ಮಡಿಕೇರಿ, ಡಿ. 1: ವರದಕ್ಷಿಣೆ ಕಿರುಕುಳದಿಂದ ಮಹಿಳೆ ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ, ಅತ್ತೆ-ಮಾವ ಅವರಿಗೆ 7 ವರ್ಷ ಕಠಿಣ ಸಜೆ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ. ಪವನೇಶ್ ತೀರ್ಪು ನೀಡಿದ್ದಾರೆ.ಅಂಕನಹಳ್ಳಿ ಗ್ರಾಮದ ನಿವಾಸಿ ಎಸ್.ಇ. ಸುಂದರೇಶ್ ಈತನ ತಂದೆ-ತಾಯಿ ಎಸ್.ಎಸ್. ಈರಪ್ಪ - ಎಸ್.ಜಿ. ನೇತ್ರಾವತಿ ಶಿಕ್ಷೆಗೆ ಒಳಗಾದವರು. ಕ್ರೂರವಾಗಿ ಹಿಂಸಿಸಿದ ಅಪರಾಧಕ್ಕೆ 3 ವರ್ಷ ಕಠಿಣ ಸಜೆ ಮತ್ತು ರೂ. 2 ಸಾವಿರ ದಂಡ. ಆತ್ಮಹತ್ಯೆಯ ಸನ್ನಿವೇಶ ಸೃಷ್ಟಿಸಿದ ಅಪರಾಧಕ್ಕೆ 7 ವರ್ಷ ಕಠಿಣ ಸಜೆ ಮತ್ತು ರೂ. 3 ಸಾವಿರ ದಂಡ, ವರದಕ್ಷಿಣೆ ಕೇಳಿದ್ದಕ್ಕೆ 5 ವರ್ಷ ಕಠಿಣ ಸಜೆ ಮತ್ತು ರೂ. 1 ಲಕ್ಷ ದಂಡ ವಿಧಿಸಲಾಗಿದೆ. ಹೆಚ್ಚಿನ ವರದಕ್ಷಿಣೆ ಬೇಡಿಕೆ ಇಟ್ಟಿದ್ದಕ್ಕಾಗಿ 1 ವರ್ಷ ಕಠಿಣ ಸಜೆ ಮತ್ತು ರೂ. 2 ಸಾವಿರ ದಂಡ ವಿಧಿಸಲಾಗಿದೆ.
ವಸೂಲಾಗುವ ದರದಲ್ಲಿ ರೂ. 3 ಲಕ್ಷ ಮೃತಳ ತಾಯಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಲಾಗಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಎ. ಕೃಷ್ಣವೇಣಿ ವಾದಿಸಿದರು.
ಘಟನೆ ವಿವರ: ಅಂಕನಹಳ್ಳಿ ಗ್ರಾಮದ ಎಸ್.ಎಸ್. ಈರಪ್ಪ - ಎಸ್.ಜಿ. ನೇತ್ರಾವತಿ ದಂಪತಿ ಪುತ್ರ ಎಸ್.ಇ. ಸುಂದರೇಶ್ 30.11.2008 ರಂದು ಅರಕಲಗೂಡು ಕನ್ನಿಕಾ ಮಹಲ್ನಲ್ಲಿ ಹಾಸನ ಜಿಲ್ಲೆಯ ತಿಪ್ಪನಳ್ಳಿ ಗ್ರಾಮದ ನಂಜೇಗೌಡ - ನೀಲಮ್ಮ ದಂಪತಿ ಪುತ್ರಿ ಹೇಮಲತಾ ಅವರನ್ನು ವಿವಾಹವಾಗಿದ್ದರು. ವಿವಾಹ ವೇಳೆ ವರದಕ್ಷಿಣೆಯಾಗಿ ರೂ. 1 ಲಕ್ಷ ಹಾಗೂ 60 ಗ್ರಾಂ. ಚಿನ್ನಾಭರಣ ನೀಡಿದ್ದರು. ಪತಿ ಮನೆಯವರು ಮತ್ತೆ 2010 ರಲ್ಲಿ ವರದಕ್ಷಿಣೆಯಾಗಿ ನಂಜೇಗೌಡ ಅವರಿಂದ ರೂ. 2 ಲಕ್ಷ ಪಡೆದುಕೊಂಡಿದ್ದರು.
ತದನಂತರ ಕೂಡ ವರದಕ್ಷಿಣೆ ತರುವಂತೆ ಮಾನಸಿಕ ಹಿಂಸೆ ನೀಡುತ್ತಿದ್ದರಿಂದ 3.4.2010 ರಂದು ಹೇಮಲತಾ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, 6.4.2011 ರಂದು ಕೊನೆ ಉಸಿರೆಳೆದರು. ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.