ಗೋಣಿಕೊಪ್ಪಲು, ಆ.3: ಬರಪೊಳೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘ, ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘ, ಕೂರ್ಗ್ ವಾಟರ್ ಸ್ಪೋಟ್ಸ್ ಅಡ್ವೆಂಚರ್ಸ್ ಹಾಗೂ ಮುಳಿಯ ಸಂಸ್ಥೆ ಸಹಯೋಗದಲ್ಲಿ ಸುಮಾರು 50 ಪತ್ರಕರ್ತರು ರ್ಯಾಫ್ಟಿಂಗ್‍ನಲ್ಲಿ ಪಾಲ್ಗೊಳ್ಳುವ ಮೂಲಕ ಜಲಕ್ರೀಡೆಯಲ್ಲಿ ಸಂಭ್ರಮಿಸಿದರು.ಬರಪೊಳೆಯಲ್ಲಿ ಕೂರ್ಗ್ ವಾಟರ್ ಸ್ಪೋಟ್ಸ್ ಅಡ್ವೆಂಚರ್ಸ್ ನಿರ್ದೇಶಕ ಕುಂಞಂಗಡ ಬೋಸ್ ಮಾದಪ್ಪ, ಮುಳಿಯ ಸಂಸ್ಥೆ ಗೋಣಿಕೊಪ್ಪ ವಿಭಾಗದ ವ್ಯವಸ್ಥಾಪಕ ತೀತಿಮಾಡ ಸೋಮಣ್ಣ ಪೆಡೆಲ್ ಹಾಗೂ ಜೀವರಕ್ಷಕ ಕವಚ ನೀಡುವ ಮೂಲಕ ರ್ಯಾಫ್ಟಿಂಗ್‍ಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಬೋಸ್ ಮಾದಪ್ಪ, ಬರಪೊಳೆ ನದಿಯು ಪರಿಸರ ರಕ್ಷಣೆಯಲ್ಲಿರುವದರಿಂದ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ದರಿಂದ ನೀರಿನಲ್ಲಿ ಕಲಬೆರಕೆಗಳು ಇಲ್ಲ. ಇದರಿಂದಾಗಿ ಜಲಕ್ರೀಡೆಗೆ ಪೂರಕ ವಾಗಿದೆ. ಹೊಳೆಯ ಹಾದಿ ರೋಚಕ ಅನುಭವಗಳನ್ನು ನೀಡಲಿದೆ. ವೃತ್ತಿ ಬದುಕಿನ ಜಂಜಾಟದ ನಡುವೆ ಮಾಧ್ಯಮ ಕ್ಷೇತ್ರದಲ್ಲಿರುವವರು ಇಂತಹ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿರುವದು ಮಾನಸಿಕ ಹಾಗೂ ದೈಹಿಕ ಕ್ಷಮತೆಗೆ ಸಹಕಾರಿಯಾಗಲಿದೆ ಎಂದರು.

ದಿನಂಪ್ರತಿ ವೃತ್ತಿಯಲ್ಲಿ ತೊಡಗಿರುವ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ನಮ್ಮ ಸಂಸ್ಥೆ ಪಾಲ್ಗೊಳ್ಳುತ್ತಿರುವದು ಹೆಮ್ಮೆ ಎನಿಸುತ್ತಿದೆ. ಮಾಧ್ಯಮದವರಿಂದಾಗಿ ಬರಪೊಳೆಯ ಪ್ರಕೃತಿ ಸೌಂಧರ್ಯ, ಶುದ್ಧ ಜಲದ ಅನುಭವ ಸವಿಯುವಂತಾಗಿದೆ ಎಂದು ಮುಳಿಯ ಸಂಸ್ಥೆ ಗೋಣಿಕೊಪ್ಪ ವಿಭಾಗದ ವ್ಯವಸ್ಥಾಪಕ ತೀತಿಮಾಡ ಸೋಮಣ್ಣ ಅಭಿಪ್ರಾಯಪಟ್ಟರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಜಿಲ್ಲೆಯ ಎಲ್ಲಾ ಭಾಗ ಗಳಿಂದ ಪತ್ರಕರ್ತರು ಭಾಗವಹಿಸಿರುವ ದರಿಂದ ಜಲಕ್ರೀಡೆಯನ್ನು ಅನುಭವಿಸಲು ಸಾಧ್ಯವಾಗಿದೆ ಎಂದರು.

6 ಜನರ ತಂಡವು ಪ್ರತ್ಯೇಕ ಬೋಟ್‍ಗಳಲ್ಲಿ ಜಲಕ್ರೀಡೆ ನಡೆಸಿದರು. ಸುಮಾರು 5 ಗಂಟೆಗಳ ಕಾಲ ರ್ಯಾಫ್ಟಿಂಗ್ ನಡೆಯಿತು. ಮಾರ್ಗದರ್ಶಿ ಗಳಾಗಿ ವಿಜಯ್ ಪುಂದಿರ್, ಹೋಶ್ಯಾರ್ ಸಿಂಗ್, ಮೋನೋಜ್ ಹಾಗೂ ಉಲ್ಲಾಸ್ ಕಾರ್ಯ ನಿರ್ವಹಿಸಿದರು.