ಮಡಿಕೇರಿ, ಆ. 11: ಮಡಿಕೇರಿ ಉಪವಿಭಾಗದ ಮೂರ್ನಾಡು ಶಾಖಾ ಮಟ್ಟದಲ್ಲಿ ರಚಿಸಿರುವ ಗ್ರಾಹಕರ ಸಲಹಾ ಸಮಿತಿ ಸದಸ್ಯರ ಸಭೆ ಇತ್ತೀಚೆಗೆ ನಡೆಯಿತು.

ಸದಸ್ಯ ಧನಂಜಯ ಅವರು ಮಾತನಾಡಿ, ಕಾಂತೂರು ಮೂರ್ನಾಡು ವ್ಯಾಪ್ತಿಯ ವಿದ್ಯುತ್ ಮಾರ್ಗ ನಿರ್ವಹಣೆಗೆ ನುರಿತ ಅನುಭವಿ ಮಾರ್ಗದಾಳುಗಳನ್ನು ನಿಯೋಜಿಸಬೇಕು, ಸುಮಾರು 60ಕ್ಕೂ ಹೆಚ್ಚು ಮನೆಗಳಿರುವ ಚೂರಿಕಾಡು ಹಳ್ಳಿಗೆ ವಿದ್ಯುತ್ ವೋಲ್ಟೇಜ್ ತುಂಬ ಕಡಿಮೆ ಇರುವದರಿಂದ ಹೆಚ್ಚುವರಿ ಪರಿವರ್ತಕವನ್ನು ಅಳವಡಿಸಬೇಕು.

ಮೇಚೀರ ಎಂ. ನಾಣಯ್ಯ ಅವರ ಮನೆಯ ಸಮೀಪ ಮಧ್ಯಂತರ ಕಂಬ, ಉಳುವಾರನ ಪೊನ್ನಪ್ಪ ಮನೆಯ ಸಮೀಪ ಹಳೆಯದಾದ ಕಂಬದ ಬದಲಾವಣೆ, ತೀರ್ಥ ಅವರ ಮನೆಯ ಸಮೀಪ ವಿದ್ಯುತ್ ಮಾರ್ಗದ ಮಧ್ಯೆ ಇರುವ ಮರ ಕಡಿಯುವದು ಮತ್ತು ಮುತ್ತಾರ್ಮುಡಿ ಸೇತುವೆಯ ಸಮೀಪ ಬಾಗಿದ ಕಂಬ ಸರಿಪಡಿಸುವಂತೆ ಮನವಿಯನ್ನು ಸಲ್ಲಿಸಿ ಸಲಹೆಯನ್ನು ನೀಡಿದರು.

ಕೆ. ಇಂಜಿನಿಯರ್ ಅವರು ಉತ್ತರಿಸುತ್ತಾ, ಪರಿಶೀಲಿಸಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳುವದಾಗಿ ತಿಳಿಸಿದರು. ಸದಸ್ಯೆ ಭಾರತಿ ಅವರು ಮಾತನಾಡಿ, ಮೂರ್ನಾಡುವಿನ ವೆಂಕಟೇಶ್ವರ ಕಾಲೋನಿಯಲ್ಲಿ ಮಣ್ಣನ್ನು ತೆಗೆದಿರುವದರಿಂದ ಕಂಬ ಬೀಳುವ ಸ್ಥಿತಿ ಇದ್ದು, ಸರಿಪಡಿಸುವಂತೆ ಸಲಹೆ ನೀಡಿದರು. ಉತ್ತರಿಸಿದ ಅಧಿಕಾರಿ ಪರಿಶೀಲಿಸಿ ಸಮಸ್ಯೆ ಪರಿಹರಿಸುವಲ್ಲಿ ಕ್ರಮವನ್ನು ತೆಗೆದುಕೊಳ್ಳುವದಾಗಿ ತಿಳಿಸಿದರು.

ಸದಸ್ಯರುಗಳಾದ ಗಂಗಾಧರ ಅವರು ಮೂರ್ನಾಡಿನಿಂದ ಮರಗೋಡು, ಕಟ್ಟೆಮಾಡು, ಹೊಸ್ಕೇರಿ ಮತ್ತು ಅರೆಕಾಡು, ಹುಲಿತಾಳ ವ್ಯಾಪ್ತಿಯ ಗ್ರಾಹಕರಿಗೆ ವಿದ್ಯುತ್ ಸರಬರಾಜು ಮಾಡುವ ಮೂರ್ನಾಡು 11 ಕೆ.ವಿ. ಮಾರ್ಗವು ರಸ್ತೆ ಬದಿಯಲ್ಲಿ ಬರದೇ ಕಾಡು ತೋಟ, ಗದ್ದೆ, ಹಳ್ಳ, ದಿಣ್ಣೆಗಳ ಮೂಲಕ ಮಾರ್ಗವಾಗಿ ಬಂದಿರುವ ದರಿಂದ ವಿದ್ಯುತ್ ವ್ಯಥ್ಯಯ ಹೆಚ್ಚಾಗಿರುವದರಿಮದ ಮಾರ್ಗವನ್ನು ಮುಖ್ಯ ರಸ್ತೆಯ ಬದಿಯಲ್ಲಿ ಅಳವಡಿಸಬೇಕೆಂದು ಹಾಕತ್ತೂರು ಕುಂಟಕಣೆ ರಘು ಅವರ ಗದ್ದೆಯಲ್ಲಿ ಕೆಳಮಟ್ಟದಲ್ಲಿರುವ ವಿದ್ಯುತ್ ತಂತಿಯನ್ನು ಮೇಲಕ್ಕೇರಿಸುವಂತೆ ಸಲಹೆ ನೀಡಿದರು.

ಸಲಹಾ ಸಮಿತಿಯ ಸಂಚಾಲಕ ರಾದ ವಿನುತಾ ಅವರು ಸಭೆಯ ನಡಾವಳಿಗಳನ್ನು ಮತ್ತು ಸಲಹೆಗಳನ್ನು ಸೂಕ್ತ ಕ್ರಮಕ್ಕಾಗಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವದೆಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಸಲಹಾ ಸಮಿತಿ ಸದಸ್ಯರಾದ ವಿನುತಾ ಇ (ಸ.ಇಂ.ತಾ.), ರಮಾಕಾಂತ, ವಿ.ಎಂ. ಧನಂಜಯ, ಬಿ.ಕೆ. ಚೆಂಗಪ್ಪ, ಬಿ.ಕೆ. ಗಂಗಾಧರ, ಬಿ.ಎಲ್. ಭಾರತಿ ಹಾಜರಿದ್ದರು.