ನಾಪೆÇೀಕ್ಲು, ನ. 21: ಪ್ರವಾಸಿಗರ ಅಚ್ಚುಮೆಚ್ಚಿನ ತಾಣ, ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರ ಎಂದು ಖ್ಯಾತಿಗಳಿಸಿರುವ ಚೆಯ್ಯಂಡಾಣೆ ಸಮೀಪದ ಚೇಲಾವರ ಜಲಪಾತದಲ್ಲಿ ತಿಳಿದೋ, ತಿಳಿಯದೇ ಎಂಬಂತೆ ಹಲವು ಮುಗ್ಧ ಜೀವಗಳ ಪ್ರಾಣ ಹರಣವಾಗಿದೆ. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗುತ್ತಿದ್ದರೂ ಇದಕ್ಕೂ ತಮಗೂ ಯಾವದೇ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಜಿಲ್ಲಾಡಳಿತ, ಜಿಲ್ಲೆಯ ಅಧಿಕಾರಿಗಳೂ ಈ ಹಿಂದೆ ವರ್ತಿಸಿರುವದೂ ಕಂಡು ಬಂದಿದೆ.ಆದರೆ ಈ ಪ್ರಕರಣಕ್ಕೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಈಗಿನ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮತ್ತು ಜಿಲ್ಲಾ ಪೆÇಲೀಸ್ ಉನ್ನತಾಧಿಕಾರಿ ರಾಜೇಂದ್ರ ಪ್ರಸಾದ್ ದಿಟ್ಟ ಹೆಜ್ಜೆಯಿರಿಸಿದ್ದಾರೆ. ಈ ಬಗ್ಗೆ ಕ್ರಮಕೈಗೊಂಡ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪ್ರವಾಸೋದÀ್ಯಮ ಇಲಾಖೆ, ನಿರ್ಮಿತಿ ಕೇಂದ್ರ, ಪೆÇಲೀಸ್ ಇಲಾಖೆ, ಕಂದಾಯ ಇಲಾಖಾಧಿಕಾರಿಗಳನ್ನು ಜಲಪಾತಕ್ಕೆ ಕರೆಸಿಕೊಂಡು ಸುವ್ಯವಸ್ಥೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಪ್ರವಾಸಿಗರ ಪ್ರಾಣ ಹಾನಿ ತಪ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭ ಚುನಾಯಿತ ಜನಪ್ರತಿನಿಧಿಗಳು ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು. ಸದಸ್ಯರು ಜಿಲ್ಲಾಧಿಕಾರಿಗಳಿಗೆ ಜಲಪಾತದಲ್ಲಿ ಕೈಗೊಳ್ಳಬಹುದಾದ ಕಾಮಗಾರಿ, ಸಮಸ್ಯೆ, ಪ್ರಾಣ ಹಾನಿಯ ಬಗ್ಗೆ ವಿವರಿಸಿದರು.
ಪ್ರಾಣ ಹಾನಿಗೆ ಅವಕಾಶವಿಲ್ಇನ್ನು ಮುಂದೆ ಈ ಜಲಪಾತ ದಲ್ಲಿ ಪ್ರಾಣ ಹಾನಿ ಸಂಭವಿಸದಂತೆ ತಡೆಗಟ್ಟಲು ಜಲಪಾತದಲ್ಲಿನ ಸುಮಾರು 30 ಅಡಿ ಆಳದ ಮತ್ತು ಕಲ್ಲು ಬಂಡೆಯ ಕೆಳಗೆ ಉಂಟಾಗಿರುವ ಗೋಳಾಕೃತಿಯ ಸ್ಥಳಕ್ಕೆ ಕಲ್ಲು ಬಂಡೆಗಳನ್ನು ಹಾಕಿ ಮುಚ್ಚುವದರ ಮೂಲಕ ಜಲಪಾತದ ಗುಂಡಿಯಲ್ಲಿ 3 ರಿಂದ 5 ಅಡಿಗಳಷ್ಟು ಮಾತ್ರ ನೀರು ನಿಲ್ಲುವಂತೆ ಕಾಮಗಾರಿ ಕೈಗೊಳ್ಳಲು ವ್ಯವಸ್ಥೆಗೊಳಿಸಲಾಗಿದೆ. ಇದಕ್ಕಾಗಿ ಜಲಪಾತದ ಮೇಲ್ಭಾಗದಲ್ಲಿರುವ ಸಣ್ಣ ಬಂಡೆಗಳನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ನಂತರ ಯಾವದೇ ಪ್ರಾಣ ಹಾನಿ ಸಂಭವಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಮೂಲಭೂತ ಸೌಲಭ್ಯ
ಜಲಪಾತ ವೀಕ್ಷಿಸಲು ತೆರಳುವ ಪ್ರವಾಸಿಗರಿಗೆ ಇಲ್ಲಿ ಯಾವದೇ ಮೂಲಭೂತ ಸೌಲಭ್ಯಗಳಿಲ್ಲ. ಕಾಡು ಮರಗಳ, ಗಿಡಂಗಂಟಿಗಳ, ಬೇರು, ಕಲ್ಲುಗಳ ನಡುವೆ ನಡೆದಾಡುವ ಸಂದರ್ಭದಲ್ಲಿ ಸ್ವಲ್ಪ ಎಚ್ಚರ ತಪ್ಪಿದ್ದರೂ ಕೈ, ಕಾಲು ಮುರಿದುಕೊಳ್ಳುವ ಭೀತಿಯಿದೆ. ಇದನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು ಜಲಪಾತಕ್ಕೆ ತೆರಳುವ ದಾರಿಗೆ ಮೆಟ್ಟಿಲು ನಿರ್ಮಿಸಲು ಆದೇಶಿಸಿದ್ದಾರೆ. ಅದರಂತೆ ಒಬ್ಬರ ಬದಲಿಗೆ ಇಬ್ಬರು ಗೈಡ್ಸ್ಗಳು ಮತ್ತು ಅವರಿಗೆ ಕಾರ್ಯನಿರ್ವಹಿಸಲು ಶೆಡ್ ನಿರ್ಮಾಣ ಮಾಡುವಂತೆ ತಿಳಿಸಿದ್ದಾರೆ.
ಒಪ್ಪಿದರೆ ಎಲ್ಲಾ ಓಕೆ
ಜಲಪಾತಕ್ಕೆ ತೆರಳುವ ದಾರಿ ಖಾಸಗಿ ಆಸ್ತಿಯಾಗಿದೆ. ಈ ಎಲ್ಲಾ ಕಾರ್ಯಗಳು ನಡೆಯಬೇಕಾದರೂ ಅವರು ಜಾಗ ಬಿಟ್ಟುಕೊಟ್ಟರೆ ಮಾತ್ರ ಸಾಧ್ಯ. ಈ ಜಾಗದ ಮಾಲೀಕರೊಂದಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಂಡ್ಯೋಳಂಡ ರವಿ ಸೋಮಣ್ಣ, ಸದಸ್ಯ ಕೋಡಿರ ಪ್ರಸನ್ನ ತಮ್ಮಯ್ಯ ದೂರವಾಣಿ ಮೂಲಕ ವ್ಯವಹರಿಸಿದ್ದು ಜಾಗ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇವರು ಜಾಗ ನೀಡಿದ್ದೇ ಆದಲ್ಲಿ ಎಲ್ಲಾ ಸಮಸ್ಯೆಗಳೂ ಸುಖಾಂತ್ಯಗೊಳ್ಳಲಿದೆ.
ಕಾಮಗಾರಿಗೆ ಕಾಲಾವಕಾಶ
ಮೊದಲು ಜಾಗ ಸಿಗಬೇಕು. ಕಾಮಗಾರಿ ಆರಂಭಕ್ಕೆ ಜಲಪಾತದ ನೀರು ಕಡಿಮೆಯಾಗಬೇಕು. ಇಟಾಚಿ, ಜೆಸಿಬಿ ಯಂತ್ರ ಬಳಸಲು ಸಾಧ್ಯವಿಲ್ಲದ ಕಾರಣ ಕಾಮಗಾರಿಯನ್ನು ಆಳುಗಳೇ ಮಾಡಬೇಕಾಗುತ್ತದೆ. ಆದುದರಿಂದ ನೀರು ಕಡಿಮೆಯಾಗದೆ ಕಾಮಗಾರಿ ಆರಂಭಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ನಿರ್ಮಿತಿ ಕೇಂದ್ರದ ಅಧಿಕಾರಿ ಸಚಿನ್ ಜಿಲ್ಲಾಧಿಕಾರಿಗಳಿಗೆ ವಿವರಣೆ ನೀಡಿದರು.
ಮೋಜು ಮಸ್ತಿಗೆ ಅವಕಾಶವಿಲ್ಲ
ಇಲ್ಲಿ ಮೋಜು ಮಸ್ತಿಗಾಗಿ ಬರುವವರೇ ಹೆಚ್ಚು ಎಂಬ ದೂರು ಕೇಳಿ ಬಂದ ನಿಟ್ಟಿನಲ್ಲಿ ಮಾತನಾಡಿದ ಜಿಲ್ಲಾ ಪೆÇಲೀಸ್ ಉನ್ನತಾಧಿಕಾರಿ ರಾಜೇಂದ್ರ ಪ್ರಸಾದ್ ಇನ್ನು ಮುಂದೆ ಮೋಜು ಮಾಡುವವರಿಗೆ ಇಲ್ಲಿ ಅವಕಾಶವಿಲ್ಲ. ಸಿಸಿ ಕ್ಯಾಮರಾ ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆ. ಕಾನೂನು ಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದ್ದಾರೆ.
‘ಶಕ್ತಿ’ ವರದಿಗೆ ಸ್ಪಂದನೆ
ಈ ಜಲಪಾತದಲ್ಲಿ ನಡೆಯುತ್ತಿರುವ ಪ್ರಾಣ ಹಾನಿ, ಸಮಸ್ಯೆಗಳು, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ‘ಶಕ್ತಿ’ ಹಲವು ಬಾರಿ ಚಿತ್ರ ಸಹಿತ ವರದಿ ಪ್ರಕಟಿಸಿ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನ ಸೆಳೆದಿತ್ತು. ಆದರೆ ವಿಳಂಬವಾಗಿಯಾದರೂ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿರುವದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಂದರ್ಭ ಪ್ರವಾಸೋಧ್ಯಮ ಇಲಾಖಾಧಿಕಾರಿ ಸಿ.ಜಗನ್ನಾಥ್, ಭೂ ಮತ್ತು ಗಣಿ ವಿಜ್ಞಾನ ಕೇಂದ್ರದ ಶಾಸ್ತ್ರಜ್ಞ ನಾಂಗೇದ್ರಪ್ಪ, ಡಿವೈಎಸ್ಪಿ ಸೋಮಶೇಖರ ಛಬ್ಬಿ, ಇ.ಓ.ಎಜಾಜ್ ಪಾಷ, ನಾಪೆÇೀಕ್ಲು ಪೆÇಲೀಸ್ ಠಾಣಾಧಿಕಾರಿ ಬಿ.ಎಸ್.ವೆಂಕಟೇಶ್, ಕಂದಾಯ ಪರಿವೀಕ್ಷಕ ರಾಮಯ್ಯ, ಗ್ರಾಮಲೆಕ್ಕಿಗೆ ಬೋಜಮ್ಮ, ಪಿ.ಡಿ.ಓ. ಸಚಿನ್, ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೇಬಿ ಶಿವಪ್ಪ, ಸದಸ್ಯರಾದ ರಾಜಲಕ್ಷ್ಮಿ, ಲಲಿತಾ, ಅನಂತ ಕುಮಾರ್, ಬಿ.ಇ.ಶಾಂತಿ, ರತೀಶ್ ಕುಮಾರ್ ಮತ್ತಿತರರು ಇದ್ದರು,