ಸೋಮವಾರಪೇಟೆ,ನ.24: ತಾಲೂಕಿನ ಯಡವಾರೆ ಗ್ರಾಮದಿಂದ ಗೋವುಗಳನ್ನು ಸಾಗಿಸಲು ತಾನು ಪತ್ರ ನೀಡಿದ್ದೇನೆಯೇ ಹೊರತು, ಗೋವುಗಳನ್ನು ಕಸಾಯಿಖಾನೆಗೆ ಸಾಗಿಸಲು ಅನುಮತಿ ಪತ್ರ ನೀಡಿಲ್ಲ. ಆದರೂ ತನ್ನ ಮೇಲೆ ರಾಜಕೀಯ ದ್ವೇಷದಿಂದ ಅನಗತ್ಯ ಆರೋಪ ಹೊರಿಸಲಾಗುತ್ತಿದೆ ಎಂದು ಐಗೂರು ಗ್ರಾ.ಪಂ. ಅಧ್ಯಕ್ಷ ಕೆ.ಪಿ. ರಾಯ್ ಸ್ಪಷ್ಟನೆ ನೀಡಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಐಗೂರು ಗ್ರಾಮ ಪಂಚಾಯಿತಿಯಲ್ಲಿ ಜಿಜೆಪಿ ಪಕ್ಷವು ಅಧಿಕಾರ ಕಳೆದುಕೊಂಡಿರುವ ದರಿಂದ ಹತಾಶರಾಗಿ, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸುತ್ತ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಯಡವಾರೆ ಗ್ರಾಮದ ಬಾಲಕೃಷ್ಣ ಎಂಬವರು ತಮ್ಮ ಸ್ವಾಧೀನದಲ್ಲಿದ್ದ 9 ದನಕರುಗಳನ್ನು ತಮ್ಮ ಸಂಬಂಧಿಕÀ ಹೆಬ್ಬಾಲೆ ಗ್ರಾಮದ ಕೆ.ಬಿ. ಸುರೇಶ್ ಎಂಬವರಿಗೆ ನೀಡುವ ಸಲುವಾಗಿ ಪಂಚಾಯಿತಿಯಿಂದ ಅನುಮತಿ ಕೇಳಿದ್ದರು. ಬಡ ರೈತನ ಮೇಲೆ ಮಾನವೀಯತೆ ದೃಷ್ಟಿಯಿಂದ ದನಕರುಗಳನ್ನು ಸಂಬಂಧಿಕರ ಮನೆಗೆ ಸಾಗಿಸಲು ಅನುಮತಿ ನೀಡಿದ್ದೇನೆ. ಕಸಾಯಿಖಾನೆಗೆ ಸಾಗಿಸಲು ತಾನು ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಹಿಂದುತ್ವದ ಪರ ಮಾತನಾಡುವವರು ಅನ್ಯ ಕೋಮಿಗೆ ಸೇರಿದವರೊಂದಿಗೆ ಗೋವುಗಳ ಮಾರಾಟ, ಮರ ವ್ಯಾಪಾರ ಮತ್ತು ಕರಿಮೆಣಸಿನ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ರಾತ್ರಿ ವೇಳೆ ಇವರುಗಳೇ ಟೆಂಪೋ ವಾಹನಕ್ಕೆ ಜಾನುವಾರುಗಳನ್ನು ಹತ್ತಿಸಿ, ನಂತರ ಠಾಣೆಗೆ ಬಂದು ಗೋಸಾಗಾಟವನ್ನು ತಡೆಯಿರಿ ಎಂದು ಆಗ್ರಹಿಸುತ್ತಾರೆ. ಇಂತಹವರಿಂದ ಗೋ ರಕ್ಷಣೆಯ ಪಾಠ ಕಲಿಯಬೇಕಾಗಿಲ್ಲ ಎಂದು ಗೋಷ್ಠಿಯಲ್ಲಿದ್ದ ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್ಕುಮಾರ್ ಹೇಳಿದರು.
ಗೋಷ್ಠಿಯಲ್ಲಿ ಪಂಚಾಯಿತಿ ಸದಸ್ಯರಾದ ಡಿ.ಎಸ್. ಚಂಗಪ್ಪ, ಗೋಪಾಲಕೃಷ್ಣ ಉಪಸ್ಥಿತರಿದ್ದರು.