ಮಡಿಕೇರಿ, ಡಿ. 27: ತಾ. 29 ರಿಂದ ಜ. 4ರವರೆಗೆ ಮೈಸೂರು ಜಿಲ್ಲೆಯ ಅಡಕನಹಳ್ಳಿ ಕೈಗಾರಿಕಾ ಬಡಾವಣೆಯಲ್ಲಿ ನಡೆಯಲಿರುವ ಸ್ಕೌಟ್ಸ್ ಅಯಿಂಡ್ ಗೈಡ್ಸ್ ರಾಷ್ಟ್ರೀಯ ಸಮಾವೇಶ ‘ಜಾಂಬೂರಿ’ಯಲ್ಲಿ ಭಾಗವಹಿಸಲು ಕೊಡಗಿನಿಂದ ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಜೊತೆಗೆ ಕಬ್ಸ್ ಮತ್ತು ಬುಲ್ ಬುಲ್ಸ್ ಕೂಡ ಭಾಗವಹಿಸಲಿದ್ದಾರೆ.
ರಾಜ್ಯದಲ್ಲಿ 1960ರ ಬಳಿಕ ಮೂರನೇ ಬಾರಿಗೆ ಆಯೋಜಿಸಿರುವ ಜಾಂಬೂರಿಯಲ್ಲಿ ಸುಮಾರು 500 ವಿದೇಶೀ ಮಕ್ಕಳು ಭಾಗವಹಿಸುತ್ತಿದ್ದು, ರಾಜ್ಯ ಸರಕಾರ ಸುಮಾರು ಹನ್ನೆರಡು ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಭಾರತ ಸ್ಕೌಟ್ಸ್ ಅಯಿಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ ಹೇಳಿದ್ದಾರೆ. ವಿಪರ್ಯಾಸವೆಂಬಂತೆ ಕೊಡಗಿನಿಂದ ಭಾಗವಹಿಸುತ್ತಿರುವ ವಿದ್ಯಾರ್ಥಿಗಳಿಂದ ಊಟೋಪಚಾರಕ್ಕೆಂದು ತಲಾ 1,500 ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಬುಲ್‍ಬುಲ್ಸ್ ಮತ್ತು ಕಬ್ಸ್ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿಲ್ಲ. ಪ್ರಯಾಣ ದರ ಮಾತ್ರ ಅವರೆ ಭರಿಸಬೇಕಾಗಿದೆ.
ಕೊಡಗಿನಿಂದ ಕಾಪ್ಸ್, ಅಂಕುರ್ ಶಾಲೆ, ರಾಮಟ್ರಸ್ಟ್, ನಾಪೋಕ್ಲು ಪದವಿ ಪೂರ್ವ ಕಾಲೇಜು, ಎಸ್.ಎಂ.ಎಸ್. ವಿದ್ಯಾಪೀಠ, ಗೋಣಿಕೊಪ್ಪ ಹೈಸ್ಕೂಲ್, ಚೆನ್ನಯ್ಯನಕೋಟೆ ಜಿಎಂಪಿ ಶಾಲೆ, ಗುಡ್ ಶಫರ್ಡ್ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸುತ್ತಿದ್ದಾರೆ.
ಸುಮಾರು ಹದಿನೆಂಟು ಸ್ಕೌಟ್ಸ್ ಮತ್ತು ಗೈಡ್ಸ್ ಬೋಧಕರು, ಜಿಲ್ಲಾ ಅಧಿಕಾರಿಗಳು ತೆರಳಲಿದ್ದಾರೆ ಎಂದು ಪ್ರಮುಖರಾದ ಜಿಮ್ಮಿ ಸಿಕ್ವೇರಾ ಮತ್ತು ದಮಯಂತಿ ತಿಳಿಸಿದ್ದಾರೆ.
ಸುಮಾರು 30 ವರ್ಷಗಳ ಬಳಿಕ ರಾಜ್ಯದಲ್ಲಿ ನಡೆಯಲಿರುವ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‍ನ 17ನೇ ರಾಷ್ಟ್ರೀಯ ಜಾಂಬೂರಿ ಸಮಾವೇಶಕ್ಕೆ ವೇದಿಕೆ ಸಜ್ಜುಗೊಂಡಿದೆ. ನಂಜನಗೂಡು ತಾಲೂಕು ಅಡಕನಹಳ್ಳಿ ಕೈಗಾರಿಕಾ ಪ್ರದೇಶದ 350 ಎಕರೆ ಜಾಗದಲ್ಲಿ ನಡೆಯಲಿರುವ ಸಮಾವೇಶಕ್ಕೆ ಡಿ. 29 ರಂದು ಮಧ್ಯಾಹ್ನ 3.15ಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಚಾಲನೆ ನೀಡಲಿದ್ದಾರೆ.
ಜ. 4ರ ವರೆಗೆ ನಡೆಯಲಿದ್ದು, ದೇಶದ 52 ಸ್ಕೌಟ್ಸ್ ಘಟಕಗಳ 25 ಸಾವಿರ ವಿದ್ಯಾರ್ಥಿಗಳು ಹಾಗೂ 5 ಸಾವಿರ ಶಿಕ್ಷಕರು ಭಾಗವಹಿಸಲಿದ್ದಾರೆ. ಕರ್ನಾಟಕದ 7 ಸಾವಿರ ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಮಲೇಷ್ಯಾ, ಶ್ರೀಲಂಕಾ, ಭೂತಾನ್, ನೇಪಾಳ, ಬಾಂಗ್ಲಾದೇಶದಿಂದ ವಿದ್ಯಾರ್ಥಿಗಳು ಬರುತ್ತಿರುವದು ವಿಶೇಷ.
ಆಹಾರ ಮೇಳ: ವಾಸ್ತವ್ಯಕ್ಕೆ 3 ಸಾವಿರ ಟೆಂಟ್ ನಿರ್ಮಿಸಲಾಗಿದೆ. ಊಟದ ಸಭಾಂಗಣ, ಆಯಾ ರಾಜ್ಯದ ವಿಶೇಷ ತಿನಿಸು ತಯಾರಿಸಲು ಸಿದ್ಧತೆ ನಡೆದಿದೆ. ಅದಕ್ಕಾಗಿ ಅಲ್ಲಿಂದಲೇ ಅಡುಗೆ ಸಿಬ್ಬಂದಿ ಬರಲಿದ್ದಾರೆ. ಮಿನಿ ಕ್ರೀಡಾಂಗಣ ಹಾಗೂ ಸಾಂಸ್ಕøತಿಕ ವೇದಿಕೆ ನಿರ್ಮಿಸಲಾಗಿದೆ. ವಸ್ತು ಪ್ರದರ್ಶನ, ಆಹಾರ ಮೇಳ ಏರ್ಪಡಿಸಲಾಗುತ್ತಿದೆ. ಆವರಣದಲ್ಲಿ ಹಾಲು, ತರಕಾರಿ, ಹಣ್ಣು, ದಿನಸಿ ಪದಾರ್ಥ, ಪಾತ್ರೆಗಳು ದೊರೆಯಲಿವೆ. ಬಟ್ಟೆ ಮಾರಾಟ ಮಳಿಗೆ, ಇಸ್ತ್ರಿ ಅಂಗಡಿ, ಉಡುಗೊರೆ ಮಳಿಗೆ ತೆರೆಯಲಾಗುತ್ತಿದೆ.
ಮಿನಿ ಆಸ್ಪತ್ರೆ: 50 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಿಸಲಾಗಿದೆ. ವೈದ್ಯರ ತಂಡ, 4 ಆಂಬುಲೆನ್ಸ್, ಔಷಧ ಸೌಲಭ್ಯ ಲಭ್ಯವಿರಲಿದೆ. ಭದ್ರತೆಗಾಗಿ ಎರಡೂವರೆ ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಸಿ.ಸಿ. ಟಿ.ವಿ. ಕ್ಯಾಮೆರಾ ಅಳವಡಿಸಲಾಗಿದೆ. 200 ಅಗ್ನಿಶಾಮಕ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.