*ಗೋಣಿಕೊಪ್ಪ, ಅ. 7: ದಾರಿಯುದ್ದಕ್ಕೂ ಮಹಿಳೆಯರ ಚಂಡೆ ವಾದ್ಯ ಕಲಶ ಹೊತ್ತ ಮಹಿಳೆಯರದ್ದೇ ದರ್ಬಾರ್, ಗೋಣಿಕೊಪ್ಪಲಿನ ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ನಡೆದ 3ನೇ ವರ್ಷದ ಮಹಿಳಾ ದಸರಾ ಸಂಭ್ರಮದಲ್ಲಿ ಕಂಡುಬಂದಿತು.ದಿನದ ಜಂಜಾಟವನ್ನು ಮಹಿಳಾ ದಸರಾದಲ್ಲಿ ಸಂಭ್ರಮಿಸಿ ವಿವಿಧ ಆಟೋಟಗಳಲ್ಲಿ ಭಾಗವಹಿಸಿದರು. ತಾಲೂಕಿನ ವಿವಿಧೆಡೆಯಿಂದ ಆಗಮಿಸಿ ಕಿಕ್ಕಿರಿದು ಸೇರಿದ್ದ ಮಹಿಳೆಯರು ಹಾಡಿ ಕುಣಿದರು. ವಿವಿಧ ಬಗೆಯ ತಿಂಡಿ ತಿನಿಸಗಳು ಗೃಹಬಳಕೆಯ ವಸ್ತುಗಳು ಸೇರಿದಂತೆ ಮಹಿಳೆಯರೇ ತಯಾರಿಸಿದ ಅನೇಕ ವಸ್ತುಗಳು ಇಲ್ಲಿ ಭರ್ಜರಿ ಮಾರಾಟವಾಯಿತು.

ಕಾವೇರಿ ಮಹಿಳಾ ದಸರಾ ಉತ್ಸವದ ಅಂಗವಾಗಿ ಬೆಳಿಗ್ಗೆ ಪಾಲಿಬೆಟ್ಟ ರಸ್ತೆಯಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಸಾಗುತ್ತಿದ್ದಂತೆ ಅಲ್ಲಲ್ಲಿ ಸೇರಿಕೊಂಡ ನೂರಾರು ಮಹಿಳೆಯರು ಕಾವೇರಿ ದಸರಾ

(ಮೊದಲ ಪುಟದಿಂದ) ಸಮಿತಿಯ ವೇದಿಕೆ ತಲಪುತ್ತಿದ್ದಂತೆ ನಿರೀಕ್ಷೆಗೂ ಮೀರಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು.ಮೆರವಣಿಗೆಯಲ್ಲಿ ಕೇರಳದ ಮಹಿಳಾ ಮಣಿಗಳ ಚಂಡೆ ವಾದ್ಯಕ್ಕೆ ಮಹಿಳೆಯರು ಹೆಜ್ಜೆ ಹಾಕುತ್ತಾ ಸಾಗಿದರು. ಬೊಂಬೆ ಕುಣಿತ, ಕಲಶ ಹೊತ್ತ ಮಹಿಳೆಯರು ಮೆರವಣಿಗೆಯ ಆಕರ್ಷಣೆಯಾಗಿತ್ತು.

ಕಾರ್ಯಕ್ರಮದಲ್ಲಿ ವಿವಿಧ ಮಹಿಳಾ ಸಂಘದಿಂದ ಆಯೋಜಿಸಿದ್ದ ಅಂಗಡಿ ಮಳಿಗೆ ಹಾಗೂ ಕ್ರೀಡಾಕೂಟವನ್ನು ಬಾರದ ಗುಂಡು ಎಸೆಯುವದರ ಮೂಲಕ ತಾ.ಪಂ. ಅಧ್ಯಕ್ಷೆ ಸ್ಮೀತಾ ಪ್ರಕಾಶ್ ಉದ್ಘಾಟನೆ ಮಾಡಿದರು.

ಮಹಿಳೆಯರಿಗಾಗಿ ನಡೆದ ಕ್ರೀಡಾ ಪೈಪೋಟಿಯಲ್ಲಿ ಹಗ್ಗ ಜಗ್ಗಾಟ, ಲೆಮನ್ ಅಂಡ್ ಸ್ಪೂನ್, ಬಾಂಬಿಗ್ ದ ಸಿಟಿ, ಬಕೆಟ್ ಇನ್ ದ ಬಾಲ್, ಭಾರದ ಗುಂಡು ಎಸೆತ, ಪಾಸಿಂಗ್ ದ ಬಾಲ್ ಸ್ಪರ್ಧೆಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿದರು.

ನಂತರ ವೇದಿಕೆಯಲ್ಲಿ ಫ್ಯಾನ್ಸಿ ಡ್ರೆಸ್, ಪಿಕ್ ಅಂಡ್ ಆಕ್ಟ್, ಸಂಗೀತ ಸ್ಪರ್ಧೆ, ಮ್ಯೂಸಿಕ್ ಅಂಡ್ ಡ್ಯಾನ್ಸ್, 6 ಸೀರೆಗಳ ಲಕ್ಕಿಡಿಪ್, ನಿಖರ ಬೆಲೆಯ ಸೀರೆ, ಮಹಿಳಾ ದಸರಾದ ಅದೃಷ್ಟವಂತೆ, ವಾಲಗತ್ತಾಟ್ ಸ್ಪರ್ಧೆಗಳು ನಡೆದು ಪ್ರೇಕ್ಷಕರನ್ನು ಮನರಂಜಿಸಿತು. ಮಹಿಳೆಯರೇ ಅಧಿಕವಾಗಿದ್ದ ಕಾರ್ಯಕ್ರಮ ಜನಮನ ಗೆಲ್ಲುವಲ್ಲಿ ಸಫಲವಾಯಿತು. ಕೇರಳದ ಮಹಿಳೆಯರ ಚಂಡೆವಾದ್ಯ ನೆರೆದಿದ್ದ ಮಹಿಳೆಯರಿಗೆ ತಾವು ಪುರುಷರಿಗೂ ಕಡಿಮೆ ಇಲ್ಲ. ನಮ್ಮಿಂದ ಎಲ್ಲವೂ ಸಾಧ್ಯ ಎಂಬತ್ತಿತ್ತು.

ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಗ್ರಾ.ಪಂ. ಅಧ್ಯಕ್ಷೆ ಹಾಗೂ ಕಾವೇರಿ ದಸರಾ ಸಮಿತಿ ಅಧ್ಯಕ್ಷೆ ಸೆಲ್ವಿ ವಹಿಸಿದರೆ, ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯ ಜಯಾ ಪೂವಯ್ಯ, ಗೋಣಿಕೊಪ್ಪಲು ಗ್ರಾ.ಪಂ. ಸದಸ್ಯ ಹಾಗೂ ಕಾವೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಕುಲ್ಲಚಂಡ ಬೋಪಣ್ಣ, ರಾಜ್ಯ ಬಿ.ಜೆ.ಪಿ. ಕಾರ್ಯಕಾರಿಣಿ ಸದಸ್ಯೆ ರೀನಾ ಪ್ರಕಾಶ್, ಕೊಡಗು ಜಿಲ್ಲಾ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್, ಜಿಲ್ಲಾ ಬಿ.ಜೆ.ಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನಾ ಚಂಗಪ್ಪ, ಬ್ರಹ್ಮಕುಮಾರಿ ಆಶ್ರಮದ ಕಾಂತಕ್ಕ ಸುಶೀಲಾ ಹಾಗೂ ಕಾವೇರಮ್ಮ ಉಪಸ್ಥಿತರಿದ್ದರು.

ಮಹಿಳಾ ದಸರಾ ಗೌರವಾಧ್ಯಕ್ಷೆ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಸಂಚಾಲಕಿ ರೀನಾ ರಾಜೀವ್ ಸ್ವಾಗತಿಸಿದರೆ, ಪ್ರಧಾನ ಕಾರ್ಯದರ್ಶಿ ರಾಣಿ ನಾರಾಯಣ್ ವಂದಿಸಿದರು. ಕೊಣಿಯಂಡ ಬೋಜಮ್ಮ, ಕೊಣಿಯಂಡ ಕಾವ್ಯ ಹಾಗೂ ರತಿ ಅಚ್ಚಪ್ಪ ನಿರೂಪಿಸಿದರು.

ಆಟೋಟ ಹಾಗೂ ಸಾಂಸ್ಕøತಿಕ ಪೈಪೋಟಿಯ ಉಸ್ತುವಾರಿಯನ್ನು ಕುಲ್ಲಚಂಡ ಪಮ್ಮಿ ಬೋಪಣ್ಣ, ಕೊಟ್ಟಂಗಡ ವಿಜು ದೇವಯ್ಯ, ಎಸ್. ಧನಲಕ್ಷ್ಮಿ, ಪೂಜಾ ಕರುಂಬಯ್ಯ, ಕವಿತಾ, ಸರಳಾ ಸೇರಿದಂತೆ ತಾಲೂಕಿನ ವಿವಿಧ ಶ್ರೀ ಶಕ್ತಿ ಸಂಘ, ಸ್ವಸಹಾಯ ಸಂಘ, ಮಹಿಳಾ ಒಕ್ಕೂಟಗಳು ಭಾಗವಹಿಸಿದವು.