ಮಡಿಕೇರಿ, ಜು. 14: ಸಣ್ಣಪುಲಿಕೋಟು - ಅಯ್ಯಂಗೇರಿ ವ್ಯಾಪ್ತಿಯ ಸರ್ವೆ ನಂ. 2/6 ಪಿ1 ರ ಕಳಂಗೋಟು ಮೀಸಲು ಅರಣ್ಯದಲ್ಲಿ ಅನಧಿಕೃತವಾಗಿ ಇರುವ ಕಲ್ಲುಕಂಬಗಳನ್ನು ಅರಣ್ಯ ಇಲಾಖೆ ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಆ ಸ್ಥಳದಿಂದ ತೆರವುಗೊಳಿಸುವವರೆಗೆ ಹಾಗೂ ಈ ಕೃತ್ಯಕ್ಕೆ ನೇರವಾಗಿ ಶಾಮೀಲಾಗಿ ಸಹಕರಿಸುತ್ತಿರುವ ಭಾಗಮಂಡಲ ವಲಯ ಅರಣ್ಯಾಧಿಕಾರಿ ಚಂಗಪ್ಪ ಅವರನ್ನು ತಕ್ಷಣ ವರ್ಗಾವಣೆಗೊಳಿಸುವವರೆಗೆ ಗೌಡ ಜನಾಂಗ ಈ ವಿಷಯದಲ್ಲಿ ಯಾವದೇ ವಿಷಯ ವಿಮರ್ಶೆ ಅಥವಾ ಸೌಹಾರ್ದಯುತವಾಗಿ ಬಗೆಹರಿಸುವ ಸಭೆಗಳಿಗೆ ಸ್ಪಂದಿಸುವದಿಲ್ಲ ಹಾಗೂ ಅಗತ್ಯವಿದ್ದಲ್ಲಿ ಮುಂದಿನ ಕಾನೂನು ಹೋರಾಟಕ್ಕೆ ಸಿದ್ಧವಾಗಿದೆ ಎಂದು ವಿಶೇಷ ಸಭೆ ನಡೆಸಿ ತೀರ್ಮಾನಿಸಿದೆ.

ನಿನ್ನೆ ದಿನ ಕೊಡಗು ಜಿಲ್ಲಾ ಗೌಡ ಸಮಾಜಗಳ ಫೆಡರೇಶನ್ ವತಿಯಿಂದ ಜಿಲ್ಲೆಯ ಗೌಡ ಸಮಾಜಗಳ ಹಾಗೂ ಗೌಡ ಪ್ರಮುಖರ ಸಭೆ ಕರೆದು ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಯಾಗಿ ಪರಿಗಣಿಸಲಾಗಿರುವ ಜಿಲ್ಲೆಯ ದೇವಟ್ ಪರಂಬು ಸಮಸ್ಯೆ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಈ ಸಮಸ್ಯೆಯ ಹಿನ್ನೆಲೆಯಲ್ಲಿ ಕೊಡವ ಹಾಗೂ ಗೌಡ ಜನಾಂಗಗಳ ಮಧ್ಯೆ ಉದ್ಭವಿಸಿರುವ ಬಿನ್ನಾಭಿಪ್ರಾಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಸೌಹಾರ್ದ ವೇದಿಕೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಕೊಡಗು ಜಿಲ್ಲಾ ಜನಪ್ರತಿನಿಧಿಗಳ ಪ್ರಯತ್ನದ ಬಗ್ಗೆ ಗೌರವ ವ್ಯಕ್ತಪಡಿಸಲಾಯಿತು.

ಈ ಪ್ರಯತ್ನಗಳಲ್ಲಿ ಜೂನ್ 30 ರಂದು ಜಿಲ್ಲೆಯ ಜನಪ್ರತಿನಿಧಿಗಳು, ಕೊಡವ ಹಾಗೂ ಗೌಡ ಜನಾಂಗದ ಪ್ರಮುಖರನ್ನು ಆಹ್ವಾನಿಸಿ ನಡೆಸಿದ ಸಮಸ್ಯೆ ಪರಿಹಾರ ಸಭೆಯಲ್ಲಿ ತೀರ್ಮಾನ ಕೈಗೊಂಡು ಈ ಸಮಸ್ಯೆ ಪರಿಹಾರವಾಗುವ ನಿಟ್ಟಿನಲ್ಲಿ ಈ ದಿವಸದಿಂದ ಎರಡು ಜನಾಂಗಗಳ ಪ್ರಮುಖರು ಯಾವದೇ ಹೇಳಿಕೆ, ಪ್ರತಿ ಹೇಳಿಕೆಗಳನ್ನು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಪ್ರಕಟಿಸಿ ಸಮಸ್ಯೆ ಉಲ್ಭಣಿಸದಂತೆ ನೋಡಿಕೊಳ್ಳುವಂತೆ ಕೋರಲಾಗಿತ್ತು. ಜನಪ್ರತಿನಿಧಿಗಳ ತೀರ್ಮಾನಕ್ಕೆ ಗೌರವ ನೀಡಿ ಅಂದಿನಿಂದ ಇಂದಿನವರೆಗೆ ಗೌಡ ಜನಾಂಗದ ಯಾವದೇ ಸಂಘಟನೆ ಅಥವಾ ವ್ಯಕ್ತಿಗಳು ಈ ಬಗ್ಗೆ ಹೇಳಿಕೆ ನೀಡದೆ ಗೌರವ ಪ್ರದರ್ಶಿಸಿದೆ. ಆದರೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕೊಡವ ಜನಾಂಗದ ಹಲವು ಹೇಳಿಕೆಗಳನ್ನು ಹಾಗೂ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ಸಂಪಾದಕೀಯವೊಂದನ್ನು ಗೌಡ ಜನಾಂಗ ಸೂಕ್ಷ್ಮವಾಗಿ ಗಮನಿಸಿದೆ.

ಹಾಗೆಯೇ ಜನಪ್ರತಿನಿಧಿಗಳ ಕೋರಿಕೆಗೆ ಮನ್ನಣೆ ನೀಡದೆ ಗೌಡ ಜನಾಂಗದ ವಿರುದ್ಧ ಹೇಳಿಕೆ ನೀಡುತ್ತಿರುವ ಕೊಡವ ಜನಾಂಗದ ಪ್ರಮುಖರ ಹೇಳಿಕೆಗಳಲ್ಲಿ ಈ ಪ್ರಮುಖರಿಗೆ ಈ ಸಮಸ್ಯೆ ಪರಿಹಾರವಾಗುವ ಇಚ್ಛಾ ಕೊರತೆ ಕಂಡುಬರುತ್ತಿದ್ದು ಹಠ ಸಾಧನೆಯ ಹೆಜ್ಜೆಗಳು ಗೋಚರಿಸುತ್ತಿರುವದನ್ನು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಕೊಡಗು ಗೌಡ ಫೆಡರೇಶನ್ ಹಾಗೂ ಭಾಗಮಂಡಲ ನಾಗರಿಕ ವೇದಿಕೆ ಪದಾಧಿಕಾರಿಗಳು ಲಿಖಿತ ಹೇಳಿಕೆ ನೀಡಿದ್ದಾರೆ.