ಮಡಿಕೇರಿ, ಜೂ. 24: ಅಪೆಂಡಿಸೈಟಿಸ್ ಖಾಯಿಲೆಯಿಂದ ಬಳಲುತ್ತಿದ್ದ ಕಣಿವೆ ನಿವಾಸಿ ಮಮತಾ ಮೋಹನ್ ಅವರ ಚಿಕಿತ್ಸಾ ವೆಚ್ಚಕ್ಕಾಗಿ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ನೆರವಿನ ಹಸ್ತ ಚಾಚಿದೆ. ಸಾರ್ವಜನಿಕವಾಗಿ ಸಂಗ್ರಹವಾದ ಒಟ್ಟು ಮೊತ್ತ ರೂ. 25 ಸಾವಿರವನ್ನು ಮಮತಾ ಅವರ ತಾಯಿ ಲಲಿತಾ ಅವರಿಗೆ ಸಂಸ್ಥೆಯ ಪ್ರಮುಖರು ನಗರದಲ್ಲಿ ಹಸ್ತಾಂತರಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಮಾಡಿದ ಶಸ್ತ್ರ ಚಿಕಿತ್ಸೆ ಫಲಕಾರಿ ಯಾಗದೆ ರೋಗ ಉಲ್ಭಣಗೊಂಡ ಕಾರಣ ಮಮತಾಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸಾ ವೆಚ್ಚವನ್ನು ಬಡ ಕುಟುಂಬದಿಂದ ಭರಿಸಲಾಗದ ಕಾರಣ ಸಾರ್ವಜನಿಕವಾಗಿ ಹಣ ಸಂಗ್ರಹಿಸಿ ನೀಡಲಾಗಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ಇದೇ ಸಂದರ್ಭ ತಿಳಿಸಿದರು. ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಬಬ್ಬೀರ ಸರಸ್ವತಿ, ಸದಸ್ಯರುಗಳಾದ ಕೆ.ಎಸ್. ಗಣೇಶ್, ಇಬ್ರಾಹಿಂ, ಹೆಚ್.ಡಿ. ದಿಲೀಪ್ ಕುಮಾರ್, ತಮ್ಮಯ್ಯ, ಧನ್ಯ ಮತ್ತಿತರ ಪ್ರಮುಖರು ಸಹಾಯ ಧನ ಹಸ್ತಾಂತರಿಸುವ ಸಂದರ್ಭ ಹಾಜರಿದ್ದರು.