ಮಡಿಕೇರಿ, ಜು. 15: ಕೊಡಗಿನಿಂದ ಅಮರನಾಥ ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳು ಜಮ್ಮುವಿನಲ್ಲಿ ಸುರಕ್ಷಿತವಾಗಿದ್ದಾರೆ.
ಕೊಡಗು ಜಿಲ್ಲೆಯ ಚೆಟ್ಟಳ್ಳಿಯಿಂದ 17ಮಂದಿ ಹಾಗೂ ಕರಿಕೆಯಿಂದ 9ಮಂದಿ ಸೇರಿದಂತೆ ಒಟ್ಟು 26 ಮಂದಿ ಕಳೆದ ಒಂದು ವಾರದ ಹಿಂದೆ ಕೊಡಗಿನಿಂದ ಯಾತ್ರೆ ಕೈಗೊಂಡಿದ್ದರು. ಯಾತ್ರೆಯ ನೇತೃತ್ವವನ್ನು ಸುಧೀರ್ ಹಾಗೂ ಬಾಬು ವಹಿಸಿದ್ದಾರೆ.
ಯಾತ್ರಾರ್ಥಿಗಳ ತಂಡ ಉಧಂಪುರ ಹಾಗೂ ಜಮ್ಮುವಿನ ಮಧ್ಯೆ ಟಕ್ರಿ ಪ್ರದೇಶದಲ್ಲಿರುವ ಯಾತ್ರಾರ್ಥಿಗಳಿಗಿರುವ ಆಶ್ರಮದಲ್ಲಿ ಕಳೆದ 2 ದಿನಗಳಿಂದ ತಂಗಿದ್ದಾರೆ. ಕರ್ನಾಟಕ ತಂಡದಲ್ಲಿ ಒಟ್ಟು 87 ಮಂದಿ ಇದ್ದಾರೆ. ಒಂದು ವಾರದ ಹಿಂದೆ ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವನಿ ಎಂಬಾತನನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿದ್ದರು. ಇದನ್ನು ವಿರೋಧಿಸಿ ಒಂದು ಗುಂಪು ಕಾಶ್ಮೀರದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದ್ದು, ಅಲ್ಲಲ್ಲಿ ಗಲಭೆಗಳು ನಡೆಯುತ್ತಿದೆ. ಇದರಿಂದ ಅಮರನಾಥ ಯಾತ್ರಾರ್ಥಿಗಳಿಗೆ ತೀವ್ರ ತೊಂದರೆಯಾಗಿದ್ದು, ಯಾತ್ರೆಯನ್ನು ತಾತ್ಕಾಲಿಕವಾಗಿ ತಡೆಹಿಡಿದ ಹಿನ್ನೆಲೆಯಲ್ಲಿ ಕೊಡಗಿನ ಯಾತ್ರಾರ್ಥಿಗಳು ಕಳೆದೆರಡು ದಿನಗಳಿಂದ ಆಶ್ರಮದಲ್ಲಿಯೇ ಉಳಿದಿದ್ದಾರೆ. ಆಶ್ರಮದಲ್ಲಿ ಯಾತ್ರಾರ್ಥಿಗಳಿಗೆ ಉಚಿತ ಊಟ, ವಸತಿ ಕಲ್ಪಿಸಲಾಗಿದೆ.
-ಜಮ್ಮುವಿನಿಂದ ಸುಧೀರ್