ಕೂಡಿಗೆ, ಜ. 28: ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ 2015-16ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ಪ್ರಾರಂಭಗೊಳ್ಳುತ್ತಿದ್ದಂತೆಯೇ ಸಮರ್ಪಕವಾದ ಕಾಮಗಾರಿ ನಡೆಸದೆ, ಪಂಚಾಯಿತಿಗೆ ಖರೀದಿಸಿದ ವಸ್ತುಗಳ ಬಿಲ್ಗಳನ್ನು ಒದಗಿಸಿಲ್ಲ ಹಾಗೂ ಅಧ್ಯಕ್ಷರು ಮನಬಂದಂತೆ ವರ್ತಿಸಿ ಈಗಿನ ಆಡಳಿತ ಮಂಡಳಿಯವರಿಗೆ ಸರಿಯಾದ ಮಾಹಿತಿ ನೀಡದೆ ಸರ್ವಾಧಿಕಾರದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಲೆಕ್ಕವಿಲ್ಲದಂತೆ ಪಂಚಾಯಿತಿಯ ಹಣವನ್ನು ವ್ಯಯ ಮಾಡಿದ್ದಾರೆ ಎಂದು ಮಾಜಿ ಸದಸ್ಯ ರಾಜೇಶ್ ಹಾಗೂ ಹಾಲಿ ಸದಸ್ಯ ಹರೀಶ್ ಆರೋಪಿಸಿದರು. ಈ ಸಂದರ್ಭ ಗ್ರಾಮಸ್ಥರುಗಳಾದ ಮಣಿ, ಗಿರೀಶ್, ಕುಮಾರ, ಮೊದಲಾದವರು ಅಧ್ಯಕ್ಷರ ಮೇಲೆ ಆರೋಪವಿದ್ದರೂ ಅಧಿಕಾರದಲ್ಲಿ ಮುಂದುವರೆಯುವದು ಸರಿಯಲ್ಲ. ರಾಜೀನಾಮೆ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆ ಪ್ರಾರಂಭವಾದಾಗಿನಿಂದಲೂ ಮುಗಿಯುವವರೆಗೂ ಕೂಗಾಟ ಕಿರುಚಾಟ ನಡೆದವು. ಇದರಿಂದಾಗಿ ಗೊಂದಲದ ಗೂಡಾಗಿ ಸಭೆ ಅಂತ್ಯಗೊಂಡಿತು. ನಂತರ ಮುಂದಿನ ದಿನಗಳಲ್ಲಿ ಗ್ರಾಮ ಸಭೆಯನ್ನು ಕರೆದು 2016-17ನೇ ಸಾಲಿನ ಜಮಾಬಂದಿ ಯನ್ನು ಮಂಡಿಸಲಾಗುವದು ಎಂದು ಅಭಿವೃದ್ಧಿ ಅಧಿಕಾರಿ ಸಂತೋಷ್ ತಿಳಿಸಿದರು.