ಮೂರ್ನಾಡು, ಆ. 3: ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಚಾಮುಂಡೇಶ್ವರಿ ವಿದ್ಯುಚ್ಛಕ್ತಿ ಸರಬರಾಜು ನಿಗಮ ಹಾಗೂ ಗ್ರಾಮ ಪಂಚಾಯಿತಿ ಕಾರ್ಯವೈಖರಿಗಳ ಕುರಿತು ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದÀ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳ ಮಾಹಿತಿ ಸೌಲಭ್ಯಗಳ ವಿವರಣೆಯಲ್ಲಿ ಮೂರ್ನಾಡು ಉಪಠಾಣೆಯ ಪೊಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಗೊಂಡಿತು.
ಪಟ್ಟಣದಲ್ಲಿ ಶಾಲಾ-ಕಾಲೇಜುಗಳ ಬಳಿ ಮಾದಕ ದ್ರವ್ಯಗಳು ಮಾರಾಟವಾಗುತ್ತಿದ್ದು, ಇದರ ಕುರಿತು ಮಾಹಿತಿ ಇದ್ದರೂ ಕೂಡ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಮೂರ್ನಾಡು ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ ನಿರಂತರವಾಗಿ ನಡೆಯುತ್ತಿದೆ. ಅಕ್ರಮ ಮರಳು ದಂಧೆಯಿಂದ ಈಗಷ್ಟೆ ಓರ್ವ ವ್ಯಕ್ತಿ ಬಲಿಯಾಗಿದ್ದಾರೆ. ಅಕ್ರಮ ಚಟುವಟಿಕೆಗಳ ಕುರಿತು ಪೊಲೀಸರಿಗೆ ದೂರು ನೀಡಿದರೆ ದೂರು ನೀಡಿದವರ ಮಾಹಿತಿಯನ್ನು ಪೊಲೀಸರು ದುಷ್ಕರ್ಮಿಗಳಿಗೆ ನೀಡುತ್ತಾರೆ ಎಂದು ಆರೋಪಿಸಿದರು.
ಸುಪ್ರಿಂಕೋರ್ಟ್ ಆದೇಶದಂತೆ ರಾತ್ರಿ ವೇಳೆಯಲ್ಲಿ ಹೆಚ್ಚು ಶಬ್ದವಿರುವ ಧ್ವನಿವರ್ಧಕ ಬಳಕೆ ನಿಷೇಧವಿದ್ದರೂ ಪಟ್ಟಣದಲ್ಲಿ ಕಳೆದ ಫೆಬ್ರವರಿ ತಿಂಗಳಿನಲ್ಲಿ ಪಟ್ಟಣದಲ್ಲಿ ರಾತ್ರಿ ಆಯೋಜಿಸಲಾದ ಕಾರ್ಯಕ್ರಮ ವೊಂದರಲ್ಲಿ 11 ಗಂಟೆ ಸಮಯದಲ್ಲಿ ಜಾಸ್ತಿ ಶಬ್ದವಿರುವ ಧ್ವನಿವರ್ಧಕವನ್ನು ಬಳಸಲಾಯಿತು. ಪರೀಕ್ಷೆ ಸಮಯ ದಲ್ಲಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಮೂರ್ನಾಡು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದಾಗ ಪೊಲೀಸ್ ಸಿಬ್ಬಂದಿಗಳು ದೂರು ನೀಡಿದವರ ಕುರಿತು ಮಾಹಿತಿ ನೀಡಿ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಆಯೋಜಕರಿಗೆ ತಿಳಿಸಿದ್ದಾರೆ. ಸುಪ್ರಿಂ ಕೋರ್ಟ್ ಆದೇಶವನ್ನು ಪೊಲೀಸ್ ಇಲಾಖೆ ಮರೆತು ಕಾರ್ಯಕ್ರಮಕ್ಕೆ ಅನುಮತಿ ನೀಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದೆ ಎಂದು ಗ್ರಾಮಸ್ಥರಾದ ಪೂರ್ಣಿಮಾ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸ್ ಉಪಠಾಣೆಯಲ್ಲಿ ಸ್ಥಿರ ದೂರವಾಣಿ ಸ್ಥಗಿತಗೊಂಡು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಯಾವದೇ ಅನಾಹುತಗಳು ಸಂಭವಿಸಿದರೆ ಮಾಹಿತಿ ನೀಡಲು ಪೊಲೀಸರ ಮೊಬೈಲ್ ಸಂಖ್ಯೆಯನ್ನು ಹುಡುಕ ಬೇಕಾಗಿದೆ. ಸ್ಥಿರ ದೂರವಾಣಿ ಸಂಪರ್ಕವನ್ನು ಉಪಠಾಣೆಗೆ ಕಲ್ಪಿಸುವಂತೆ ರಾಬಿನ್ ಕುಟ್ಟಪ್ಪ ಮನವಿ ಮಾಡಿದರು.
ಮೂರ್ನಾಡು ಪೊಲೀಸ್ ಉಪಠಾಣೆಯ ನೂತನ ಸಹಾಯಕ ಠಾಣಾಧಿಕಾರಿ ಮೋಹನ್ ಪ್ರತಿಕ್ರಿಯಿಸಿ, ಈ ಹಿಂದೆ ಏನು ನಡೆದಿದೆ ಎಂದು ನನಗೆ ತಿಳಿದಿಲ್ಲ. ಇನ್ನು ಮುಂದೆ ದೂರು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿಟ್ಟು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿ ಸಾರ್ವಜನಿಕರ ಸಹಕಾರ ಪೊಲೀಸ್ ಇಲಾಖೆಗೆ ಅಗತ್ಯ ಎಂದು ಮನವಿ ಮಾಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರಿಲ್ಲದೆ ಸಾರ್ವ ಜನಿಕರು ತೊಂದರೆ ಅನುಭವಿಸು ತ್ತಿದ್ದಾರೆ. ಸುತ್ತಮುತ್ತಲ ಗ್ರಾಮಸ್ಥರು ಅನೇಕ ಮಂದಿ ಆರೋಗ್ಯ ಕೇಂದ್ರವನ್ನೆ ಅವಲಂಭಿಸಿದ್ದು ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದರೆ ವೈದ್ಯರೇ ಇರುವುದಿಲ್ಲ. ಇದರ ಕುರಿತು ಇಲಾಖೆ ಗಮನ ಹರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಮುತ್ತಾರುಮುಡಿ ಗ್ರಾಮದಲ್ಲಿ ಬಹುತೇಕ ವಿದ್ಯುತ್ ಕಂಬಗಳು ಕಬ್ಬಿಣ ಹಾಗೂ ಮರದಿಂದ ಕೂಡಿದ್ದು ಇಂತಹ ಕಂಬಗಳನ್ನು ಬದಲಿಸುವಂತೆ ಆಗ್ರಹಿಸಿದರು. ಕಿಗ್ಗಾಲು ಗ್ರಾಮದಲ್ಲಿ ಶಾಲಾ ಆವರಣದ ಬಳಿ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಅಳವಡಿಸಲಾಗಿದ್ದು ಇದರಿಂದ ಮಕ್ಕಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಇಲಾಖೆಗೆ ಮನವಿ ನೀಡಿದರೂ ಸೂಕ್ತ ಸ್ಪಂದನ ದೊರಕಲಿಲ್ಲ ಎಂದು ಶಾಲಾ ಶಿಕ್ಷಕಿ ಮಮತ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಮೂರ್ನಾಡು ಸೆಸ್ಕ್ ಕಿರಿಯ ಇಂಜಿನಿಯರ್ ರಮಾಕಾಂತ್ ಹಳೆಯ ವಿದ್ಯುತ್ ಕಂಬಗಳನ್ನು ಆದಷ್ಟು ಬೇಗ ಬದಲಿಸಲಾಗುವದು. ಕಿಗ್ಗಾಲು ಗ್ರಾಮದಲ್ಲಿರುವ ಟ್ರಾನ್ಸ್‍ಫಾರ್ಮರ್‍ನ್ನು ಪರಿಶೀಲಿಸಿ ಸ್ಥಳ ಬದಲಿಸುವ ವ್ಯವಸ್ಥೆಯನ್ನು ಕೈಗೊಳ್ಳ ಲಾಗುತ್ತದೆ ಎಂದು ತಿಳಿಸಿದರು.
ಪಟ್ಟಣದ ಚರಂಡಿಗಳಲ್ಲಿ ಹರಿಯುತ್ತಿರುವ ಕೊಳಚೆ ನೀರುಗಳು ತೋಟದೊಳಗೆ ಬಂದು ಸಂಗ್ರಹ ಗೊಂಡು ಸೊಳ್ಳೆಗಳ ಉತ್ಪತ್ತಿಯಾಗು ತ್ತಿದ್ದು, ಸಾಂಕ್ರಮಿಕ ರೋಗ ಹರಡುವ ಭೀತಿ ಎದುರಾಗಿದೆ ಗ್ರಾಮ ಪಂಚಾಯಿತಿಗೆ ಸಮಸ್ಯೆಯ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದರೂ ಸೂಕ್ತ ಕ್ರಮ ಕೈಗೊಳ್ಳಲಿಲ್ಲ ಎಂದು ಅಣ್ಣಪ್ಪ ಆರೋಪಿಸಿದರು. ಇದಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನ ಉತ್ತರಿಸಿದ ಪ್ರತಿಯೊಂದು ಕಾಮಗಾರಿ ಒಂದೇ ಬಾರಿಗೆ ಆಗುವದಿಲ್ಲ. ದೊಡ್ಡ ಮೊತ್ತದ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಿ ಅದರಿಂದ ಬಿಡುಗಡೆಗೊಂಡ ಅನುದಾನದಲ್ಲಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿ ಮುಂದಿನ ಹಂತದಲ್ಲಿ ಕಾಮಗಾರಿ ನಿರ್ವಹಿಸುವದಾಗಿ ತಿಳಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಗಿಂದ್ದಾಗೆ ರಜೆ ಹಾಕುತ್ತಿದ್ದು, ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆ ಉಂಟಾಗುತ್ತಿದೆ. ಗೇಡ್ 1 ಪಂಚಾಯಿತಿಯಾಗಿರುವದರಿಂದ ಪಿಡಿಓ ರಜೆ ಹಾಕಿರುವ ಸಂದರ್ಭದಲ್ಲಿ ಬೇರೆ ಪಿಡಿಒಓಗಳನ್ನು ನೇಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಸಭೆಗೆ ನೋಡೆಲ್ ಅಧಿಕಾರಿಯಾಗಿ ತೋಟಗಾರಿಕ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ್ ಆಗಮಿಸಿದ್ದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭ ಮೋಹನ್, ಜಿಲ್ಲಾ ಪಂಚಾಯಿತಿ ಸದಸ್ಯೆ ಕಲಾವತಿ ಪೂವಪ್ಪ, ತಾಲೂಕು ಪಂಚಾಯಿತಿ ಸದಸ್ಯೆ ಶಶಿ ಪ್ರಕಾಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಂಞಪ್ಪ ಪವಿತ್ರ, ಪಿಡಿಒ ಸುನಿತಾ ಹಾಗೂ ಸರ್ವ ಸದಸ್ಯರು ಹಾಜರಿದ್ದರು.