ವೀರಾಜಪೇಟೆ, ಜೂ. 19: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನು ಅವರ ನಿವಾಸದಲ್ಲಿ ಕೊಡಗು ಜಿಲ್ಲಾ ಜನತಾದಳದ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಭೇಟಿ ಮಾಡಿ ಕೊಡಗಿನ ಜ್ವಲಂತ ಸಮಸ್ಯೆಗಳ ಬಗ್ಗೆ ವಿಚಾರ ವಿನಿಮಯ ಮಾಡಿದರು.
ಪ್ರಧಾನಮಂತ್ರಿಯಾಗಿ ದೇವೇಗೌಡರ ಅಲ್ಪಾವಧಿಯ ದಿನಗಳು ರೈತನ ಪಾಲಿಗೆ ಚಿನ್ನದ ದಿನಗಳು. ಪ್ರಧಾನಮಂತ್ರಿಯಾಗಿ ಅವರು ದೇಶಕ್ಕೆ ಸಲ್ಲಿಸಿದ ಅಮೋಘ ಸೇವೆಗಾಗಿ ರೈತನ ಚಿನ್ನದ ದಿನಗಳನ್ನು ಪ್ರತಿಬಿಂಬಿಸುವ ಸಂಕೇತವನ್ನು ನೆನಪಿಸುವ ಫಲಕವನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಕೊಡಗು ಜಿಲ್ಲಾ ಜನತಾದಳದ ಕಾರ್ಯಕರ್ತರ ಪರವಾಗಿ ಸಂಕೇತ್ ಪೂವಯ್ಯ ನೀಡಿ ಗೌರವಿಸಿದರು.
ಕೊಡಗಿನಲ್ಲಿ ಕಾಡಾನೆ ಧಾಳಿಯಿಂದ ನಿರಂತರ ಪ್ರಾಣಹಾನಿಯಂತಹ ದುರಂತ ಸಂಭವಿಸುತ್ತಿರುವದು, ಜಿಲ್ಲೆಯಲ್ಲಿ ಮಳೆ ವಿಫಲಗೊಂಡುದಲ್ಲದೆ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಕುಸಿತದಿಂದ ಕಾಫಿ ಬೆಳೆಗಾರರು ಅನುಭವಿಸುತ್ತಿರುವ ಸಂಕಷ್ಟಗಳು ಸೇರಿದಂತೆ ಇತರ ಗಂಭೀರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಜ್ವಲಂತ ಸಮಸ್ಯೆಗಳ ಬಗ್ಗೆ ಪರಿಹಾರಕ್ಕೆ ಮಾರ್ಗದರ್ಶನ ನೀಡಿದ ದೇವೇಗೌಡ ಅವರು ಜನತಾದಳ ಪಕ್ಷವನ್ನು ಕಾರ್ಯಕರ್ತರು ಬುಡಮಟ್ಟದಿಂದಲೇ ಬಲಿಷ್ಠ ಸಂಘಟನೆಗೊಳಿಸಲು ಪ್ರಯತ್ನಿಸುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಕೇತ್ ಪೂವಯ್ಯ ಅವರು ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗಾಗಿ ಮತಗಟ್ಟೆ ರಚನೆ, ಪಕ್ಷದ ಸದಸ್ಯರ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ, ಮುಂದೆಯೂ ಪಕ್ಷದ ಸಂಘಟನೆ ಕಾರ್ಯ ಮುಂದುವರೆಯುವದಾಗಿ ಹೇಳಿದರು. ರಾಜ್ಯದ ಅಚ್ಚ ಕನ್ನಡಿಗ, ರೈತನ ಆಪ್ತಮಿತ್ರ, ಗ್ರಾಮೀಣಾಭಿವೃದ್ಧಿ ಹಾಗೂ ಅಧಿಕಾರ ವಿಕೇಂದ್ರೀಕರಣದ ಹರಿಕಾರ ದೇವೇಗೌಡ ಅವರು, ಈ ದೇಶದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿ 2016ರ ಜೂನ್ 1 ಕ್ಕೆ 20 ವರ್ಷಗಳು ಪೂರ್ಣಗೊಂಡಿವೆ. ಇದರ ಸವಿನೆನಪಿಗಾಗಿ ದೇವೇಗೌಡ ಅವರಿಗೆ ಫಲಕ ನೀಡಲಾಯಿತು ಎಂದು ಸಂಕೇತ್ ಪೂವಯ್ಯ ತಿಳಿಸಿದರು.