸಂದರ್ಭ ಹಾಜರಿದ್ದರು.