ಮಡಿಕೇರಿ, ಆ. 29: ಜನಾಭಿವೃದ್ಧಿ ಗಾಗಿ ಸರಕಾರ ವಿವಿಧ ಇಲಾಖೆಗಳ ಮೂಲಕ ಹತ್ತಾರು ಕಾರ್ಯ ಕ್ರಮಗಳನ್ನು ರೂಪಿಸುತ್ತಿದೆ. ಎಲ್ಲವೂ ಸದುಪಯೋಗವಾಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಹೇಳಿದ್ದಾರೆ.
ಕೊಡಗು ಪ್ರೆಸ್ಕ್ಲಬ್ ವತಿಯಿಂದ ಇಲ್ಲಿನ ಪತ್ರಿಕಾಭವನದಲ್ಲಿ ಏರ್ಪಡಿಸ ಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸರಕಾರದ ಸೌಲಭ್ಯಗಳನ್ನು ತಲಪಿಸುವ ನಿಟ್ಟಿನಲ್ಲಿ ಜನಸಂಪರ್ಕ ಸಭೆ ಏರ್ಪಡಿಸಿ, ಜನರ ಬಳಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಪ್ರಯತ್ನಿಸ ಲಾಗುತ್ತಿದೆ. ತಾವು ಜಿಲ್ಲೆಗೆ ಆಗಮಿಸಿ ಮೂರು ತಿಂಗಳಷ್ಟೇ ಆಗಿದ್ದು, ಇಲ್ಲಿನ ಪರಿಸ್ಥಿತಿಯನ್ನು ಸಮಗ್ರವಾಗಿ ಅರಿತು ಕಾರ್ಯೋನ್ಮುಖವಾಗುವದಾಗಿ ಹೇಳಿದರು. ಸಾಮಾಜಿಕ ಶಾಂತಿ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾಡಾನೆ ಸಮಸ್ಯೆ
ಕಾಡಾನೆ ಹಾವಳಿ ತಡೆಗಟ್ಟುವ ಸಂಬಂಧ ಅರಣ್ಯ ಇಲಾಖೆ ವತಿಯಿಂದ ಮರಳಿ ಕಾಡಿಗಟ್ಟುವ ಕಾರ್ಯ ಆಗುತ್ತಿದೆ. ಅಲ್ಲದೆ ಕಂದಕಗಳನ್ನು ತೋಡಲಾಗುತ್ತಿದೆ. ಅರಣ್ಯದಲ್ಲಿ ಆನೆಗಳಿಗೆ ಬೇಕಾದ ಆಹಾರ ಕಡಿಮೆಯಾಗಿರುವ ದರಿಂದ ಆಹಾರಕ್ಕೆ ಅಗತ್ಯವಾದ ಗಿಡ ಮರಗಳನ್ನು ಹೆಚ್ಚಿಸುವ ಕೆಲಸ ವಾಗುತ್ತಿದೆ. ಬೆಳೆ, ಪ್ರಾಣಹಾನಿ, ಆಸ್ತಿ-ಪಾಸ್ತಿ ಹಾನಿಗೆ ಸಂಬಂಧಿಸಿದಂತೆ ಸಂದರ್ಭನುಸಾರ ಪರಿಹಾರ ನೀಡುವ ಕಾರ್ಯ ಆಗುತ್ತಿದೆ ಎಂದು ತಿಳಿಸಿದರು. ವಾಣಿಜ್ಯ ಬೆಳೆಗಳಿಗೆ ಮಳೆಹಾನಿ ಪರಿಹಾರ ನೀಡುವ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಲವೊಂದು ಅನುದಾನ ಬಂದಿಲ್ಲವೆಂದು ಹೇಳಿದರು.
ಬಾಣೆ ಸಮಸ್ಯೆ
ಜಿಲ್ಲೆಯಲ್ಲಿ 1.86ಲಕ್ಷ ಬಾಣೆ ಜಮೀನು ಇದ್ದು, ಬಹುತೇಕ ಪ್ರಕರಣಗಳಿಗೆ ಕಂದಾಯ ನಿಗದಿಪಡಿಸಲಾಗಿದೆ. ಇನ್ನೂ 32 ಸಾವಿರ ಎಕರೆಯಷ್ಟು ಕಂದಾಯ ನಿಗದಿಗೆ ಬಾಕಿ ಇದೆ. ಈ ಸಂಬಂಧ ಜಿಲ್ಲಾಡಳಿತ, ಸರಕಾರದಿಂದ ಯಾವದೇ ಸಮಸ್ಯೆ ಇಲ್ಲ. ವಾರಸುದಾರರು ಸೂಕ್ತ ದಾಖಲೆ ಒದಗಿಸಿದರೆ ಸಮಸ್ಯೆ ಇತ್ಯರ್ಥಗೊಳ್ಳಲಿದೆ ಎಂದರು. ಆರ್ಡಿಸಿಯಲ್ಲಿನ ಗೊಂದಲಕ್ಕೆ ಸಂಬಂಧಿಸಿದಂತೆ ನಾಡಕಚೇರಿ, ತಹಶೀಲ್ದಾರ್ ಕಚೇರಿಯಲ್ಲಿ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಂದಾಯ ಅದಾಲತ್ನಲ್ಲಿ ಬಹಳಷ್ಟು ಸಮಸ್ಯೆಗಳು ಬಗೆಹರಿದಿವೆ ಎಂದರು.
ಕಂದಾಯ ಇಲಾಖೆ
ಕಂದಾಯ ಇಲಾಖೆಗೆ ಸಂಬಂಧಿಸಿದ ಕಚೇರಿಗಳಲ್ಲಿ ಪ್ರತಿ ಕಡತಗಳು ಲಂಚವಿಲ್ಲದೆ ಮುಂದೆ ಸಾಗುವದಿಲ್ಲ. ಪ್ರಭಾವಿಗಳ ಕೆಲಸ - ಕಾರ್ಯಗಳು ಶೀಘ್ರಗತಿಯಲ್ಲಿ ಸಾಗುತ್ತಿವೆ. ಪರಿಹಾರವೇನು ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಜಮೀನಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಂದಾಯ ಇಲಾಖೆಯಲ್ಲಿ ಸಾಕಷ್ಟು ಅರ್ಜಿಗಳು ಬರುವದು ಸಹಜ. ಕೆಲವೊಂದು ಅರ್ಜಿಗಳಲ್ಲಿ ಮೂಡಾದಿಂದ ನಿವೇಶನಕ್ಕಾಗಿ ಗುರುತಿಸಲಾಗಿರುವ ಸ್ಥಳದ ಬಗ್ಗೆ ಪರಿಶೀಲನೆ ಮಾಡಲಾಗುವದೆಂದು ಹೇಳಿದರು.
ಊಹಾ ಪೋಹ ಬೇಡ
ಜಿಲ್ಲೆಯಲ್ಲಿ ಬಾಂಗ್ಲಾದೇಶಿಗರು ಅಸ್ಸಾಮಿಗಳ ಸೋಗಿನಲ್ಲಿ ನೆಲೆಸಿದ್ದಾರೆ ಎಂಬ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಭಾರತೀಯರು ದೇಶದ ಯಾವದೇ ಮೂಲೆಗಳಲ್ಲಿ ತೆರಳಿ ಕೆಲಸ ಮಾಡಬಹುದಾಗಿದೆ. ಅದಕ್ಕೆ ಯಾವದೇ ನಿರ್ಬಂಧವಿಲ್ಲ. ಆದರೆ, ಬಾಂಗ್ಲಾದೇಶಿಗರು ನೆಲೆಸಿದ್ದಾರೆಂಬ ಬಗ್ಗೆ ಪತ್ತೆ ಹಚ್ಚುವ ಸಲುವಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.