ಮಡಿಕೇರಿ, ಆ. 28: ನಿನ್ನೆ ದಿನ ಸರಕಾರಿ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಚೀಲಗಳಲ್ಲಿದ್ದದ್ದು ಗೋಮಾಂಸ ಎಂದು ದೃಢಪಟ್ಟಿದೆ. ಈ ಬಗ್ಗೆ ಪಶು ವೈದ್ಯಾಧಿಕಾರಿಗಳು ದೃಢೀಕರಿಸಿದ್ದಾರೆ.

ನಿನ್ನೆದಿನ ನಗರದ ಸರಕಾರಿ ಬಸ್ ನಿಲ್ದಾಣದಲ್ಲಿ ಚೀಲಗಳಲ್ಲಿ ಪತ್ತೆ ಯಾಗಿದ್ದ ಮಾಂಸ ಗೋಮಾಂಸವೇ ಅಥವಾ ಜಿಂಕೆಯ ಮಾಂಸವೇ ಎಂಬ ಬಗ್ಗೆ ಸಂಶಯ ವ್ಯಕ್ತಗೊಂಡಿತ್ತು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಮಡಿಕೇರಿ ನಗರ ಪೊಲೀಸರು ಚೀಲದಲ್ಲಿದ್ದ ಮಾಂಸ ಮಾತ್ರವಲ್ಲದೆ ಅದನ್ನು ಬಸ್‍ನಿಂದ ಸ್ವೀಕರಿಸಿದ್ದ ಖಾದರ್‍ನನ್ನು ವಶಕ್ಕೆ ಪಡೆದುಕೊಂಡಿದ್ದರು. ಇಂದು ಅದು ಗೋಮಾಂಸ ಎಂಬದು ಪತ್ತೆಯಾಗಿದ್ದು, ಖಾದರ್‍ನನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಮಾತ್ರವಲ್ಲದೆ ಬಸ್‍ನಲ್ಲಿ ಮಾಂಸ ಕಳುಹಿಸಿದ್ದ ನವೀದ್ ಎಂಬಾತನ ಪತ್ತೆಗೆ ಬಲೆ ಬೀಸಿದ್ದಾರೆ. ಸೆಕ್ಷನ್ 4, 5, 11 ರಡಿ ಪ್ರಕರಣ ದಾಖಲಾಗಿದೆ. ವೃತ್ತ ನಿರೀಕ್ಷಕ ಮೇದಪ್ಪ ಹಾಗೂ ಠಾಣಾಧಿಕಾರಿ ಭರತ್ ಮುಂದಿನ ಕ್ರಮಕೈಗೊಂಡಿದ್ದಾರೆ.