ಸಿದ್ದಾಪುರ, ಡಿ. 25: ಗಿರಿಜನರ ಗುಡಿಸಲುಗಳನ್ನು ಏಕಾಏಕಿ ತೆರವುಗೊಳಿಸಿರುವದು ಅಮಾನವೀಯ ಕೃತ್ಯವಾಗಿದೆ ಎಂದು ರಾಜ್ಯ ಪರಿಶಿಷ್ಟ ಜಾತಿ, ಪಂಗಡದ ಆಯೋಗದ ಅಧ್ಯಕ್ಷ ಎ.ಮುನಿಯಪ್ಪ ಅವರು ಅಭಿಪ್ರಾಯಪಟ್ಟರು.ಮಾಲ್ದಾರೆ ಸಮೀಪದ ದಿಡ್ಡಳ್ಳಿ ನಿರಾಶ್ರಿತರನ್ನು ಭೇಟಿ ಮಾಡಿ ನೆಲದಲ್ಲೇ ಕುಳಿತು ಗಿರಿಜನರ ಸಮಸ್ಯೆಯನ್ನು ಆಲಿಸಿದ ಬಳಿಕ ಅವರು ಮಾತನಾಡಿ, ಆದಿವಾಸಿಗಳು ಅರಣ್ಯ ವ್ಯಾಪ್ತಿಯಲ್ಲಿ ಗುಡಿಸಲು ನಿರ್ಮಾಣ ಮಾಡಿಕೊಂಡು ಜೀವ ಸಾಗಿಸುತ್ತಿದ್ದು, ಅರಣ್ಯ ಇಲಾಖೆಯು ಯಾವದೇ ಮಾಹಿತಿ ನೀಡದೆ ಏಕಾಏಕಿ ಗುಡಿಸಲುಗಳನ್ನು ನೆಲಸಮ ಮಾಡಿರುವದು ಖಂಡನೀಯ. ಕಡು ಬಡತನದಲ್ಲಿರುವ ಆದಿವಾಸಿಗಳಿಗೆ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಸರಕಾರಿ ಜಾಗವನ್ನು ಗುರುತಿಸಿದ್ದು, ಪರ್ಯಾಯ ವ್ಯವಸ್ಥೆಯನ್ನು ಶೀಘ್ರದಲ್ಲೇ ಮಾಡಲಾಗುವದು. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಸಚಿವರು
(ಮೊದಲ ಪುಟದಿಂದ) ಹಾಗೂ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿರುವದಾಗಿ ಅವರು ತಿಳಿಸಿದರು.
ಈಗ ತಾತ್ಕಾಲಿಕವಾಗಿ ವಾಸಮಾಡಿಕೊಂಡಿರುವ ಜಾಗದಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲಾಗಿದ್ದು, ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮಕ್ಕಳನ್ನು ಚಳಿಯಿಂದ ರಕ್ಷಿಸಲು ಸ್ವೆಟರ್ ನೀಡಲಾಗುವದು ಎಂದರು. ಇಲಾಖೆಯಲ್ಲಿ ಸಾಕಷ್ಟು ಹಣಗಳಿದ್ದು, ಆದಿವಾಸಿಗಳಿಗೆ ಯಾವದೇ ಕೊರತೆ ಇಲ್ಲದ ರೀತಿಯಲ್ಲಿ ಆಹಾರ ದಾನ್ಯಗಳನ್ನು ಒದಗಿಸಲಾಗುವದು.
ಖಾಸಗಿ ತೋಟಗಳಲ್ಲಿ ಜೀತದಾಳುಗಳಂತೆ ಕೆಲಸ ಮಾಡದೆ ಸಣ್ಣ ಕೈಗಾರಿಕೆ ಅಥವಾ ಸ್ವ ಉದ್ಯೋಗದಲ್ಲಿ ಆದಿವಾಸಿಗಳು ತೊಡಗಿಕೊಳ್ಳಲು ಅವರು ಕರೆ ನೀಡಿದರು. ಮಾತ್ರವಲ್ಲದೇ ಪೋಷಕರು ತಮಗೆ ಆಹಾರವಿಲ್ಲದಿದ್ದರೂ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು ಎಂದರು.
ಈ ಸಂದರ್ಭ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಆದಿವಾಸಿಗಳಿಗೆ ಊಟದಲ್ಲಿ ತಾರತಮ್ಯ ಮಾಡಬಾರದು. ಅರ್ಧ ಬೇಯಿಸಿದ ಆಹಾರ ನೀಡಬಾರದು. ಅಧಿಕಾರಿಗಳು ಕೂಡ ಆದಿವಾಸಿಗಳೊಂದಿಗೆ ಕುಳಿತು ಬೆರೆತು ಅವರ ಸಮಸ್ಯೆಗೆ ಸ್ಪಂದಿಸಬೇಕು. ಆದಿವಾಸಿಗಳ ಹೆಸರಿನಲ್ಲಿ ಸರಕಾರದ ಹಣವನ್ನು ಪೋಲು ಮಾಡಬಾರದು. ಆದಿವಾಸಿಗಳ ಮಕ್ಕಳನ್ನು ಅವರ ಮನೆಗೆ ತೆರಳಿ ಪೋಷಕರ ಹಾಗೂ ಮಕ್ಕಳ ಮನವೊಲಿಸಿ ಶಾಲೆಗೆ ಕರೆತರಬೇಕು ಎಂದರು.
ಪ್ರತಿಭಟನೆ ನಡೆಸುವ ಸಂದರ್ಭ ಆದಿವಾಸಿಗಳ ಮೇಲೆ ದೌರ್ಜನ್ಯ ಎಸೆಗಿರುವ ಬಗ್ಗೆ ತಿಳಿದಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರ್ರಮ ಕೈಗೊಳ್ಳುವ ಭರವಸೆ ನೀಡಿದರು. ಭಾರತದಲ್ಲಿ ಹೆಣ್ಣಿಗೆ ತನ್ನದೇ ಆದ ಗೌರವ ಇದೆ. ಬೆತ್ತಲೆ ಪ್ರತಿಭಟನೆ ವೇಳೆ ದೌರ್ಜನ್ಯ ನಡೆಸಿದ್ದು ಸಾಬೀತಾದರೇ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದರು.
ಈ ಸಂದರ್ಭ ಮಾತನಾಡಿದ ಗಿರಿಜನ ಮುಖಂಡ ಜೆ.ಕೆ ಅಪ್ಪಾಜಿ, ನಾವು ತಲತಲಾಂತರದಿಂದ ಇಲ್ಲಿಯೇ ವಾಸವಾಗಿದ್ದು, ಹೀಗಾಗಿ 577 ಕುಟುಂಬ ಗುಡಿಸಲು ನಿರ್ಮಿಸಿದ್ದು, ಅಧಿಕಾರಿಗಳು ಬೆಳ್ಳಂಬೆಳಗ್ಗೆ ಗುಡಿಸಲು ನೆಲಸಮ ಮಾಡಿದ್ದಾರೆ. ಮೀಸಲು ಅರಣ್ಯ ಎಂದು ಹೇಳುತ್ತಿರುವ ಅಧಿಕಾರಿಗಳು ಇಲ್ಲಯೇ ಇರುವ ಇತರ ಜನಾಂಗದವರನ್ನು ಏಕೆ ಒಕ್ಕಲೆಬ್ಬಿಸಿಲ್ಲ ಎಂದು ಪ್ರಶ್ನಿಸಿದರು. ಪ್ರತಿಭಟನೆಯ ವೇಳೆ 8 ಮಂದಿಯ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು, ತಮ್ಮನ್ನು ಬೀದಿಪಾಲು ಮಾಡಿದ್ದಾರೆ ಎಂದು ಅಳಲನ್ನು ತೋಡಿಕೊಂಡರು.
ಈ ಸಂದರ್ಭ ಆಯೋಗದ ಸದಸ್ಯ ದಿವಾಕರ್, ಗಿರಿಜನ ಮುಖಂಡೆ ಮುತ್ತಮ್ಮ, ಹೋರಾಟ ಸಮಿತಿಯ ಹೆಚ್.ಎಂ ಕಾವೇರಿ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಚಿಕ್ಕಮಾದಯ್ಯ, ಪರಿಶಿಷ್ಟ ವರ್ಗದ ಅಧಿಕಾರಿ ರಾಮೇಗೌಡ, ಲೋಹಿತ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಆಯೋಗದ ಅಧ್ಯಕ್ಷರು ದಿಡ್ಡಳ್ಳಿಗೆ ಭೇಟಿ ನೀಡುವ ಮುಂಚಿತವಾಗಿ ಜಿಲ್ಲಾ ಪ್ರಬಾರ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ದಿಡ್ಡಳ್ಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಿರಾಶ್ರಿತರಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ದಾಖಲೆ ಪರಿಶೀಲಿಸಿ ಪ್ಲಾಸ್ಟಿಕ್ ಹೊದಿಕೆಯನ್ನು ವಿತರಿಸಲಾಯಿತು.