ವೀರಾಜಪೇಟೆ, ಜು. 21: ವೀರಾಜಪೇಟೆ ಆರ್ಜಿ ಬಳಿಯ ಗೋಮಾಳ ಸಂರಕ್ಷಣಾ ಸಮಿತಿಗೆ ಸೇರಿದ ಜಾಗದಲ್ಲಿ ಯಾವದೇ ಕಾಮಗಾರಿಯನ್ನು ಮುಂದುವರೆಸದಂತೆ ಗೋಮಾಳ ಸಮಿತಿಯ ಅಧ್ಯಕ್ಷ ಕೆ.ಸಿ.ಸುಬ್ಬಯ್ಯ ಅವರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಗೋಮಾಳ ಸಮಿತಿ ವಿರುದ್ಧ ತೀರ್ಪು ನೀಡಲಾಗಿದೆ ಎಂಬ ವದಂತಿ ಮೇರೆಗೆ ಗೋಮಾಳ ಜಾಗದಲ್ಲಿ ಕಾಮಗಾರಿ ಮುಂದುವರೆಸುವದು ಸರಿಯಲ್ಲ. ಉಚ್ಚ ನ್ಯಾಯಾಲಯದಿಂದ ಈವರೆಗೆ ಸಮಿತಿಗೆ ನ್ಯಾಯಾಲಯದ ಆದೇಶವಾಗಲಿ, ತೀರ್ಪಿನ ಪ್ರತಿಯಾಗಲಿ ದೊರೆತಿಲ್ಲ. ವೆಬ್ಸೈಟ್ನಲ್ಲಿಯೂ ನ್ಯಾಯಾಲಯದ ಆದೇಶ ಬಿತ್ತರವಾದ ಪ್ರತಿಗಳಿಲ್ಲ ಎಂದು ಸುಬ್ಬಯ್ಯ ಅವರು ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ.
ಕಳೆದ 20 ದಿನಗಳಿಂದಲೂ ಆರ್ಜಿ ಗೋಮಾಳ ಜಾಗದಲ್ಲಿ ನಿರ್ಮಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡದ ಕಾಮಗಾರಿ ಮುಂದುವರೆದಿದೆ. ಈ ಹಿಂದೆ ಉಚ್ಚ ನ್ಯಾಯಾಲಯವೇ ಗೋಮಾಳ ಜಾಗದಲ್ಲಿ ಯಾವದೇ ಕಾಮಗಾರಿ ನಿರ್ವಹಿಸದಂತೆ ಗೋಮಾಳ ಸಮಿತಿಯ ಪರ ತಡೆಯಾಜ್ಞೆ ನೀಡಿತ್ತು. ನಂತರ ಉಚ್ಚ ನ್ಯಾಯಾಲಯದಲ್ಲಿ ನಡೆದಿರುವ ವಿದ್ಯಮಾನಗಳ ಬಗ್ಗೆ ಸಮಿತಿಗೆ ಯಾವದೇ ಮಾಹಿತಿ ದೊರೆತಿಲ್ಲ ಎಂದು ಹೇಳಲಾಗಿದೆ.
ಈಗಾಗಲೇ ಗೋಮಾಳ ಜಾಗದಲ್ಲಿ ಪೊಲೀಸ್ ನಕ್ಸಲ್ ನಿಗ್ರಹ ದಳದ ಕಾರ್ಯಾಲಯ ಹಾಗೂ ವಸತಿ ಗೃಹಗಳು ಪೂರ್ಣಗೊಂಡು ಕಾರ್ಯ ನಿರ್ವಹಿಸುತ್ತಿದೆ. ಮೊರಾರ್ಜಿ ವಸತಿ ಶಾಲೆಯು ಮುಕ್ತಾಯ ಹಂತದಲ್ಲಿದ್ದು ಸಧ್ಯದಲ್ಲಿಯೇ ಆರಂಭಗೊಳ್ಳಲಿದೆ. ವಾಲ್ಮೀಕಿ ಭವನದ ಕಟ್ಟಡದ ತಳಪಾಯ ಮುಗಿದಿದೆ. ಕಟ್ಟಡದ ಕಾಮಗಾರಿ ಪ್ರಾರಂಭಿಸಲು ಗುತ್ತಿಗೆದಾರರು ಸಿದ್ಧತೆಯಲ್ಲಿದ್ದಾರೆ. ಕಳೆದ 40ವರ್ಷಗಳ ಹಿಂದೆಯೇ ಆರ್ಜಿ ಗ್ರಾಮದಲ್ಲಿ ಗೋಮಾಳಕ್ಕಾಗಿ ಒಟ್ಟು 89.5 ಎಕರೆ ಜಾಗವನ್ನು ಆಗಿನ ಜಿಲ್ಲಾಧಿಕಾರಿ ಮಂಜೂರು ಮಾಡಿ ಗೋಮಾಳ ಸಂರಕ್ಷಣಾ ಸಮಿತಿಯ ಸ್ವಾಧೀನಕ್ಕೆ ನೀಡಿದ್ದರು. ಈ ಪೈಕಿ 15ವರ್ಷಗಳಿಂದ ಜಿಲ್ಲಾಧಿಕಾರಿಯವರು ವಿವಿಧ ಇಲಾಖೆಗಳಿಗೆ ಕಟ್ಟಡಕ್ಕಾಗಿ ಸುಮಾರು 24.5 ಎಕರೆ ಜಾಗ ಮಂಜೂರು ಮಾಡಿದ್ದರಿಂದ ಸಮಿತಿಗೆ 65 ಎಕರೆ ಜಾಗ ಮಾತ್ರ ಉಳಿಕೆ ಇತ್ತು. ಈ 24.5 ಎಕರೆ ಜಾಗವನ್ನು ಮರಳಿ ಪಡೆಯಲು ಗೋಮಾಳ ಸಮಿತಿ ಉಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿತ್ತು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ ಸಂದರ್ಭದಲ್ಲಿ ಸಮಿತಿಯ ರಾಮಯ್ಯ, ವಕೀಲರಾದ ಬಿ.ಎಸ್. ನಾಗೇಶ್, ಪುರುಷೋತ್ತಮ ಹಾಜರಿದ್ದರು.
ಮನವಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಮುಂದಿನ ಕ್ರಮಕ್ಕಾಗಿ ತಹಶೀಲ್ದಾರ್ ಅವರಿಗೆ ಕಳುಹಿಸುವದಾಗಿ ಗೋಮಾಳ ಸಮಿತಿಗೆ ಭರವಸೆ ನೀಡಿದರು ಎಂದು ಸುಬ್ಬಯ್ಯ ತಿಳಿಸಿದರು.