ಕದನೂರು, ಸೆ. 23: ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಇತ್ತೀಚೆಗೆ ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಪರಿಶೀಲಿಸಿ, ಸ್ಥಳೀಯ ಜನಪ್ರತಿನಿಧಿ ಗಳೊಂದಿಗೆ ಗ್ರಾಮದ ಅಭಿವೃದ್ಧಿಯ ಬಗ್ಗೆ ಚರ್ಚಿಸಿದರು.
ಅಪರಾಹ್ನ 2 ಗಂಟೆಗೆ ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಸ್ಮಶಾನಕ್ಕೆ ಜಾಗ ಮಂಜೂರಾತಿ, ರಸ್ತೆಗಳ ಅಗಲೀಕರಣ ಹಾಗೂ ಮೇಲ್ದರ್ಜೆಗೇರಿಸುವದು, ಅಡುಗೆ ಅನಿಲ ಇರುವವರಿಗೆ ಸೀಮೆಎಣ್ಣೆ ರದ್ದು ಮಾಡಿರುವ ಬಗ್ಗೆ, ರಸ್ತೆಯ ದುರಸ್ತಿ ಕುಡಿಯುವ ನೀರಿನ ಸಮಸ್ಯೆ ಹಾಗೂ ವಿದ್ಯುತ್ ಸಂಪರ್ಕದ ಸಮಸ್ಯೆಗಳನ್ನು ಆಲಿಸಿದರು. ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಶಾಸಕರು, ಎಲ್ಲರೂ ತೆರಿಗೆಯನ್ನು ಸರ್ಕಾರಕ್ಕೆ ತಪ್ಪದೇ ಪಾವತಿಸಬೇಕು. ತೆರಿಗೆ ಪಾವತಿಗೆ ಗ್ರಾ.ಪಂ.ಯು ಸಹ ಹೆಚ್ಚಿನ ಪ್ರಚಾರ ನೀಡಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೊಂದಾಣಿಕೆ ಯಿಂದ ಸಹಕಾರ ಮನೋಭಾವನೆ ಯಿಂದ ಕೆಲಸ ನಿರ್ವಹಿಸಿದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ. ಆದಷ್ಟು ಈಗಿನ ವ್ಯವಸ್ಥೆಯಡಿ ಸಮಸ್ಯೆಗಳನ್ನು ಬಗೆಹರಿಸಲು ತಾನು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾದಲಿ, ಸದಸ್ಯರಾದ ನಾಚಪ್ಪ, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ತಾ.ಪಂ. ಸದಸ್ಯರುಗಳಾದ ಆಲತಂಡ ಸೀತಮ್ಮ, ಪ್ರಶಾಂತ್, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.