ಕೂಡಿಗೆ, ನ. 20: ಇಲ್ಲಿಗೆ ಸಮೀಪದ ಅತ್ತೂರು-ಯಡವನಾಡು ಗ್ರಾಮಸ್ಥರು ಸುಮಾರು 40 ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಹಾರಂಗಿ ಜಲಾನಯನ ಪ್ರದೇಶದ ಎತ್ತಂಗಡಿಯಾದ ಈಗಿನ ಅತ್ತೂರು-ಯಡವನಾಡು ಗ್ರಾಮಸ್ಥರು ಕೊನೆಗೂ ಅರಣ್ಯ ಇಲಾಖೆಯಿಂದ ಮುಕ್ತಿ ಪಡೆದು ಬೇಡಿಕೆ ಕಂದಾಯ ಇಲಾಖೆಯವರೆಗೆ ಬಂದು ನಿಂತಿವೆ. ಅರಣ್ಯ ಇಲಾಖೆಯಿಂದ ಡಿನೋಟಿಫೈಡ್ ಆಗಿ ಅವರಿರುವ ಪ್ರದೇಶ ಪೈಸಾರಿ ಲೆಕ್ಕದಲ್ಲಿದೆ. ಈಗ ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆಯಾಗಿ ಪಾಸಾಗಿ ಕೊಡಗು ಜಿಲ್ಲಾಧಿಕಾರಿಗಳಿಗೆ ಆದೇಶವಾಗಬೇಕು. ಕಂದಾಯ ಇಲಾಖೆಗೆ ಜಿಲ್ಲಾಧಿಕಾರಿಗಳು ಅದನ್ನು ಕಳಿಸಿ ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ನಮ್ಮ ಕುಟುಂಬಗಳ ಬಹುದಿನಗಳ ಬೇಡಿಕೆ ಈಡೇರುತ್ತದೆ ಎಂದು ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಲವನಂಜಪ್ಪ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಯಡವನಾಡು ಗ್ರಾಮದ 800 ಕುಟುಂಬಗಳು ಮತ್ತು ಅತ್ತೂರು ಗ್ರಾಮದ 500 ಕುಟುಂಬಗಳು ಈ ವ್ಯಾಪ್ತಿಯಲ್ಲಿ ಎರಡು ಗ್ರಾಮಗಳ ಬಗ್ಗೆ ಜಿಲ್ಲಾಧಿಕಾರಿಗಳು ವಿಶೇಷವಾಗಿ ಗಮನಹರಿಸಿ ಕಂದಾಯ ಮಂತ್ರಿಗಳ ಅವಗಾಹನೆಗೆ ನಮ್ಮ ಬೇಡಿಕೆಗಳನ್ನು ಕೊಂಡೊಯ್ಯಬೇಕೆಂದು ಹೇಳಿದರು.
ಈವರೆಗೆ ಸ್ಥಳೀಯ ಶಾಸಕರನ್ನು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ ಕೇಳಿದರೆ, ಈಗಾಗಲೇ ಎಲ್ಲಾ ಪ್ರಕ್ರಿಯೆಗಳು ಮುಗಿದು ನಿಮ್ಮ ಸಮಸ್ಯೆಗಳು ಬಗೆಹರಿಯುವ ಹಂತದಲ್ಲಿದೆ ಎಂದು ಶಾಸಕರು ಹೇಳುತ್ತಾರೆ. ಆದರೆ ಅಧಿಕಾರಿಗಳು ನಮಗೆ ಯಾವದೇ ದಾಖಲಾತಿಗಳು ಮತ್ತು ಪ್ರಕ್ರಿಯೆಗಳು ತಿಳಿದಿಲ್ಲ ಎಂದು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಮಂತ್ರಿಗಳು ಎರಡು ಗ್ರಾಮಗಳ 1972 ರಿಂದ ಇದ್ದ ಸಮಸ್ಯೆಯನ್ನು ಅತೀ ಶೀಘ್ರವಾಗಿ ಬಗೆಹರಿಸಬೇಕೆಂದು ಲವನಂಜಪ್ಪ ಒತ್ತಾಯಿಸಿದರು.