ಶ್ರೀಮಂಗಲ, ಜ. 6: ಶ್ರೀಮಂಗಲ ಠಾಣಾ ವ್ಯಾಪ್ತಿಯ ಚಿಕ್ಕಮುಂಡೂರು ಗ್ರಾಮದಲ್ಲಿ ತೋಟದ ಮನೆಗೆ ನುಗ್ಗಿ, ಮನೆಯಲ್ಲಿದ್ದ ಇಬ್ಬರು ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನಗದು ಹಾಗೂ ಕೋವಿಗಳನ್ನು ದೋಚಿರುವ ಪ್ರಕರಣದ ಸ್ಥಳಕ್ಕೆ ವೀರಾಜಪೇಟೆ ತಾಲೂಕು ಡಿ.ವೈ.ಎಸ್.ಪಿ. ನಾಗಪ್ಪ ನೇತೃತ್ವದಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.ಈ ಸಂಬಂಧÀ ಪೊಲೀಸರಿಗೆ ಗಾಯಾಳು ಮಹಿಳೆಯರಾದ ಕೋಟ್ರಮಾಡ ತಾರಾ ಗಂಗಮ್ಮ ಹಾಗೂ ಕೌಸಲ್ಯ ಗೋಣಿಕೊಪ್ಪ ಸರಕಾರಿ ಅಸ್ಪತ್ರೆಯಲ್ಲಿ ದೂರು ನೀಡಿದ್ದರೂ ಇದುವರೆಗೆ ಯಾವದೇ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.ಘಟನೆಯ ವಿವರ : ಚಿಕ್ಕಮುಂಡೂರು ಗ್ರಾಮದಲ್ಲಿ ಕಳೆದ ಹಲವು ವರ್ಷದ ಹಿಂದೆ ಗೋವಾದ ವಿದ್ಯಾನಗರ ಹೌಸಿಂಗ್ ಬೋರ್ಡ್ ನಿವಾಸಿ ದೇವಿದಾಸ್ ಹನುಮಂತ ನಾಯಕ್ ಅವರು ಸುಮಾರು 4.30 ಏಕ್ರೆಯಷ್ಟು ಜಾಗವನ್ನು ಚೇಂದಂಡ ಕುಟುಂಬದ ದೀಪು ಅವರಿಂದ ಖರೀದಿ ಮಾಡಿದ್ದರು. ಈ ಜಾಗದ ಮೇಲೆ ಈಗಾಗಲೇ ನ್ಯಾಯಾಲಯದಲ್ಲಿ ವಿವಾದವಿದೆ.
ಕಳೆದ ಒಂದು ವರ್ಷದ ಹಿಂದೆ 11-06-2015 ರಂದು ಪೊನ್ನಂಪೇಟೆಯ ನೋಟರಿ ಒಬ್ಬರಿಂದ 27 ಲಕ್ಷಕ್ಕೆ ಜಾಗವನ್ನು ಖರೀದಿಸಿದ ಮಾಣೀರ ವಾಸು ಮುತ್ತಣ್ಣ ಅವರು ದೇವಿದಾಸ್ ಹನುಮಂತ ನಾಯಕ್ ಅವರಿಂದ ನೋಂದಾವಣಿ ಮಾಡಿಸಿಕೊಂಡು, ರೂ. 5 ಲಕ್ಷ ಚೆಕ್ ನೀಡಿದ್ದರು ಎನ್ನಲಾಗಿದೆ. ಈ ತೋಟದ ಮನೆಗೆ ಬೆಳಗಾವಿಯಲ್ಲಿ ಉದ್ಯಮದಲ್ಲಿರುವ ಮೂಲತ: ವೆಸ್ಟ್ ನೆಮ್ಮಲೆ ಗ್ರಾಮದ ಮಾಣೀರ ವಾಸು ಮುತ್ತಣ್ಣ ಹಾಗೂ ಪತ್ನಿ ಕೌಸಲ್ಯ ಅವರು ಬಂದು ಹೋಗುತ್ತಿದ್ದು, ಇದೀಗ ಕಾಫಿ ಕೊಯ್ಲಿನ ಸಮಯವಾಗಿರುವದರಿಂದ ಇಲ್ಲಿಯೇ ವಾಸವಾಗಿದ್ದರು. ವಾಸು ಮುತ್ತಣ್ಣ ಅವರ ಸಹೋದರ ಗೋವಾದಲ್ಲಿ ಉದ್ಯಮ ನಡೆಸುತ್ತಿರುವ ಮಾಣೀರ ರಘು ಅವರಿಗೆ ದೇವಿದಾಸ್ ಹನುಮಂತ ನಾಯಕ್ ಸ್ನೇಹಿತರಾಗಿದ್ದಾರೆ. ತಾ.5 ರಂದು ದೇವಿದಾಸ್ ಹನುಮಂತ ನಾಯಕ್, ಮಾಣೀರ ರಘು, ಕಳ್ಳಿಚಂಡ ಗೋಕುಲ ಹಾಗೂ ಅವರ ಪತ್ನಿ ಶೀಲಾ ಮತ್ತು ಮಕ್ಕಳು ಸೇರಿದಂತೆ ಸುಮಾರು 15 ಜನರ ತಂಡ ತೋಟದ ಮನೆಯ ಬಾಗಿಲು ಮುರಿದು ನುಗ್ಗಿ, ಮನೆಯಲ್ಲಿದ್ದ ವಾಸು ಮುತ್ತಣ್ಣ ಅವರ ಪತ್ನಿ ಕೌಶಲ್ಯ ಹಾಗೂ ವಾಸು ಮುತ್ತಣ್ಣ ಅವರ ಸಹೋದರಿ ಕೋಟ್ರಮಾಡ ತಾರಾ ಗಂಗಮ್ಮ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಮೈಮೇಲಿದ್ದ ಬಟ್ಟೆಗಳನ್ನು ಹರಿದು ಹಾಕಿ ಹಲ್ಲೆ ಮಾಡಿ ಮನೆಯಲ್ಲಿದ್ದ ಎರಡು ನಳಿಕೆಯ ಕೋವಿ, ಒಂದು ಏರ್ಗನ್ ಅಲ್ಲದೇ ಕೌಸಲ್ಯ ಅವರ ಬ್ಯಾಗಿನಲ್ಲಿದ್ದ 1 ಲಕ್ಷ ನಗದು, ತಾರಾ ಗಂಗಮ್ಮ ಬಳಿಯಿದ್ದ ರೂ. 5 ಸಾವಿರ ಅಲ್ಲದೇ ಈ ಮಹಿಳೆಯರಿಬ್ಬರ ಮಾಂಗಲ್ಯ ಸರ, ನೆಕ್ಲೇಸ್, ಚಿನ್ನದ ಸರ, ಟಿ.ವಿ. ಸೇರಿದಂತೆ ಇತರ ಸಾಮಗ್ರಿಗಳನ್ನು ಹೊತ್ತೋಯ್ದಿದ್ದಾರೆ. ಕೊಲೆಯತ್ನ ಮಾಡಿ ಈ ವಿಚಾರವನ್ನು ತಿಳಿಸಿದರೆ ಕೊಲೆ ಮಾಡುವ ಬೆದರಿಕೆ ಒಡ್ಡಿದ್ದಾರೆ. ಜಾಗಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಮನೆಯ ಹೊರ ಅಂಗಳದಲ್ಲಿ ಸುಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂದರ್ಭ ವಾಸು ಮುತ್ತಣ್ಣ ಅವರು ತಿರುಪತಿಗೆ ತೆರಳಿದ್ದರು.
ತದನಂತರ ಗೋಣಿಕೊಪ್ಪ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ಮಾಹಿತಿ ನೀಡಿದರೂ ಪೊಲೀಸರು ಕೇಸು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ಮಾಣೀರ ವಾಸು ಮುತ್ತಣ್ಣ ಆರೋಪಿಸಿದ್ದಾರೆ.
ತಾ. 5 ರಂದು ಮಧ್ಯಾಹ್ನ 3 ಗಂಟೆಗೆ ಪ್ರಕರಣ ನಡೆದರೂ ಮಾಧ್ಯಮದವರ ಒತ್ತಡಕ್ಕೆ ರಾತ್ರಿ 11 ಗಂಟೆಗೆ ಪೊಲೀಸರು ತಾರಾ ಗಂಗಮ್ಮ ಅವರ ಹೇಳಿಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿ ದೇವಿದಾಸ್ ಹನುಮಂತ ನಾಯಕ್ ಹಾಗೂ ಅವರ ಕಡೆಯ ಆರೋಪಿಗಳು, ಕಾರ್ಮಿಕರಿಂದ ಈ ವಿವಾದಿತ ಜಾಗದಲ್ಲಿ ತಾ. 6 ರಂದು ಕಾಫಿ ಕುಯ್ಯುತ್ತಿದ್ದರು. ಇದಕ್ಕೆ ಆಕ್ಷೇಪಣೆ ಮಾಡಿದ ನಂತರ ಕಾಫಿ ಕುಯ್ಲನ್ನು ಪೊಲೀಸರು ನಿಲ್ಲಿಸಿದ್ದಾರೆ. ಪೊಲೀಸರೊಂದಿಗೆ ಮಾಧ್ಯಮದವರು ಸ್ಥಳಕ್ಕೆ ತೆರಳಿದಾಗ ಮನೆಯ ಮುಂಬಾಗಿಲು ಒಡೆದಿರುವದು ಗೋಚರವಾಗಿದೆ. ಮನೆಯಲ್ಲಿ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವದು ಕಂಡುಬಂದಿದೆ. ದೂರು ದಾಖಲಾಗಿದ್ದರೂ ಪ್ರಕರಣದಲ್ಲಿ ಆರೋಪಿಗಳಾಗಿರುವವರ ಮೇಲೆ ಎಪ್.ಐ.ಆರ್. ಮಾಡಲು ಪೊಲೀಸರು ಹಿಂದೇಟು ಹಾಕುತ್ತಿದ್ದು, ವಿವಾದಿತ ಜಾಗದಲ್ಲಿ ಮನೆಗೆ ನುಗ್ಗಿ ದರೋಡೆ ಮಾಡಿ ಕೊಲೆ ಬೆದರಿಕೆ ಒಡ್ಡಿ ಹಲ್ಲೆ ಮಾಡಿದ ದೇವಿದಾಸ್ ಹನುಮಂತ ನಾಯಕ್ ಹಾಗೂ ಇತರರು ಘಟನೆ ನಡೆದು ದೂರು ದಾಖಲಾದ ಬೆನ್ನಲ್ಲೇ ಕಾರ್ಮಿಕರನ್ನು ಕರೆದುಕೊಂಡು ಬಂದು ಕಾಫಿ ಕುಯ್ಯಲು ಮುಂದಾಗಿದ್ದು, ಪೊಲೀಸರ ಎದುರಿನಲ್ಲಿಯೇ ಕಾಫಿ ಕುಯ್ಯುತ್ತಾ, ಓಡಾಡುತ್ತಿದ್ದರೂ ಅವರನ್ನು ಬಂಧಿಸಿಲ್ಲ ಎಂದು ಮಾಣೀರ ವಾಸು ಮುತ್ತಣ್ಣ ಆರೋಪಿಸಿದ್ದಾರೆ.
ಈ ವಿಚಾರದ ಬಗ್ಗೆ ಡಿ.ವೈ.ಎಸ್.ಪಿ. ನಾಗಪ್ಪ ಅವರಲ್ಲಿ ಮಾಹಿತಿ ಬಯಸಿದಾಗ ಈಗಾಗಲೇ ಗಾಯಾಳು ಕೋಟ್ರಮಾಡ ತಾರಾ ಗಂಗಮ್ಮ ಹಾಗೂ ಕೌಶಲ್ಯ ನೀಡಿದ ಹೇಳಿಕೆಯ ದೂರನ್ನು ದಾಖಲಿಸಿಕೊಂಡಿದ್ದು, ಆರೋಪಿಗಳಾದ ದೇವಿದಾಸ್ ಹನುಮಂತ ನಾಯಕ್, ಮಾಣೀರ ರಘು, ಮಾಣೀರ ರೂಪ, ಕಳ್ಳಿಚಂಡ ಶೀಲ, ಕಳ್ಳಿಚಂಡ ಚಂಗಪ್ಪ, ನಾಚಪ್ಪ, ಕುಮಾರ, ಮಣಿ, ಗೀಜೆ ಹಾಗೂ ಪುಷ್ಪ ಅವರ ಮೇಲೆ ಸುಲಿಗೆ, ದರೋಡೆ ಸೇರಿದಂತೆ ಐ.ಪಿ.ಸಿ. ಸೆಕ್ಷನ್ 143, 147, 148, 506(2), 447, 427, 384, 324, ಖ/149 ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಕುಟ್ಟ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್, ಶ್ರೀಮಂಗಲ ಠಾಣಾಧಿಕಾರಿ ಹೆಚ್.ಸಿ. ಸಣ್ಣಯ್ಯ ಭೇಟಿ ನೀಡಿ ಪರಿಶೀಲಿಸಿದರು.