ನಾಪೆÇೀಕ್ಲು, ಅ. 7: ಗ್ರಾಮೀಣ ಪ್ರದೇಶದ ಜನರ ದೈನಂದಿನ ಬದುಕು ಜಾನಪದ ಕಲೆಯೊಂದಿಗೆ ಆರಂಭವಾಗುತ್ತದೆ. ದೇವರ ಪ್ರಾರ್ಥನೆಯಲ್ಲಿಯೂ ಜಾನಪದಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತದೆ. ಇದನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಸಲಹೆ ನೀಡಿದರು.

ಸ್ಥಳೀಯ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಕನ್ನಡ ಜಾನಪದ ಪರಿಷತ್‍ನ ಕೊಡಗು ಜಿಲ್ಲಾ ಘಟಕದ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭವನ್ನು ಭತ್ತ ಕುಟ್ಟುವದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗಿಗೆ ತನ್ನದೇ ಆದ ಜಾನಪದ ಪರಂಪರೆಯಿದೆ. ಅದನ್ನು ಯಾರೂ ಮರೆಯಬಾರದು ಎಂಬದು ಎಲ್ಲರ ಅಪೇಕ್ಷೆ. ಪರಸ್ಪರ ಸಂಘರ್ಷವನ್ನು ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಸಾಗುವದರ ಮೂಲಕ ಸಂಸ್ಕøತಿ ಆಚಾರ- ವಿಚಾರವನ್ನು ಉಳಿಸಿ ಬೆಳೆಸುವಲ್ಲಿ ಚಿಂತನೆ ನಡೆಸಬೇಕು ಎಂದು ಕಿವಿ ಮಾತು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮಾತನಾಡಿ, ಜಾನಪದ ಕಲೆ ಎಲೆ ಮರೆಯ ಕಾಯಿ ಇದ್ದಂತೆ. ಎಲೆ ಸರಿಸಿ ನೋಡಿದರೆ ಮಾತ್ರ ಅದರ ನೈಜಗುಣದ ಅರಿವಾಗುವದು. ಎಲೆ ಮರೆಕಾಯಿಯನ್ನು ಹೊರ ಜಗತ್ತಿಗೆ ಪರಿಚಯಿಸಿದರೆ ಮಾತ್ರ ಜಾನಪದ ಕಲೆ ಅನಾವರಣಗೊಳ್ಳುತ್ತದೆ ಎಂದರು.

ಜಾನಪದ ವಿದ್ವಾಂಸ ಬೆಸೂರು ಮೋಹನ ಪಾಳೆಗಾರ್ ಮಾತನಾಡಿ, ಪ್ರದೇಶದಲ್ಲಿನ ಪ್ರತ್ಯೇಕತೆಯೇ ಜಾನಪದ. ನಗರೀಕರಣದಲ್ಲೂ ಕೂಡ ಜಾನಪದದ ಛಾಯೆಯಿದೆ. ಜಾನಪದ ಬೇರೆ ಅಲ್ಲ. ಬದುಕು ಬೇರೆ ಅಲ್ಲ. ಇದು ರಕ್ತ ಮಾಂಸದ ನಡುವಿನ ಸಂಬಂಧದಂತಿದೆ ಎಂದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಜಾನಪದ ಪರಿಷತ್‍ನ ಅಧ್ಯಕ್ಷೆ ಡಾ. ಕಾವೇರಿ ಪ್ರಕಾಶ್, ಕೊಡಗು ಜಿಲ್ಲೆ ಸಂಸ್ಕøತಿಯ ತವರೂರು. ಜಾನಪದದ ಬೀಡು. ಆಧುನಿಕತೆಯ ಭರಾಟೆಯಲ್ಲಿ ಜಾನಪದದ ಮೂಲ ಸಂಸ್ಕøತಿಗೆ ಧಕ್ಕೆ ಬರುವ ಅಪಾಯವಿದೆ. ಆದುದರಿಂದ ಜಾನಪದದ ಉಳಿವಿಗಾಗಿ ನಾವೆಲ್ಲರೂ ಶ್ರಮಿಸುವ ಅಗತ್ಯತೆಯಿದೆ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಪಿ.ಬಾಲಾಜಿ, ಕ.ಸಾ.ಪ. ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಮತ್ತಿತರರು ಮಾತನಾಡಿದರು.

ಈ ಸಂದರ್ಭ ಹಿರಿಯ ಜಾನಪದ ಕಲಾವಿದ, ನಿವೃತ್ತ ಶಿಕ್ಷಕ ಚಿರೋಟಿರ ತಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಗೊರವಾಲೆ ಚಂದ್ರಶೇಖರ್, ನಾಪೆÇೀಕ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಂ.ಪಿ.ಸತೀಶ್, ಜಿಲ್ಲಾ ಸಂಚಾಲಕಿ ಕನ್ನಿಕಾ.ಡಿ, ಕಾರ್ಯದರ್ಶಿ ಕುಮಾರಸ್ವಾಮಿ ಎಂ. ಮತ್ತಿತರರು ಇದ್ದರು.

ಕಾರ್ಯಕ್ರಮದ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಆಕಾಶವಾಣಿ ಕಲಾವಿದ ಶಾಂತಳ್ಳಿ ಗಣೇಶ್ ಮತ್ತು ತಂಡದಿಂದ ಸುಗಮ ಸಂಗೀತ, ವಿದ್ಯಾರ್ಥಿನಿಯರಿಂದ ಉಮ್ಮತ್ತಾಟ್, ಕೋಲಾಟ್, ಬೊಳಕಾಟ್ ಮತ್ತಿತರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.