ಗೋಣಿಕೊಪ್ಪಲು, ಆ. 29: ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಈ ಬಾರಿ ತೀವ್ರ ಮಳೆಯ ಅಭಾವ ಕಂಡು ಬಂದಿದ್ದು, ಭವಿಷ್ಯದಲ್ಲಿ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತೀವೃ ಕ್ಷಾಮ ಕಂಡುಬರುವ ಸಾಧ್ಯತೆ ಇದೆ. ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಇನ್ನೂ ಅಬ್ಬರದ ಮಳೆ ಕಾಣಿಸಿಕೊಳ್ಳದಿರುವದು, ಜಲ ಹುಟ್ಟದಿರುವದು ಆತಂಕಕ್ಕೆ ಎಡೆಮಾಡಿದೆ. ಕಾವೇರಿ ನದಿಯಿಂದ ಪಚ್ಚಾಟ್ ಎಂಬಲ್ಲಿಂದ ಗೋಣಿಕೊಪ್ಪಲಿಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಯೋಜನೆ ನೆನೆಗುದಿಗೆ ಬಿದ್ದಿದೆ. ಕುಂದ-ಬರಪೆÇಳೆ ವ್ಯಾಪ್ತಿಯಿಂದಲೂ ಗೋಣಿಕೊಪ್ಪಲಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಅವಕಾಶವಿದ್ದಾಗ್ಯೂ ಜಾರಿಯಾಗಿಲ್ಲ. ಕೇವಲ ಕೊಳವೆ ಬಾವಿಯ ಸಂಪರ್ಕದ ಕುಡಿಯುವ ನೀರನ್ನು ಅವಲಂಭಿಸಿರುವ ಗೋಣಿಕೊಪ್ಪಲು ಜನತೆ ನೀರಿನ ಬವಣೆಯನ್ನು ಅನುಭವಿಸಿದರೆ ಆಶ್ಚರ್ಯ ಪಡಬೇಕಿಲ್ಲ. ಗೋಣಿಕೊಪ್ಪಲಿನಲ್ಲಿ ಬೇಸಿಗೆಯಲ್ಲಿ ಮಾತ್ರ ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದ್ದು, ಇದೀಗ ಮಳೆಗಾಲ ಮುಗಿಯುತ್ತಾ ಬಂದರೂ ದಿನ ಬಿಟ್ಟು ದಿನ ನೀರು ಬಿಡಲಾಗುತ್ತಿದೆ.

ಗೋಣಿಕೊಪ್ಪಲಿಗೆ ಜನವರಿಯಿಂದ ಈವರೆಗೆ (ಆಗಸ್ಟ್. 29) 36.26 ಇಂಚು ಮಳೆ ದಾಖಲಾಗಿದ್ದು, ಕಳೆದ ವರ್ಷ ಇದೇ ಅವಧಿಗೆ 57.18 ಇಂಚು ಮಳೆ ದಾಖಲಾಗಿತ್ತು. ಕಳೆದ ಬಾರಿ ಮಾರ್ಚ್ ತಿಂಗಳಿನಲ್ಲಿ 1.34 ಇಂಚು ಮೊದಲ ಮಳೆಯಾಗಿದ್ದರೆ, ಈ ಬಾರಿ ಏಪ್ರೀಲ್‍ನಲ್ಲಿ 1.01 ಇಂಚು ಮಳೆಯಾಗಿದೆ.ಈ ವರ್ಷ ಜೂನ್ 29 ರಂದು ಸುರಿದ 3.67 ಇಂಚು ಮಳೆ ಹಾಗೂ ಜುಲೈ 11 ರಂದು ಸುರಿದ 2.10 ಇಂಚು ಮಳೆ ದಿನವೊಂದರಲ್ಲಿ ಸುರಿದ ಅಧಿಕ ಮಳೆಯಾಗಿದೆ.

ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಒಟ್ಟು 30.60 ಮಳೆಯಾಗಿದ್ದರೆ, ಈ ಬಾರಿ ಜೂನ್ ತಿಂಗಳಿನಲ್ಲಿ ಕೇವಲ 14.19 ಇಂಚು ಮಳೆಯಾಗಿದೆ. ಕಳೆದ ವರ್ಷ ಒಟ್ಟು ಡಿಸೆಂಬರ್ ಅಂತ್ಯದವರೆಗೆ 74.33 ಇಂಚು ಮಳೆಯಾಗಿತ್ತು. ಈ ಬಾರಿ ಜಲ ಇನ್ನೂ ಹುಟ್ಟದಿರುವದರಿಂದ ಕೊಳವೆ ಬಾವಿಯ ನೀರನ್ನೆ ಆಶ್ರಯಿಸಿರುವ ಜನತೆ ಮುಂದಿನ ಬೇಸಿಗೆಯಲ್ಲಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಗೋಣಿಕೊಪ್ಪಲಿಗೆ ವಾರ್ಷಿಕ ಸರಾಸರಿ 70 ರಿಂದ 80 ಇಂಚು ಮಳೆ ಅಗತ್ಯವಿದ್ದು, ಈ ಬಾರಿ ಈವರೆಗೆ ಕೇವಲ 36.26 ಇಂಚು ಮಳೆ ದಾಖಲಾಗಿರುವದು ಆತಂಕಕ್ಕೆ ಕಾರಣವಾಗಿದೆ.

ಕಾವೇರಿ ನೀರಾವರಿ ನಿಗಮದಿಂದ ಈ ಭಾಗದ ಸುಮಾರು 7-8 ಗ್ರಾ.ಪಂ.ಕುಡಿಯುವ ನೀರು ಯೋಜನೆ ಅನುಷ್ಟಾನಕ್ಕಾಗಿ ಸುಮಾರು ರೂ.30 ಕೋಟಿ ಅನುದಾನ ಕಾದಿರಿಸಲಾಗಿದೆ ಎನ್ನಲಾಗಿದ್ದು, ನಡುವೆ ಸುಮಾರು ರೂ.4 ಲಕ್ಷ ವೆಚ್ಚದ ತಾತ್ಕಾಲಿಕ ಬಸ್ ತಂಗುದಾಣ ವ್ಯವಸ್ಥೆ ನೆನೆಗುದಿಗೆ ಬಿದ್ದಿದ್ದು, ಅನಾರೋಗ್ಯದ ನಿಮಿತ್ತ ಗೋಣಿಕೊಪ್ಪಲು ಗ್ರಾ.ಪಂ. ಪಿಡಿಓ ರಾಜೇಶ್ ಸುಮಾರು 1 ತಿಂಗಳು ರಜೆಯ ಮೇಲೆ ತೆರಳಿದ್ದಾರೆ ಎನ್ನಲಾಗಿದೆ. ಇದೀಗ ಕಾಕೋಟು ಪರಂಬು ಪಿಡಿಓ ಚಂದ್ರಮೌಳಿ ಅವರು ಪ್ರಬಾರ ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಒಟ್ಟಿನಲ್ಲಿ ಮಳೆಯ ವ್ಯತ್ಯಯ, ನೀರಿನ ಅಭಾವ, ಅಭಿವೃದ್ಧಿಪರ ಕ್ರಿಯಾ ಯೋಜನೆ ಇಲ್ಲದೆ ಗೋಣಿಕೊಪ್ಪಲು ಎರಡು ರಾಜಕೀಯ ಪಕ್ಷದ ಪ್ರಮುಖರ ಕಿತ್ತಾಟದಲ್ಲಿ ಮುಂದೆ ಮತ್ತಷ್ಟು ಸಮಸ್ಯೆಯನ್ನು ಎದುರಿಸಬೇಕಾದೀತು ಎನ್ನಲಾಗುತ್ತಿದೆ.

ವರದಿ: ಟಿ.ಎಲ್. ಶ್ರೀನಿವಾಸ್