ಗೋಣಿಕೊಪ್ಪಲು, ಜ.8: ದಿ. ಗುಂಡೂರಾವ್ ಮುಖ್ಯಮಂತ್ರಿ ಅವಧಿಯಲ್ಲಿ ಕೂಡಿಗೆಯಲ್ಲಿ ಆರಂಭಗೊಂಡ ಕ್ರೀಡಾ ಶಾಲೆಯಿಂದ ಸಾಕಷ್ಟು ರಾಷ್ಟ್ರೀಯ-ಅಂತರ್ರಾಷ್ಟ್ರೀಯ ಕ್ರೀಡಾ ಪಟುಗಳು ಹೊರಹೊಮ್ಮಿದ್ದಾರೆ. ಅಲ್ಲಿ ಒಂದಷ್ಟು ಮೂಲಭೂತ ಸೌಕರ್ಯ ಬಿಟ್ಟಲ್ಲಿ ಜಿಲ್ಲೆಯ ಇತರ ಭಾಗದಲ್ಲಿ ಇಲ್ಲ. ಈಗಾಗಲೇ ಪೆÇನ್ನಂಪೇಟೆಯಲ್ಲಿ ಹಾಕಿ ಟರ್ಫ್ ಮೈದಾನವಿದ್ದು ಮುಂದೆ ಸೋಮವಾರಪೇಟೆ, ಗೋಣಿಕೊಪ್ಪಲು, ನಾಪೆÇೀಕ್ಲು, ಅಮ್ಮತ್ತಿಯಲ್ಲಿ ಸಿಂಥೆಟಿಕ್ ಟರ್ಫ್ ಮೈದಾನದ ಅಗತ್ಯವಿದೆ. ಗೋಣಿಕೊಪ್ಪಲಿನಲ್ಲಿ ಅಶ್ವಿನಿ ಹಾಗೂ ದತ್ತಾ ಕರುಂಬಯ್ಯ ದಂಪತಿಗಳು ‘ಕ್ರೀಡೆಯೊಂದಿಗೆ ಶಿಕ್ಷಣ’ ಎಂಬ ಉತ್ತಮ ಉದ್ದೇಶದೊಂದಿಗೆ ಕಾಲ್ಸ್ ಶಾಲೆಯನ್ನು ಆರಂಭಿಸಿದ್ದು, ಇಲ್ಲಿ ಹಾಕಿ ಟರ್ಫ್ ಮೈದಾನಕ್ಕೆ ರೂ.5 ಕೋಟಿ ಅನುದಾನ ಅಗತ್ಯವಿದ್ದು ಮುಂದಿನ ಸಾಲಿನಲ್ಲಿ ಕಲ್ಪಿಸಿಕೊಡುವಂತೆ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಕೇಂದ್ರ ಹಾಗೂ ರಾಜ್ಯ ಕ್ರೀಡಾ ಸಚಿವರಲ್ಲಿ ಮನವಿ ಮಾಡಿದರು.
ಗೋಣಿಕೊಪ್ಪಲು ಅಶ್ವಿನಿ ಕ್ರೀಡಾ ಪ್ರತಿಷ್ಠಾನ ಹಾಗೂ ಭಾರತ ಕ್ರೀಡಾ ಪ್ರಾಧಿಕಾರ ಸಂಯುಕ್ತ ಆಶ್ರಯದಲ್ಲಿ ನಿರ್ಮಾಣಗೊಂಡಿರುವ ರೂ.9 ಕೋಟಿ ವೆಚ್ಚದ ಅಥ್ಲೆಟಿಕ್ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತ ಹಾಕಿ ತಂಡ ಒಳಗೊಂಡಂತೆ ಇತರೆ ತಂಡದಲ್ಲಿ ಕೊಡಗು ಜಿಲ್ಲೆಯ ಶೇ.50 ರಷ್ಟು ಕ್ರೀಡಾತಾರೆಗಳು ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದು, ಕ್ರೀಡಾಜಿಲ್ಲೆಯಾದ ಕೊಡಗಿಗೆ ಎಲ್ಲ ಮೂಲಭೂತ ಸೌಕರ್ಯ ಅಳವಡಿಸುವ ನಿಟ್ಟಿನಲ್ಲಿ ಸಿಂಹಪಾಲು ಅನುದಾನ ನೀಡುವಂತೆ ಇದೇ ಸಂದರ್ಭ ಬೋಪಯ್ಯ ಅವರು ಅಶ್ವಿನಿ ನಾಚಪ್ಪ ಹಾಗೂ ದತ್ತಾ ಕರುಂಬಯ್ಯ ಪರವಾಗಿ ಸಚಿವರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಆಶ್ವಿನಿ ಕ್ರೀಡಾ ಪ್ರತಿಷ್ಠಾನದ ಅಧ್ಯಕ್ಷೆ ಅಶ್ವಿನಿ ಅವರು, ಈಗಾಗಲೇ ಗೋಣಿಕೊಪ್ಪಲಿನಲ್ಲಿ ಸಣ್ಣ ಪ್ರಮಾಣದಲ್ಲಿ ಕ್ರೀಡೆಗೆ ಪೂರಕವಾದ ವಾತಾವರಣ ನಿರ್ಮಾಣಮಾಡಲು ಹಂತ ಹಂತವಾಗಿ ಯೋಜನೆಯನ್ನು ಹಾಕಿಕೊಳ್ಳಲಾಗಿದ್ದು, ಇಲ್ಲಿನ ಸಿಂಥೆಟಿಕ್ ಅಥ್ಲೆಟಿಕ್ ಕೇಂದ್ರದ ಮೂಲಕ ತರಬೇತಿ ನೀಡಲು ಜಿಲ್ಲೆಯ ಎಲ್ಲ ಗ್ರಾಮೀಣ ಪ್ರತಿಭೆಗೂ ಮುಕ್ತ ಅವಕಾಶ ನೀಡಲಾಗುವದು. ಕೊಡಗು ಜಿಲ್ಲಾ ಮಟ್ಟದ ಅಥ್ಲೆಟಿಕ್ ಚಾಂಪಿಯನ್ಶಿಪ್ ಅನ್ನು ಯಶಸ್ವಿಯಾಗಿ ಆಯೋಜಿಸಿದ್ದು ಮುಂದೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅಥ್ಲೆಟಿಕ್ ಕ್ರೀಡಾಕೂಟ ಆಯೋಜನೆಗೆ ಹಲವು ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಅವಶ್ಯವಿದೆ ಎಂದರು.
ಅಶ್ವಿನಿ ಕ್ರೀಡಾ ಪ್ರತಿಷ್ಠಾನದ ಮೂಲಕ ಈಗಾಗಲೇ ಹಲವು ಪ್ರತಿಭೆಗಳನ್ನು ಗುರುತಿಸಿ ಉತ್ತೇಜಿಸಲಾಗಿದೆ. ರಾಷ್ಟ್ರೀಯ ಕ್ರೀಡಾ ಶಿಬಿರ ಆಯೋಜಿಸುವ ನಿಟ್ಟಿನಲ್ಲಿಯೂ ಕ್ರೀಡಾಳುಗಳ ಆರೋಗ್ಯ, ದೈಹಿಕ ಕ್ಷಮತೆ ಅಭಿವೃದ್ಧಿ, ಶಿಬಿರಾರ್ಥಿಗಳು ತಂಗಲು ಪೂರಕ ವಸತಿ ವ್ಯವಸ್ಥೆ ಮತ್ತು ಮುಂದೆ ಸಿಂಥೆಟಿಕ್ ಹಾಕಿ ಮೈದಾನ ಅಭಿವೃದ್ಧಿಗೂ ಒತ್ತು ನೀಡಲಾಗುವದು ಎಂದರು.
ಇದೀಗ ಅಥ್ಲೆಟಿಕ್ ಕೇಂದ್ರದಲ್ಲಿ ಓಟದ ಸ್ಪರ್ಧೆ, ಹರ್ಡಲ್ಸ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, ಶಾಟ್ಪುಟ್, ಉದ್ದ ಜಿಗಿತ ಮುಂತಾದ ಕ್ರೀಡೆಗೆ ಅನುಕೂಲವಾಗುವಂತೆ ಅಂತರ್ರಾಷ್ಟ್ರೀಯ ಗುಣಮಟ್ಟದ ಮೈದಾನ ಸಿದ್ಧಪಡಿಸಲಾಗಿದೆ. ಕಾಲ್ಸ್ ಆವರಣದಲ್ಲಿ ಗುಣಮಟ್ಟದ ಶೂಟಿಂಗ್ ರೇಂಜ್, ಸ್ವಿಮ್ಮಿಂಗ್ ಪೂಲ್, ಜಿಮ್ನಾಸ್ಟಿಕ್ ಕೇಂದ್ರ ಕಾರ್ಯ ಪೂರ್ಣಗೊಂಡಿದೆ. ಮುಂದೆ ಅಮೇರಿಕಾ ಇತ್ಯಾದಿ ದೇಶಗಳ ವಿಶ್ವ ವಿದ್ಯಾಲಯ ಮಟ್ಟದ ಕ್ರೀಡಾಕೂಟವನ್ನು ಇಲ್ಲಿ ಆಯೋಜಿಸುವ ಮೂಲಕ ಕ್ರೀಡಾ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿಯೂ ಚಿಂತನೆ ಇದೆ. ರಾಷ್ಟ್ರೀಯ ಶಾಲಾ ಮಟ್ಟದ ಕ್ರೀಡಾ ಕೂಟ ನಡೆಸುವ ಉದ್ಧೇಶವೂ ಇದ್ದು, ವಿಶ್ವದರ್ಜೆಯ ಕ್ರೀಡಾಪಟುಗಳನ್ನು ಭವಿಷ್ಯದಲ್ಲಿ ಉತ್ಪಾದಿಸುವ ಗುರಿಯನ್ನು ಅಶ್ವಿನಿ ಕ್ರೀಡಾ ಪ್ರತಿಷ್ಠಾನ ಹೊಂದಿದೆ ಎಂದು ಹೇಳಿದರು.ವೇದಿಕೆಯಲ್ಲಿ ಕಾಲ್ಸ್ ಶಾಲಾ ಮುಖ್ಯಸ್ಥ ದತ್ತಾಕರುಂಬಯ್ಯ, ಭಾರತ ಕ್ರೀಡಾ ಪ್ರಾಧಿಕಾರದ ವಲಯ ನಿರ್ದೇಶಕ ಎಂ.ಶ್ಯಾಮ್ಸುಂದರ್, ಶ್ರೀಮತಿ ವಿಜಯ್ ಘೋಯಲ್, ಕಾಲ್ಸ್ ಪ್ರಾಂಶುಪಾಲೆ ಗೌರಮ್ಮ ನಂಜಪ್ಪ ಉಪಸ್ಥಿತರಿದ್ದರು.
ಇದೇ ಸಂದರ್ಭ ಕ್ರೀಡಾ ಸಾಧನೆ ಮಾಡಿದ ಜೂನಿಯರ್ ಕರ್ನಾಟಕ ತಂಡಕ್ಕೆ ಆಯ್ಕೆಯಾದ ಚೆಪ್ಪುಡಿರ ನರೇನ್ ಹಾಗೂಅಥ್ಲೆಟಿಕ್ನಲ್ಲಿ ಸಾಧನೆ ಮಾಡಿದ ಸಿ.ಎಲ್.ವೈಷ್ಣವಿ ಅವರಿಗೆ ಅತಿಥಿಗಳು ಸ್ಮರಣಿಕೆ ನೀಡಿದರು.
ಇಲ್ಲಿನ ಕಾವೇರಿ ಕಾಲೇಜು ಮೈದಾನದ ಹೆಲಿಪ್ಯಾಡ್ನಲ್ಲಿ ಹೆಲಿಕಾಫ್ಟರ್ ಮೂಲಕ ಆಗಮಿಸಿದ ಕೇಂದ್ರ ಕ್ರೀಡಾ ಸಚಿವರು, ಕಾಲ್ಸ್ ಶಾಲಾ ಶ್ರೀ ವಿನಾಯಕ ದೇಗುಲಕ್ಕೆ ಮೊದಲು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಕಾಲ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಪರಿಚಯಿಸಿಕೊಂಡು, ಕಾಲ್ಸ್ ಶಾಲಾ ಆವರಣದಲ್ಲಿರುವ ಶೂಟಿಂಗ್ ರೇಂಜ್, ಜಿಮ್, ಶಾಲಾ ಆವರಣವನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವಾಗತ ಅಶ್ವಿನಿ ನಾಚಪ್ಪ, ನಿರೂಪಣೆ, ವಂದನಾರ್ಪಣೆ ಆಂಗ್ಲ ಪ್ರಾಧ್ಯಾಪಕಿ ಕೊಡಂದೇರ ಕಾವೇರಿ ಚಂಗಪ್ಪ ನಿರ್ವಹಿಸಿದರು.