ಸುಂಟಿಕೊಪ್ಪ, ಆ.31: ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಕೂಪನ್ ವ್ಯವಸ್ಥೆ ತಂದಿರುವದರಿಂದ ಕೂಲಿ ಕಾರ್ಮಿಕರು ಕೂಪನ್ ಪಡೆಯಲು ಸೋಮವಾರಪೇಟೆ ಕಚೇರಿಗೆ ಅಲೆದಾಡುವಂತಾಗಿದೆ. ಕೂಪನ್ ವ್ಯವಸ್ಥೆ ರದ್ದುಪಡಿಸಿ ಯಥಾಸ್ಥಿತಿ ಮುಂದುವ ರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.
ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ನಡೆದ ಸುಂಟಿಕೊಪ್ಪ ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ಈ ಒತ್ತಾಯ ಕೇಳಿ ಬಂತು.
ಸರಕಾರದ ಸೌಲಭ್ಯಗಳನ್ನು ಪಡೆಯಲು ಸಮಸ್ಯೆಗಳನ್ನು ಹೊತ್ತು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸಭೆಗೆ ಆಗಮಿಸಿದ್ದರು. ಆಹಾರ, ಕಂದಾಯ, ಸೆಸ್ಕ್, ಇಲಾಖೆಗಳಲ್ಲಿ ಜನರಿಗೆ ಆಗುವ ತೊಂದರೆಗಳ ಬಗ್ಗೆ ಸಾರ್ವಜನಿಕರು ಸಭೆಯ ಗಮನ ಸೆÀಳೆದರು. ನ್ಯಾಯಬೆಲೆ ಅಂಗಡಿಯಲ್ಲೇ ಕೂಪನ್ ವ್ಯವಸ್ಥೆ ಕಲ್ಪಿಸಿಕೊಡಿ ಇಲ್ಲದಿದ್ದರೆ ಇದನ್ನು ರದ್ದುಪಡಿಸಿ ಯಥಾಸ್ಥಿತಿ ಮುಂದುವರಿಸಿ ಎಂದು ಆಗ್ರಹಿಸಿದರು.
ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ್ ನಾಯಕ್ ಮಾತನಾಡಿ ಸರಕಾರದ ಆದೇಶದ ಪ್ರಕಾರ ನಿಜವಾದ ಬಡವರಿಗೆ ಬಿಪಿಎಲ್ ಕಾರ್ಡು ಸಿಗಬೇಕು. ಅದರ ದುರುಪಯೋಗವಾಗಬಾರದೆಂದು ಸರಕಾರ ಈ ನಿಯಮ ತಂದಿದೆ. ಸುಂಟಿಕೊಪ್ಪದ ಪಂಚಾಯಿತಿಯಲ್ಲಿ ಆಹಾರ ಇಲಾಖೆಯಿಂದ ವಾರದಲ್ಲಿ 2 ಬಾರಿ ಕೂಪನ್ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗುವದೆಂದರು.
ತಹಶೀಲ್ದಾರ್ ಶಿವಪ್ಪ ಮಾತನಾಡಿ ಸರಕಾರದ ಸೌಲಭ್ಯವನ್ನು ಜನರ ಬಳಿ ಕೊಂಡೊಯ್ಯಲು ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ. ಇಲ್ಲಿ ಯಾವದೇ ರೀತಿಯ ಸಾರ್ವಜನಿಕರ ಸಮಸ್ಯೆ ಇದ್ದರೂ ಚರ್ಚಿಸಬಹುದು ಕೆಲವು ಗ್ರಾಮವನ್ನು ಪೋಡಿ ಮುಕ್ತ ಗ್ರಾಮವನ್ನಾಗಿಸಲಾಗಿದೆ ಎಂದು ಹೇಳಿದರು.
ಕಾನ್ಬೈಲ್ ಬೈಚನಹಳ್ಳಿಯಲ್ಲಿ ಅಂಗನವಾಡಿ ಕೇಂದ್ರಕ್ಕೆ ಜಾಗ ಗುರುತಿಸಲಾಗಿದೆ ಆದರೂ ಕಟ್ಟಡ ನಿರ್ಮಿಸಿಲ್ಲ. ದನದ ಕೊಟ್ಟಿಗೆಯಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದೆ. ಕೂಡಲೇ ಕಟ್ಟಡ ನಿರ್ಮಿಸಿಕೊಡಿ ಎಂದು ನಾಕೂರು ಶಿರಂಗಾಲ ಗ್ರಾ.ಪಂ.ಸದಸ್ಯ ಚಂದ್ರಶೇಖರ್ ಆಗ್ರಹಿಸಿದರು.
ಗದ್ದೆಹಳ್ಳ ನಾರ್ಗಾಣೆ ಗ್ರಾಮದಲ್ಲಿ ಚೆಸ್ಕಾಂ ವತಿಯಿಂದ ವಿದ್ಯುತ್ ಕಂಬ ಅಳವಡಿಸಲು ಗುಂಡಿಗಳನ್ನು ತೆಗೆದು 3 ತಿಂಗಳಾದರೂ ಏನು ಕ್ರಮಕೈಗೊಂಡಿಲ್ಲ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎಫ್.ಸಬಾಸ್ಟಿನ್ ಅಸಮಾಧಾನ ವ್ಯಕ್ತಪಡಿಸಿದರು.
ತೊಂಡೂರು ಗ್ರಾಮದ ಭಾಸ್ಕರ ಎಂಬವರು ತಾನು 2011ರಲ್ಲಿ ಭಾಗ್ಯಜ್ಯೋತಿ ವಿದ್ಯುತ್ಗೆ ಸಂಬಂಧಿಸಿ ದಂತೆ 4000 ರೂ ಬಿಲ್ ಪಾವತಿಸಿದ್ದು ಅದು ನನ್ನ ವಿದ್ಯುತ್ ಮೀಟರ್ ಸಂಖ್ಯೆಯ ಬದಲಿಗೆ ಬೇರೆ ನಂಬರಿಗೆ ಪಾವತಿಯಾಗಿದೆ ಈಗ ವಿದ್ಯುತ್ ಸಿಗುತ್ತಿಲ್ಲ ಬಿಲ್ ಬರುತ್ತಿಲ್ಲ ಎಂದು ಅವ¯ತ್ತುಕೊಂಡರು.
ಸುಂಟಿಕೊಪ್ಪ ಬೃಹತ್ ಕಾಫಿ ತೋಟಗಳ ಮಾಲೀಕರು ಒತ್ತುವರಿ ಮಾಡಿಕೊಂಡ ಸರಕಾರಿ ಪೈಸಾರಿ ಜಾಗವನ್ನು ಸರ್ವೆ ನಡೆಸಿ ಬಸ್ ನಿಲ್ಧಾಣ ಹಾಗೂ ಮಾರುಕಟ್ಟೆ ನಿರ್ಮಿಸಲು ಅವಕಾಶ ಮಾಡಿಕೊಡಿ ಎಂದು ಶಾಸಕ ಅಪ್ಪಚ್ಚು ರಂಜನ್ ಅವರು ಉಪತಹಶೀಲ್ಧಾರ್ ಚಂದ್ರಶೇಖರಯ್ಯ ಅವರಿಗೆ ಸೂಚಿಸಿದರು.
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ಕೊರತೆ ನೀಗಿಸಿ ಎಂದು ಕೆದಕಲ್ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ರೈ ಹೇಳಿದರು. ಸರಕಾರಿ ಪೈಸಾರಿ ಜಾಗದಲ್ಲಿ ಮನೆಕಟ್ಟಿಕೊಂಡ ಫಲಾನುಭವಿಗಳಿಗೆ ಹಕ್ಕುಪತ್ರ ಫಲಾನುಭವಿಗಳಿಗೆ ಗುರುತಿನ ಚೀಟಿ, ಅಂಗವಿಕಲರಿಗೆ ಮನೆ ಹಕ್ಕು ಪತ್ರ ಭಾಗ್ಯಜ್ಯೋತಿ ಯೋಜನೆ ಬಾಂಡ್ ಹಾಗೂ ಹಕ್ಕು ಪತ್ರಗಳನ್ನು ವಿತರಿಸಲಾಯಿತು.
ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ತಾ.ಪಂ.ಸದಸ್ಯೆ ಒಡಿಯಪ್ಪನ ವಿಮಲಾವತಿ, ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಕೆದಕಲ್ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ರೈ, ನಾಕೂರು-ಶಿರಂಗಾಲ ಅಧ್ಯಕ್ಷೆ ರಂಜಿನಿ ಕುಂಞಕೃಷ್ಣ, ಹರದೂರು ಗ್ರಾ.ಪಂ. ಅಧ್ಯಕ್ಷೆ ಶೈಲಜಾ, ಕಂಬಿಬಾಣೆ ಅಧ್ಯಕ್ಷ ಕೆ.ಬಿ.ಕೃಷ್ಣ, ಕೊಡಗರಹಳ್ಳಿ ಗ್ರಾ.ಪಂ. ಅಧ್ಯಕ್ಷ ಕೆ.ಎ.ಅಬ್ಬಾಸ್, 7ನೇ ಹೊಸಕೋಟೆ ಉಪಾಧ್ಯಕ್ಷ ಮುಸ್ತಾಫ (ಕುಂಞಕುಟ್ಟಿ), ತಹಶೀಲ್ದಾರ್ ಬಿ.ಸಿ.ಶಿವಪ್ಪ, ಉಪತಹಶೀಲ್ಧಾರ್ ಚಂದ್ರಶೇಖರಯ್ಯ, ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಲೆಕ್ಕಿ ಗರು ಹಾಗೂ ಪಂಚಾಯಿತಿ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.