ಸೋಮವಾರಪೇಟೆ, ಆ. 8: ಜಾಗೃತ ಹಿಂದೂ ಸಮಾಜದಿಂದ ಮಾತ್ರ ಅಖಂಡ ಭಾರತ ನಿರ್ಮಾಣ ಸಾಧ್ಯ. ಧರ್ಮದ ಮೇಲಿನ ದಬ್ಬಾಳಿಕೆಯನ್ನು ಮೆಟ್ಟಿನಿಂತು ವಿರೋಧಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸಮಸ್ತ ಹಿಂದೂ ಸಮಾಜ ಒಗ್ಗೂಡಬೇಕಾದ ಅನಿವಾರ್ಯತೆ ಯಿದೆ ಎಂದು ವಿಶ್ವ ಹಿಂದೂ ಪರಿಷತ್‍ನ ಮಂಗಳೂರು ವಿಭಾಗದ ಸಹ ಕಾರ್ಯದರ್ಶಿ ಪ್ರಕಾಶ್ ಮಲ್ಪೆ ಹೇಳಿದರು.
ತಾಲೂಕು ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಇಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಖಂಡ ಭಾರತದ ಸಂಕಲ್ಪವನ್ನು ತೊಟ್ಟು ಮೈ ಮರೆತು ಕುಳಿತರೆ ಈ ದೇಶ ಅಖಂಡವಾಗುವದರ ಬದಲು ತುಂಡು ತುಂಡಾಗಲಿದೆ. ಕಾಶ್ಮೀರದಲ್ಲಿ ಈಗಾಗಲೇ ವಿಭಜನೆಯ ಕೂಗು ಕೇಳುತ್ತಿದ್ದು, ಮುಂದಿನ ದಿನಗಳಲ್ಲಿ ಹೈದರಾಬಾದ್ ಸಹ ಮತ್ತೊಂದು ಕಾಶ್ಮೀರವಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಹಿಂದೂಸ್ತಾನದ ಪ್ರತಿಯೋರ್ವರು ದೃಢ ಸಂಕಲ್ಪದೊಂದಿಗೆ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕಿದೆ ಎಂದರು.
ದೇಶ ಕಾಯುವ ಸೈನಿಕರು ತಮ್ಮ ಜೀವದ ಹಂಗು ತೊರೆದು ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿರು ವದರಿಂದಲೇ ಇಂದಿಗೂ ಕಾಶ್ಮೀರ ಭಾರತದ ಅಧೀನದಲ್ಲಿದೆ. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನೊಬ್ಬ ‘ನಮ್ಮ ದೇಶದಲ್ಲಿ ಸಂಬಳ, ಸವಲತ್ತಿಗಾಗಿ ಸೈನ್ಯಕ್ಕೆ ಸೇರುತ್ತಿದ್ದಾರೆ’ ಎಂದು ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾನೆ. ಇದರೊಂದಿಗೆ ದೇಶದ್ರೋಹಿ ಘೋಷಣೆ ಕೂಗುವ ಕನ್ನಯ್ಯ ಕುಮಾರ್ ಅವರಂತವರನ್ನು ಸಮರ್ಥಿಸಿಕೊಳ್ಳುವ ನಕಲಿ ಬುದ್ದಿಜೀವಿಗಳಿಗೂ ತಕ್ಕ ಉತ್ತರ ನೀಡಬೇಕಾಗಿದೆ ಎಂದರು.
ನಮ್ಮ ದೇಶ ಸ್ವಾತಂತ್ರ್ಯ ಪಡೆಯಿತು ಎಂದು ಹರ್ಷದಲ್ಲಿ ಮುಳುಗಬೇಕಾದ ಸಂದರ್ಭದಲ್ಲಿಯೇ ಮಹಮ್ಮದಾಲಿ ಜಿನ್ನ ಅವರು ಮುಸ್ಲಿಮರಿಗೆ ಪಾಕಿಸ್ತಾನ, ಹಿಂದುಗಳಿಗೆ ಹಿಂದೂಸ್ಥಾನ ಎಂದು ವಿಭಜಿಸಿದ್ದಾರೆ. ಇದರಿಂದ ಪಾಕಿಸ್ಥಾನ ವ್ಯಾಪ್ತಿಯಲ್ಲಿದ್ದ ಹಿಂದುಗಳನ್ನು ಭಾರತದತ್ತ ಓಡಿಸಿದ್ದಲ್ಲದೆ ಲಕ್ಷಾಂತರ ಹಿಂದೂಗಳ ನರಮೇಧ ನಡೆದಿದೆ. ಭಾರತ ಮಾತೆಯನ್ನು ಕೊಂಡಾಡುವ ವಂದೇ ಮಾತರಂ ಗೀತೆಯಲ್ಲಿನ ಸಾಲುಗಳನ್ನು ಕತ್ತರಿಸಿ, ಈ ದೇಶದ ಬಹುಸಂಖ್ಯಾತ ಹಿಂದೂಗಳ ಮನಸ್ಸಿಗೆ ನೋವುಂಟು ಮಾಡಲಾಗಿದೆ ಎಂದು ಆರೋಪಿಸಿದ ಅವರು, ಹಿಂದೂ ರಾಷ್ಟ್ರದ ನಿರ್ನಾಮ ಮಾಡಲು ಪಾಕಿಸ್ತಾನದೊಂದಿಗೆ ಕೈಜೋಡಿಸುತ್ತಿ ರುವ ದೇಶದ್ರೋಹಿಗಳಿಗೂ ತಕ್ಕ ಪಾಠ ಕಲಿಸುವ ಸಂಕಲ್ಪವನ್ನೂ ತೊಡಬೇಕಾಗಿದೆ ಎಂದರು.
ದೇಶದೊಳಗೆ ಉಗ್ರಗಾಮಿ ಚಟುವಟಿಕೆ ಸೇರಿದಂತೆ ಎಲ್ಲಾ ಆತಂಕದ ಸ್ಥಿತಿ ನಿರ್ಮಾಣ ಮಾಡುತ್ತಿರುವ ಪಾತ್ರಧಾರಿಗಳೊಂದಿಗೆ ಸೂತ್ರಧಾರಿಗಳನ್ನೂ ನಾಶ ಪಡಿಸುವ ಕಾರ್ಯ ಮಾಡಿದ್ದಲ್ಲಿ ಮಾತ್ರ ಅಖಂಡ ಭಾರತದ ಕನಸು ನನಸಾಗಲಿದೆ. ಈ ನಿಟ್ಟಿನಲ್ಲಿ ಹಿಂದೂ ಸಮಾಜ ಇನ್ನಷ್ಟು ಜಾಗೃತಗೊಳ್ಳಬೇಕಿದೆ ಎಂದರು.
ಹಿಂದೂಗಳ ನರಮೇಧ ನಡೆಸಿದ ಮತಾಂಧ ಟಿಪ್ಪು ಸುಲ್ತಾನ್ ಜಯಂತಿಯನ್ನು ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಮಾತ್ರವಲ್ಲ ರಾಜ್ಯದಲ್ಲೇ ನಡೆಸಲು ಹಿಂದೂ ಸಮಾಜ ಅವಕಾಶ ನೀಡಬಾರದು. ಈ ಸಾಲಿನ ಜಯಂತಿ ಯಲ್ಲಿ ಹಿಂದೂ ಮುಖಂಡರೋರ್ವರ ಬಲಿದಾನವಾಗಿದ್ದು, ಇಂತಹ ಪ್ರಮಾದ ಮುಂದಿನ ದಿನಗಳಲ್ಲಿ ಆಗಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚೌಡ್ಲು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್ ಮಾತನಾಡಿ, ಭಾರತದ ಎಲ್ಲಾ ಪ್ರಜೆಗಳಿಗೆ ಒಂದೇ ಕಾನೂನು ಇರಬೇಕು. ಆದರೆ ಇಲ್ಲಿ ಧರ್ಮಕ್ಕೊಂದು ಕಾನೂನು ಇದೆ. ಎಲ್ಲರನ್ನು ಸಮಾನತೆಯಿಂದ ಕಾಣುವ ಹಾಗೂ ಬಲಿಷ್ಠ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದರು.
ವೇದಿಕೆಯಲ್ಲಿ ಕುಶಾಲನಗರ ಹಿಂ.ಜಾ.ವೇ. ಪ್ರಮುಖ ಮಂಜುನಾಥ್ ಉಪಸ್ಥಿತರಿದ್ದರು. ಜಾಗರಣಾ ವೇದಿಕೆಯ ತಾಲೂಕು ಸಂಚಾಲಕ ದರ್ಶನ್ ಜೋಯಪ್ಪ, ಅಧ್ಯಕ್ಷ ರಮೇಶ್, ಪ್ರಮುಖರಾದ ಸುಭಾಶ್ ತಿಮ್ಮಯ್ಯ, ಉಮೇಶ್, ಅಶೋಕ್, ಶಶಿಕಾಂತ್ ಬಿಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ಜೀವನಗಾಥೆಯನ್ನು ಬಿಂಬಿಸುವ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದಲ್ಲಿ ಭಗವಾಧ್ವಜವನ್ನು ಹೊತ್ತ ನೂರಾರು ವಾಹನಗಳ ಮೆರವಣಿಗೆ ನಡೆಯಿತು.