ಮೂರ್ನಾಡು- ಹೊದ್ದೂರು, ಡಿ. 17: ಜಿಲ್ಲೆಯ ವಿದ್ಯುತ್ ಗ್ರಾಹಕರಿಗೆ ಸೆಸ್ಕ್ ವಿನೂತನ ರೀತಿಯಲ್ಲಿ ಬಿಲ್ ಶಾಕ್ ನೀಡುತ್ತದೆ. ಈ ಪ್ರಕ್ರಿಯೆ ಹಲವಾರು ತಿಂಗಳುಗಳಿಂದ ನಡೆಯುತ್ತಿದೆ. ಒಂದೆಡೆ ಅಸಮರ್ಪಕ ವಿದ್ಯುತ್ ಸರಬರಾಜು, ಖರ್ಚು ಮಾಡಿದ ವಿದ್ಯುತ್‍ಗೆ ಅನಿರೀಕ್ಷಿತವಾಗಿ ಭಾರೀ ಮೊತ್ತದ ಬಿಲ್ ಬರುತ್ತಿರುವದು ಗ್ರಾಹಕರ ಜಂಘಾಬಲವನ್ನೇ ಉಡುಗಿಸುತ್ತಿದೆ. ಸಕಾಲಿಕವಾಗಿ ಬಾರದ ಬಿಲ್
ಸೆಸ್ಕ್‍ನ ನಿಯಮಾವಳಿಗಳ ಪ್ರಕಾರ ಸಂಸ್ಥೆಯು ಪ್ರತಿ ತಿಂಗಳೂ ತನ್ನ ಗ್ರಾಹಕರಿಗೆ ವಿದ್ಯುತ್ ಬಿಲ್ ನೀಡಬೇಕು. ಆದರೆ, ಬಿಲ್ ನೀಡುವ ಗುತ್ತಿಗೆಯನ್ನು ಮೈಸೂರಿನ ಇನ್ಫಿನಿಟಿ ಸಲ್ಯೂಶನ್ ಸಂಸ್ಥೆಯು ಪಡೆದುಕೊಂಡಿದೆ. ಈ ಸಂಸ್ಥೆಯು 2015ರ ಮಾರ್ಚ್ ತಿಂಗಳಿನಿಂದ ಮುಂದಿನ ಎರಡು ವರ್ಷಗಳವರೆಗೆ, ಅಂದರೆ, 2017ರ ಮಾರ್ಚ್‍ವರೆಗೆ ಗುತ್ತಿಗೆಗೆ ಪಡೆದುಕೊಂಡಿದೆ. ಈ ಸಂಸ್ಥೆಯು ಪ್ರತಿ ಮೀಟರ್ ಓದಲು ರೂ. 9ರಂತೆ ಟೆಂಡರ್ ಮೂಲಕ ಗುತ್ತಿಗೆ ಪಡೆದಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ದೂರದೂರದಲ್ಲಿ ಮನೆಗಳಿರುವದ ರಿಂದ ಸಕಾಲಿಕವಾಗಿ ಗ್ರಾಹಕರಿಗೆ ಬಿಲ್ ದೊರೆಯುತ್ತಿಲ್ಲ. ಪರಿಣಾಮ ಗ್ರಾಹಕರು ತಾವು ಬಳಸಿದ ಪ್ರತಿ ಯೂನಿಟ್‍ಗೆ ಮಾಮೂಲಿಗಿಂತ ಅಧಿಕ ಮೊತ್ತವನ್ನು ಪಾವತಿಸಬೇಕಾದ ದುರ್ಬರ ಪ್ರಸಂಗ ಎದುರಾಗಿದೆ!
ಗ್ರಾಹಕ ತಾನು ಪ್ರತಿ ತಿಂಗಳೂ 30 ಯೂನಿಟ್ ಬಳಸಿದ್ದಲ್ಲಿ ಅದಕ್ಕೆ ಆತ ಪ್ರತಿ ಯೂನಿಟ್‍ಗೆ ಕೇವಲ 2.90 ಪೈಸೆ ಮಾತ್ರ ಪಾವತಿಸಬೇಕಾಗುತ್ತದೆ. ಖಾಸಗಿ ಸಂಸ್ಥೆಯ ಮೀಟರ್ ಓದುಗರು ಐದಾರು ತಿಂಗಳಿಗೊಮ್ಮೆ ಮನೆಗೆ ತೆರಳುವಾಗ ಅದು ಸುಮಾರು 200 ಯೂನಿಟ್ ಅನ್ನು ದಾಟಿರುವ ಸಂಭವವಿದೆ. ಇದರಿಂದ ಆ ಗ್ರಾಹಕ ತಾನು ಖರ್ಚು ಮಾಡಿದ ಪ್ರತಿ ಯೂನಿಟ್‍ಗೆ 6.40 ನೀಡಬೇಕಾಗುತ್ತದೆ !
ಅನಗತ್ಯ ಹೊರೆ...!?
ಮೀಟರ್ ಅನ್ನು ಪ್ರತಿ ತಿಂಗಳಿಗೆ ಬದಲಾಗಿ ಐದಾರು ತಿಂಗಳಿಗೊಮ್ಮೆ ಓದಿದರೆ ಗ್ರಾಹಕ ಪ್ರತಿ ಯೂನಿಟ್‍ಗೆ ಸುಮಾರು 5.50 ಅಧಿಕ ಮೊತ್ತವನ್ನು ಪಾವತಿಸಬೇಕಾಗುತ್ತದೆ ! ಮನೆಗೆ ತೆರಳುವ ಮೀಟರ್ ಓದುಗರು ಮಾಸಿಕ ಅಥವಾ ಮಿನಿಮಮ್ ಬಿಲ್ ಕೊಟ್ಟಿದ್ದರೂ, ಇದೇ ರೀತಿ ಅನಾವಶ್ಯಕವಾಗಿ ಅಧಿಕ ಹೊರೆಯು ಗ್ರಾಹಕರ ಮೇಲೆ ಬೀಳುತ್ತದೆ. ಗ್ರಾಹಕರಿಗೆ ಇಂತಹ ತೊಂದರೆಯು ಎದುರಾಗಿದ್ದಲ್ಲಿ ಸಮೀಪದ ಸೆಸ್ಕ್ ಕಚೇರಿಗೆ ತೆರಳಿ ಈ ಲೋಪ ದೋಷವನ್ನು ಪರಿಹರಿಸಿ ಕೊಳ್ಳಬಹುದಾಗಿದೆ. ಈ ರೀತಿ ಸೆಸ್ಕ್ ಕಚೇರಿಯನ್ನು ಎಡತಾಕುವವರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಉದಾಹರಣೆಗಾಗಿ ಗ್ರಾಹಕನಿಗೆ ಇತ್ತೀಚೆಗೆ ಮೀಟರ್ ಓದುಗ ನೀಡಿದ್ದ ಬಿಲ್ಲ್‍ನಲ್ಲಿ ರೂ. 3850 ಎಂದು ನಮೂದಾಗಿತ್ತು. ಗ್ರಾಹಕನಿಗೆ ಸಂಶಯ ಬಂದು ಕೂಡಲೇ ಕಚೇರಿಯಲ್ಲಿ ವಿಚಾರಿಸಿದಾಗ ಬಿಲ್‍ನ ಮೊತ್ತ 2700 ರೂಪಾಯಿ ಬಂದಿತ್ತು.
ಮನಸ್ಸು ಬಂದಾಗ ವಿದ್ಯುತ್ ಬಿಲ್ ಪಾವತಿಸುವ ಗ್ರಾಹಕರಿಗೆ ದುಬಾರಿ ಬಿಲ್ ಬರುವದು ಮಾಮೂಲಿಯಾಗಿದೆ. ಇದನ್ನು ತಪ್ಪಿಸಲು ಜಾಣ ಗ್ರಾಹಕರು ಪ್ರತಿ ತಿಂಗಳೂ ತಮ್ಮ ವಿದ್ಯುತ್ ಮೀಟರ್ ಅನ್ನು ತಾವೇ ಓದಿ, ಅದರಲ್ಲಿರುವ ಕ್ರಮಾಂಕ, ಮತ್ತು ಬಳಕೆಯಾದ ಯೂನಿಟ್‍ಗಳನ್ನು ತಪ್ಪದೇ ಬರೆದುಕೊಂಡು, ಸಮೀಪದ ಸೆಸ್ಕ್ ಕಚೇರಿಗೆ ತೆರಳಿ ಬಿಲ್ ಅನ್ನು ಪಾವತಿಸಿದರೆ ಗ್ರಾಹಕನಿಗೆ ಪ್ರತಿವರ್ಷ ಸರಿ ಸುಮಾರು 2ರಿಂದ 3 ಸಾವಿರಕ್ಕೂ ಅಧಿಕ ಹಣ ಉಳಿತಾಯವಾಗಲಿದೆ.
ನಮ್ಮ ಜಿಲ್ಲೆಯ ನಗರ ಸಭೆ ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳ ಕುಡಿಯುವ ನೀರಿನ ಮತ್ತು ಬೀದಿ ದೀಪಗಳ ಬಿಲ್ ಅನ್ನು ಸರ್ವೇ ಸಾಮಾನ್ಯವಾಗಿ ಪ್ರತಿ ತಿಂಗಳೂ ಪಾವತಿಸುವದಿಲ್ಲ. ಇದರಿಂದಾಗಿ ಈ ಸಂಸ್ಥೆಗಳೂ ತಾವು ಬಳಸಿದ ಪ್ರತಿ ಯೂನಿಟ್ ವಿದ್ಯುತ್‍ಗೆ 6.40 ರೂ. ಮತ್ತು ಮಾರ್ಗ ಕನಿಷ್ಟವನ್ನು ನೀಡಬೇಕಾಗುತ್ತದೆ. ಪರಿಣಾಮ ಈ ಸಂಸ್ಥೆಗಳು ಅನಗತ್ಯವಾಗಿ, ಅನಿವಾರ್ಯವಾಗಿ ಪ್ರತಿವರ್ಷವೂ ದುಬಾರಿ ಬಿಲ್ ಅನ್ನು ಭರಿಸಬೇಕಾಗುತ್ತದೆ. ಇದರಿಂದ ಪ್ರತಿ ಪ್ರಜೆಯೂ ಅನಿವಾರ್ಯವಾಗಿ ಅನಗತ್ಯ ಹೊರೆಯನ್ನು ಹೊರಲೇ ಬೇಕಾಗಿದೆ.
ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಸೆಸ್ಕ್ ಪ್ರತಿ ತಿಂಗಳೂ ತನ್ನ ಗ್ರಾಹಕರಿಗೆ ವಿದ್ಯುತ್ ಬಿಲ್ ನೀಡಬೇಕಿದೆ. ಈ ನಿಯಮದಿಂದಾಗಿ ಗ್ರಾಹಕರಿಗೆ ಲಾಭವಾಗಲಿದೆ. ಈ ಜವಾಬ್ದಾರಿಯನ್ನು ಮೈಸೂರಿನ ಇನ್ಫಿನಿಟಿ ಸೆಲ್ಯೂಶನ್ ಸಂಸ್ಥೆಯು ಪಡೆದಿದೆ.
ಸಂಸ್ಥೆಯು ಜಿಲ್ಲೆಯಲ್ಲಿ 100 ಮಂದಿ ಮೀಟರ್ ಓದುಗರನ್ನು ನೇಮಿಸಿಕೊಂಡಿದೆ ಎಂದು ಹೇಳಿಕೊಂಡಿದೆ. ಆದರೆ, ವಾಸ್ತವದಲ್ಲಿ ಇವರ ಸಂಖ್ಯೆಯು 60ನ್ನು ಮೀರಿಲ್ಲ! ಪರಿಣಾಮ ಪ್ರತಿ ತಿಂಗಳೂ ಜಿಲ್ಲೆಯ ಎಲ್ಲಾ ಗ್ರಾಹಕರಿಗೆ ವಿದ್ಯುತ್ ಬಿಲ್ ನೀಡಲು ಸಂಸ್ಥೆಗೆ ಸಾಧ್ಯವಾಗುತ್ತಿಲ್ಲ. ಈ ಸಂಸ್ಥೆಯು ನಗರ ಪ್ರದೇಶಗಳಲ್ಲಿ ಪ್ರತಿ ಮೀಟರ್ ಓದಲು ಕೇವಲ ಮೂರು, ಗ್ರಾಮೀಣ ಪ್ರದೇಶಗಳಲ್ಲಿ 5 ರೂಪಾಯಿಯನ್ನು ಮಾತ್ರ ನೀಡುತ್ತಿದೆ ಎಂದು ಸಂಸ್ಥೆಯು ಹೇಳಿಕೊಂಡಿದೆ. ಆದರೆ, ವಾಸ್ತವವಾಗಿ ಗ್ರಾಮೀಣ ಪ್ರದೇಶದ ಪ್ರತಿ ಮೀಟರ್ ಓದಲು 4 ನಗರ ಪ್ರದೇಶದಲ್ಲಿ ಕೇವಲ ಮೂರು ರೂಪಾಯಿಗಿಂತಲೂ ಕಡಿಮೆ ಮೊತ್ತವನ್ನು ಬ್ಯಾಂಕ್ ಮೂಲಕ ಪಾವತಿಸುತ್ತಿದೆ.
- ಕೂಡಂಡ ರವಿ