ಗೋಣಿಕೊಪ್ಪಲು, ಡಿ. 4: ಕೇಂದ್ರ ಸರ್ಕಾರ ಚಿನ್ನಕ್ಕೆ ಮಿತಿ ಹೇರಿರುವದು ಸಾಮಾನ್ಯ ವರ್ಗಕ್ಕೆ ಯಾವದೇ ರೀತಿಯ ಸಮಸ್ಯೆಯಾಗಿ ಪರಿಣಮಿಸುವದಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಗೋಣಿಕೊಪ್ಪ ಚಿನ್ನ-ಬೆಳ್ಳಿ ವರ್ತಕರ ಹಾಗೂ ಕೆಲಸಗಾರರ ಸಂಘದ ಸ್ವರ್ಣ ಭವನವನ್ನು ಉದ್ಘಾಟಿಸಿ ಮಾತನಾಡಿ, ಕಪ್ಪು ಹಣವನ್ನು ಹೊರತರುವ ಮೂಲಕ ದೇಶದ ಅರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಪ್ರಧಾನಿ ಮೋದಿಯವರ ದಿಟ್ಟ ಹೆಜ್ಜೆಗೆ ಪ್ರತಿಯೊಬ್ಬರು ಬೆಂಬಲ ನೀಡಬೇಕು. ಜನ್‍ಧನ್ ಯೋಜನೆಯ ಲಾಭವನ್ನು ಕಾಳಧನಿಕರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದರು. ಚಿನ್ನದ ಮೇಲೆ ವಿಧಿಸಿರುವ ಮಿತಿ ಮಧ್ಯಮ ವರ್ಗಕ್ಕೆ ಯಾವದೇ ರೀತಿಯ ತೊಂದರೆಯಾಗುವದಿಲ್ಲ. ಈ ನಿಯಮದಿಂದ ಕಾಳಧನ ಹೊರ ಬರುವದು ನಿಶ್ಚಿತ ಎಂದರು.
ಚಿನ್ನ ಬೆಳ್ಳಿ ವರ್ತಕರ ಸಂಘದ ಜಿಲ್ಲಾಧ್ಯಕ್ಷ ಕೆ.ಕೆ. ಶ್ರೀನಿವಾಸ್ ಮಾತನಾಡಿ, ಸಂಘಟನೆ ಸದಸ್ಯರಲ್ಲಿ ಭಾಂದವ್ಯ ವೃದ್ಧಿ ಮಾಡುತ್ತಿದೆ. ಸದಸ್ಯರ ಸಮಸ್ಯೆಗೆ ಸ್ಪಂದಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಸಂಘದ ಗೌರವಧ್ಯಕ್ಷ ಎಂ.ಜಿ. ಮೋಹನ್, ಸದಸ್ಯರ ಸಹಾಯದಿಂದ ಜಿಲ್ಲೆಯಲ್ಲಿ ಪ್ರಥಮ ಭವನ ನಿರ್ಮಾಣ ಮಾಡಿದ್ದೇವೆ. ಯಾವದೇ ದಾನಿಗಳ ಸಹಾಯ ಪಡೆಯದೆ ನಾವುಗಳೇ ಹಣ ಕ್ರೋಢೀಕರಿಸಿ ಭವನ ನಿರ್ಮಾಣ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಸೇವೆ ಗಳಲ್ಲಿಯೂ ತೊಡಗಿಸಿಕೊಳ್ಳುತ್ತೇವೆ ಎಂದರು.
ಚಿನ್ನ, ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ಗಜಾನನ ಶೇಟ್, ಕಾರ್ಯದರ್ಶಿ ವಿ.ವಿ. ಜಿತೇಂದ್ರ, ಸಹ ಕಾರ್ಯದರ್ಶಿ ಬಿ.ಎಸ್. ದಿನೇಶ್, ಖಜಾಂಜಿ ಕೆ.ಪಿ. ಪ್ರಶಾಂತ್, ತಾಲೂಕು ಧೈವಜ ಬ್ರಾಹ್ಮಣರ ಸಂಘದ ಅಧ್ಯಕ್ಷ ಎಂ.ಜಿ. ನಾಗರಾಜ್ ಹಾಜರಿದ್ದರು.
ವಿದ್ಯಾ ನಾರಾಯಣ್ ಪ್ರಾರ್ಥಿಸಿದರು, ಉಪಾಧ್ಯಕ್ಷ ಎಂ.ಜಿ. ನಾರಾಯಣ್ ಸ್ವಾಗತಿಸಿದರು, ಮಾದೇಟಿರ ಬೆಳ್ಯಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.