ವೀರಾಜಪೇಟೆ, ಆ.19: ವೀರರಾಜೇಂದ್ರಪೇಟೆ ಐತಿಹಾಸಿಕ ಗೌರಿ ನಾಡ ಹಬ್ಬದ ಒಕ್ಕೂಟದಿಂದ ಈ ಬಾರಿಯ ಗೌರಿ ಗಣೋತ್ಸವವನ್ನು ಶಾಂತಿ ಹಾಗೂ ಶಿಸ್ತು ಬದ್ಧವಾಗಿ ಪರಸ್ಪರ ಸಹಕಾರದಿಂದ ಅದ್ಧೂರಿ ಯಿಂದ ಆಚರಿಸುವಂತೆ ಒಕ್ಕೂಟದ ಸಮಿತಿ ಸಭೆ ತೀರ್ಮಾನಿಸಿದೆ.

ಒಕ್ಕೂಟದ ವತಿಯಿಂದ ಇಲ್ಲಿನ ಪುರಭವನದಲ್ಲಿ ಅಧ್ಯಕ್ಷ ಬಿ.ಜಿ. ಸಾಯಿನಾಥ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದÀ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಿವೈಎಸ್ಪಿ ನಾಗಪ್ಪ ಮಾತನಾಡಿ, ಗೌರಿ ಗಣೇಶ ಉತ್ಸವದ ಆಚರಣಾ ಸಮಿತಿಗಳು ಪರಸ್ಪರ ಸೌಹಾರ್ಧತೆಯನ್ನು ಕಾಪಾಡಿಕೊಂಡು ಅನ್ಯ ಧರ್ಮೀಯರಿಗೆ ಯಾವದೇ ತೊಂದರೆ ಉಂಟಾಗದಂತೆ ಪೊಲೀಸ್ ಇಲಾಖೆಯ ಕೆಲವು ಮಾರ್ಗದರ್ಶನ ಗಳನ್ನಸರಿಸಿ ಉತ್ಸವವನ್ನು ಆಚರಿಸಬೇಕು. ಯಾವದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದರು.

ಗೌರಿ ಗಣೇಶ ಉತ್ಸವದ ಅಂಗವಾಗಿ ಪಟ್ಟಣದಲ್ಲಿ ಸ್ವಚ್ಛತೆ, ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆಗಳ ದುರಸ್ತಿ, ಪಟ್ಟಣವನ್ನು ಅಲಂಕಾರಗೊಳಿಸಲು ಕ್ರಮ ಕೈಗೊಳ್ಳುವದು, ಪೊಲೀಸ್ ಬಂದೋಬಸ್ತ್, ಆಕಸ್ಮಿಕ ಸಂದರ್ಭ ಗಳಲ್ಲಿ ಆರೋಗ್ಯ ಇಲಾಖೆಯಿಂದ ತುರ್ತು ಚಿಕಿತ್ಸಾ ವ್ಯವಸ್ಥೆ, ಚೆಸ್ಕಾಂ ವತಿಯಿಂದ ನಿರಂತರ ವಿದ್ಯುತ್ ವ್ಯವಸ್ಥೆ ಮೆರವಣಿಗೆ ಹಾದು ಹೋಗುವ ರಸ್ತೆಯ ಇಕ್ಕೆಲಗಳಲ್ಲಿರುವ ಮರದ ಕೊಂಬೆಗಳನ್ನು ಕತ್ತರಿಸವದು. ಪಟ್ಟಣದಲ್ಲಿರುವ ವಿವಿಧ ಇಲಾಖೆಗಳು, ಅಧಿಕಾರಿಗಳು ಒಕ್ಕೂಟದ ಬೇಡಿಕೆಗಳಿಗೆ ತುರ್ತು ಸ್ಪಂದಿಸುವಂತೆ ಸಮಿತಿ ತೀರ್ಮಾನಿಸಿತು.

ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಸರ್ಕಲ್ ಇನ್ಸ್‍ಪೆಕ್ಟರ್ ಶಾಂತಮಲ್ಲಪ್ಪ, ಸಬ್ ಇನ್ಸ್‍ಪೆಕ್ಟರ್ ಸುಬ್ರಮಣಿ, ಪಿ.ಡಬ್ಲ್ಯೂಡಿ ಅಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ, ಅರಣ್ಯಾಧಿಕಾರಿ, ಒಕ್ಕೂಟದ ಸಲಹೆಗಾರ ಟಿ.ಪಿ.ಕೃಷ್ಣ ಹಾಗೂ ಪಟ್ಟಣ ವ್ಯಾಪ್ತಿಯ ಗೌರಿ ಗಣೆಶೋತ್ಸವದ 20 ಸಮಿತಿಗಳ ಪ್ರತಿನಿಧಿಗಳು ಹಾಜರಿದ್ದರು.