ಮಡಿಕೇರಿ, ಸೆ.6 : ಗಣೇಶ ಚತುರ್ಥಿ ಪ್ರಯುಕ್ತ ನಗರದ 30ಕ್ಕೂ ಹೆಚ್ಚು ಗಣೇಶೋತ್ಸವ ಸಮಿತಿಗಳು ಪ್ರತಿಷ್ಠಾಪಿಸಿರುವ ಗಣೇಶನ ಮೂರ್ತಿಗಳನ್ನು ವಿಸರ್ಜಿಸುವ ಗೌರಿ ಕೆರೆಯ ಸ್ವಚ್ಛತೆಗೆ ಆದ್ಯತೆ ನೀಡದ ನಗರಸಭೆಯ ವಿರುದ್ಧ ಕಾನ್ವೆಂಟ್ ಜಂಕ್ಷನ್‍ನ ಶ್ರೀ ಮಹಾಗಣಪತಿ ಸೇವಾ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಖಜಾಂಚಿ ಕಾನೆಹಿತ್ಲು ಮೊಣ್ಣಪ್ಪ, ಗೌರಿಕೆರೆಯ ಹೂಳೆತ್ತದಿರುವ ನಗರಸಭೆಯ ನಿರ್ಲಕ್ಷ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಮೂವತ್ತಕ್ಕೂ ಹೆಚ್ಚಿನ ಗಣೇಶೋತ್ಸವ ಸಮಿತಿಗಳು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಬಗ್ಗೆ ನಗರಸಭೆಗೆ ಮೊದಲೇ ಮಾಹಿತಿ ಇದ್ದರೂ ಗೌರಿ ಕೆರೆಯನ್ನು ಹೂಳೆತ್ತುವ ಮೂಲಕ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಸಾಂಪ್ರದಾಯಿಕ ಹಾಗೂ ಅತೀ ಶುದ್ಧತೆಯಿಂದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿವಿಧ ದೈವಿಕ ವಿಧಿ - ವಿಧಾನಗಳೊಂದಿಗೆ ವಿಸರ್ಜಿಸಬೇಕಾದ ಸಂದರ್ಭ ಗೌರಿ ಕೆರೆಯ ಅಶುಚಿತ್ವ ಭಕ್ತರ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದೆಯೆಂದು ಆರೋಪಿಸಿದರು.

ಹೂಳು ತುಂಬಿರುವ ಕೆರೆಗೆ ಇಳಿಯುವದು ಕೂಡ ಅಪಾಯಕಾರಿ ಯಾಗಿದ್ದು, ತಕ್ಷಣ ನಗರಸಭೆÉ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ತಾ.7 ರಂದು ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಅನುಕೂಲ ಕಲ್ಪಿಸಿಕೊಡ ಬೇಕೆಂದು ಮೊಣ್ಣಪ್ಪ ಒತ್ತಾಯಿಸಿದರು. ಗೌರವ ಸಲಹೆಗಾರ ಅರುಣ್ ಶೆಟ್ಟಿ ಮಾತನಾಡಿ, ಗಣೇಶ ಮೂರ್ತಿಯ ಪ್ರತಿಷ್ಠಾಪನೆಗೆ ಹತ್ತಾರು ದಾಖಲೆಗಳನ್ನು ಕೇಳುವ ಆಡಳಿತ ವ್ಯವಸ್ಥೆ ಗಣೇಶ ಮೂರ್ತಿಯ ವಿಸರ್ಜನೆಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸದೆ ನಿರ್ಲಕ್ಷ್ಯತೆ ತೋರಿದೆಯೆಂದು ಆರೋಪಿಸಿದರು. ಪೊಲೀಸರು ನಿಗದಿ ಮಾಡುವ ಸಮಯದಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಸಾಧ್ಯವಾಗದೆ ಇರುವದಕ್ಕೆ ಮಂಟಪದ ಮೆರವಣಿಗೆ ಸಂದರ್ಭ ಎದುರಾಗುವ ವಾಹನ ದಟ್ಟಣೆ ಕಾರಣವೆಂದು ಅಭಿಪ್ರಾಯ ಪಟ್ಟರು. ಪೊಲೀಸರು ವಾಹನ ದಟ್ಟಣೆ ಯನ್ನು ನಿಯಂತ್ರಿಸಿ ಮಂಟಪಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಕಾನ್ವೆಂಟ್ ಜಂಕ್ಷನ್‍ನ ಶ್ರೀ ಮಹಾಗಣಪತಿ ಸೇವಾ ಸಮಿತಿ 24ನೇ ವರ್ಷದ ಸಂಭ್ರಮದಲ್ಲಿದ್ದು, ತಾ.7 ರಂದು ಬೆಳ್ಳಿ ರಥದೊಂದಿಗೆ ನಗರದ ಮುಖ್ಯ ರಸ್ತೆಗಳಲ್ಲಿ ಅದ್ಧೂರಿಯ ಮೆರವಣಿಗೆ ನಡೆಯಲಿದೆ ಎಂದು ಅರುಣ್ ಶೆಟ್ಟಿ ತಿಳಿಸಿದರು. ಮಧ್ಯಾಹ್ನ ಮಹಾಪೂಜೆಯ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಮಾಡಿ ಗಣೇಶ ಮೂರ್ತಿಯ ಮೆರವಣಿಗೆ ನಡೆಸಲಾಗುವದು.

ಸಿಂಗಾರಿ ಮೇಳ, ಹುಲಿವೇಷ ಮತ್ತಿತರ ಕಲಾ ತಂಡಗಳು ಮೆರವಣಿಗೆಗೆ ಆಕರ್ಷಣೆಯನ್ನು ನೀಡಲಿವೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಗಣೇಶ್, ಪ್ರಧಾನ ಕಾರ್ಯದರ್ಶಿ ಪಿ.ಎಸ್. ಪ್ರಶಾಂತ್ ಹಾಗೂ ಸದಸ್ಯ ಸುನಿಲ್ ಉಪಸ್ಥಿತರಿದ್ದರು.