ಮಡಿಕೇರಿ, ಸೆ. 14: ಪಕ್ಷ ದ್ರೋಹವೆಸಗಿ ಬಿಜೆಪಿಯನ್ನು ಬೆಂಬಲಿಸಿದ ಸದಸ್ಯರಾದ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ಅವರುಗಳಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ಅರ್ಹತೆ ಇಲ್ಲವೆಂದು ನಗರ ಕಾಂಗ್ರೆಸ್ ಘಟಕ ತಿರುಗೇಟು ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಘಟಕದ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್, ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎನ್ನುವ ಟೀಕೆ ಅತ್ಯಂತ ಖಂಡನೀಯವಾಗಿದ್ದು, ಪಕ್ಷದ ಮೂಲಕ ಗೆಲುವು ಸಾಧಿಸಿ ನಗರಸಭಾ ಸದಸ್ಯರುಗಳಾಗಿರುವ ಇವರುಗಳಿಗೆ ಯಾವ ರೀತಿಯ ರಕ್ಷಣೆ ನೀಡಬೇಕೆಂದು ಪ್ರಶ್ನಿಸಿದರು.

ಪಕ್ಷ ದ್ರೋಹ ಮಾಡಿರುವ ಇವರಿಗೆ ನಗರದ ಮತದಾರರು ಮುಂದಿನ ದಿನಗಳಲ್ಲಿ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಅಬ್ದುಲ್ ರಜಾಕ್ ತಿಳಿಸಿದರು.

ನಗರಸಭಾ ಸದಸ್ಯ ಹೆಚ್.ಎಂ. ನಂದಕುಮಾರ್ ಮಾತನಾಡಿ, ಅಧ್ಯಕ್ಷ ಸ್ಥಾನದಲ್ಲಿದ್ದ ಶ್ರೀಮತಿ ಬಂಗೇರ ಅವರಿಂದ ಜನರಿಗೆ ಆಗುತ್ತಿದ್ದ ಕಿರುಕುಳವನ್ನು ತಪ್ಪಿಸಲು ತಾನು ಅನಿವಾರ್ಯವಾಗಿ ಕಿರುಕುಳ ನೀಡಬೇಕಾಯಿತೆಂದು ಸಮರ್ಥಿಸಿ ಕೊಂಡರು.

ಶ್ರೀಮತಿ ಬಂಗೇರ ಅವರನ್ನೆ ಅಧ್ಯಕ್ಷರನ್ನಾಗಿ ಮುಂದುವರಿಸಲು ಬಿಜೆಪಿ ಮಂದಿ ಮಾಡಿಕೊಂಡ ಒಪ್ಪಂದದ ಬಗ್ಗೆ ಬಿಜೆಪಿಯೊಳಗೆ ಅಸಮಾಧಾನವಿತ್ತು. ನನ್ನ ಬಳಿ ಕೆಲ ಕಾರ್ಯಕರ್ತರೆ ಈ ಬೆಳವಣಿಗೆಯನ್ನು ತಪ್ಪಿಸುವಂತೆ ಸಲಹೆ ನೀಡಿದ್ದರು ಎಂದು ನಂದ ಕುಮಾರ್ ಹೇಳಿದರು. ಕಳೆದ ಒಂದು ವರ್ಷದ ಅವಧಿಯಲ್ಲಿ ನಗರದಲ್ಲಿ ಯಾವದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಸಮಸ್ಯೆಗಳು ತಾಂಡವವಾಡುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಮತ್ತು ಅಶುಚಿತ್ವ ಮಿತಿ ಮೀರಿತ್ತು. ಪೌರಾಯುಕ್ತರು ಹಾಗೂ ನೌಕರರು ಹಿಡಿತದಲ್ಲಿ ಇಲ್ಲದೆ ಇದ್ದುದಕ್ಕೆ ಶ್ರೀಮತಿ ಬಂಗೇರ ಅವರ ವರ್ತನೆಯೆ ಕಾರಣ ಎಂದು ಆರೋಪಿಸಿದರು.

ಕುಂಡಾಮೇಸ್ತ್ರಿ ಯೋಜನೆಯಲ್ಲಿ 2 ಲಕ್ಷ ರೂ. ವೆಚ್ಚದಲ್ಲಿ ಮರಳಿನ ತಡೆಗೋಡೆ ನಿರ್ಮಾಣದಲ್ಲಿ 20 ಲಕ್ಷ ವೆಚ್ಚ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ನನ್ನ ವಿರುದ್ಧ ಬಿಜೆಪಿ ಸದಸ್ಯರು ಹರಿಹಾಯುತ್ತಿದ್ದಾರೆ. 2014 ರಲ್ಲಿ 20 ಲಕ್ಷ ರೂ.ಗಳಿಗೆ ಟೆಂಡರ್ ಮಾಡಿದ್ದ ಯೋಜನೆ 2016 ರಲ್ಲಿ 7 ಲಕ್ಷ ರೂ.ಗಳಲ್ಲಿ ಟೆಂಡರ್ ನಡೆಸಲಾಗಿದೆ. ಇದರಿಂದಲೇ ಅವ್ಯವಹಾರದ ಬಗ್ಗೆ ಸ್ಪಷ್ಟವಾಗುತ್ತದೆ ಎಂದು ನಂದ ಕುಮಾರ್ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ಎ.ಸಿ. ದೇವಯ್ಯ, ಮಾಜಿ ಅಧ್ಯಕ್ಷರಾದ ಜುಲೇಕಾಬಿ ಹಾಗೂ ಮಾಜಿ ಉಪಾಧ್ಯಕ್ಷರಾದ ಲೀಲಾ ಶೇಷಮ್ಮ ಉಪಸ್ಥಿತರಿದ್ದರು.