ಕೂಡಿಗೆ, ಜು. 5: ಮುಳ್ಳುಸೋಗೆ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳಿಂದ ಗ್ರಾಮದ ಅಭಿವೃದ್ಧಿಗೆ ಅಡ್ಡಿ ಉಂಟಾಗುವದರೊಂದಿಗೆ ಲಕ್ಷಾಂತರ ರೂಪಾಯಿಗಳ ಸರ್ಕಾರಿ ಅನುದಾನ ದುರುಪಯೋಗವಾಗಿರುವದಾಗಿ ಆರೋಪಿಸಿ ಗ್ರಾ.ಪಂ. ಸದಸ್ಯರು ಪ್ರತಿಭಟನೆ ನಡೆಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹಣ ಸದುಯೋಗವಾಗಿಲ್ಲ. ಸದಸ್ಯರ ಅಧಿಕಾರಾವಧಿ ಒಂದು ವರ್ಷ 2 ತಿಂಗಳು ಕಳೆಯುತ್ತಾ ಬಂದರೂ ಇದುವರೆಗೆ ನಡೆದ ಮಾಸಿಕ ಸಭೆಗಳ ನಡವಳಿಕೆಯ ವಿಷಯದನ್ವಯ ಯಾವದೇ ರೀತಿಯ ಕಾಮಗಾರಿಗಳಿಗೆ ಚಾಲನೆ ನಡೆದಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳ ವಿಷಯಕ್ಕೆ ಸಂಬಂಧಿಸಿದಂತೆ 134 ಪುಟದ ವರದಿ ಇದ್ದರೂ, ಶೇ. 99 ರಷ್ಟು ಕಾಮಗಾರಿಗಳು ಬಾಕಿಯಿದ್ದು, ಇದುವರೆಗೂ ಯಾವದೇ ಕಾಮಗಾರಿ ನಡೆಯಲು ಅಧ್ಯಕ್ಷರು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸದಸ್ಯರುಗಳನ್ನು ಗಣನೆಗೆ ತೆಗೆದುಕೊಳ್ಳದೆ ಮನಬಂದಂತೆ ವರ್ತಿಸುತ್ತಾರೆ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ತಾರಾನಾಥ್ ಸೇರಿದಂತೆ 19 ಸದಸ್ಯರುಗಳು ಗ್ರಾಮ ಪಂಚಾಯಿತಿ ಎದುರು ಅಧ್ಯಕ್ಷರ ಹಾಗೂ ಪಿಡಿಓ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು.

ಫಲಾನುಭವಿಗಳಿಗೆ ವಿತರಣೆ ಯಾಗಬೇಕಾಗಿದ್ದ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಕೆಲವು ಹಗರಣಗಳಲ್ಲಿ ಅಧ್ಯಕ್ಷರು ಭಾಗಿಯಾಗಿರುವದರಿಂದ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕಾಗಮಿಸಿದ ಕಾರ್ಯ ನಿರ್ವಾಹಣಾಧಿಕಾರಿ ಪ್ರತಿಭಟನಾ ಕಾರರ ಮನವಿಯನ್ನು ಸ್ವೀಕರಿಸಿ ಸದಸ್ಯರ ಮನವೊಲಿಸಲು ಪ್ರಯತ್ನಿಸಿದರು.

ಸದಸ್ಯರುಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯನ್ನು ಅಮಾನತುಗೊಳಿಸಿ, ಬೇರೆಡೆ ವರ್ಗಾವಣೆಗೊಳಿಸಿ, ಇದುವರೆಗೂ ಆಗಿರುವ ಅವ್ಯವಹಾರಗಳನ್ನು ತನಿಖೆ ನಡೆಸುವಂತೆ ಒತ್ತಾಯಿಸಿದರು.

ಕಾರ್ಯನಿರ್ವಹಣಾಧಿಕಾರಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅನುದಾನವನ್ನು ಕ್ರಮಬದ್ಧವಾಗಿ ಸದುಪಯೋಗ ಪಡಿಸದ ಹಿನ್ನೆಲೆಯಲ್ಲಿ ಕಾನೂನಾ ತ್ಮಕವಾಗಿ ಕ್ರಮ ಹಾಗೂ ಈವರೆಗೆ ಆಗಿರುವ ಲೋಪದೋಷಗಳ ಬಗ್ಗೆ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳುವ ಭರವಸೆ ನೀಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯಿಂದ ತನಿಖಾ ತಂಡವನ್ನು ರಚಿಸಿ, ಗ್ರಾ.ಪಂ. ಅವ್ಯವಹಾರಗಳನ್ನು ತನಿಖೆ ನಡೆಸುವದಾಗಿ ಹೇಳಿದರು. ಇದಕ್ಕೊಪ್ಪದ ಸದಸ್ಯರು ಸ್ಥಳಕ್ಕೆ ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಸ್ಥಳಕ್ಕಾಗಮಿಸಬೇಕೆಂದು ಪಟ್ಟು ಹಿಡಿದರು. ಅಲ್ಲದೆ ತಕ್ಷಣದಿಂದಲೇ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಬೇಕೆಂದು ತಿಳಿಸಿದರು.

ಈ ಸಂದರ್ಭ ಸದಸ್ಯರಾದ ಕುಮಾರಸ್ವಾಮಿ, ಸಂತೋಷ್, ಸುಚಿತ್ರ, ವೇದಾವತಿ, ಸುರೇಶ, ರುದ್ರಾಂಬೆ, ಅರುಣಚಂದ್ರ, ವಿಶ್ವನಾಥ್, ಸರಸ್ವತಿ, ಸುಭೇದ, ಅಬ್ದುಲ್ ಖಾದರ್, ಗಣೇಶ್, ಹರೀಶ್, ಜಗದೀಶ್, ಕಮಲ, ರುಕ್ಯಾ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.