ಸೋಮವಾರಪೇಟೆ, ಜ. 8: ಮನೆಯ ಮುಂಭಾಗ ನೆಟ್ಟಿ ಬೆಳೆಸಿದ್ದ ಶ್ರೀಗಂಧದ ಮರವನ್ನು ಕಳ್ಳತನ ಮಾಡಲು ಯತ್ನಿಸುತ್ತಿದ್ದ ಕಳ್ಳರ ಗುಂಪಿನ ಮೇಲೆ ಮನೆಯ ಮಾಲೀಕ ಗುಂಡು ಹಾರಿಸಿದ್ದರೂ ಸಹ ಬಚಾವ್ ಆಗಿ ಕಾಲ್ಕಿತ್ತಿರುವ ಘಟನೆ ನಿನ್ನೆ ರಾತ್ರಿ ಸಮೀಪದ ಹಾನಗಲ್ಲು ಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.

ಹಾನಗಲ್ಲು ಶೆಟ್ಟಳ್ಳಿಯ ನಿವಾಸಿ ಕಾರ್ಯಪ್ಪ ಅವರ ಮನೆಯ ಮುಂಭಾಗ ನೆಟ್ಟು ಬೆಳೆಸಲಾಗಿದ್ದ ಸುಮಾರು 12 ವರ್ಷದ 2 ಮರಗಳನ್ನು ರಾತ್ರಿ 11 ಗಂಟೆ ಸುಮಾರಿಗೆ ಅಪರಿಚಿತ ಕಳ್ಳರು ಕಳವು ಮಾಡಿ ಸ್ಥಳದಿಂದ ಸಾಗಿಸಿದ್ದಾರೆ.

ಈ ಮರಗಳಿದ್ದ ಪಕ್ಕದಲ್ಲಿಯೇ ಇದ್ದ ಮತ್ತೊಂದು ಮರದ ಮೇಲೆ ಕಳ್ಳರ ದೃಷ್ಟಿ ಬಿದ್ದಿದ್ದು, ಇದನ್ನೂ ಸಹ ಗರಗಸದಿಂದ ಕತ್ತರಿಸುತ್ತಿದ್ದ ಸಂದರ್ಭ ಎಚ್ಚರಗೊಂಡ ಮನೆಯ ಮಾಲೀಕ ಕಾರ್ಯಪ್ಪ ಅವರು, ಸುತ್ತಮುತ್ತ ಕಣ್ಣಾಯಿಸಿದ್ದಾರೆ.

ಈ ಸಂದರ್ಭ ಕಳ್ಳರ ಬಗ್ಗೆ ಖಚಿತಗೊಂಡ ಕಾರ್ಯಪ್ಪ ಅವರು ತಮ್ಮ ಮನೆಯಲ್ಲಿದ್ದ ಕೋವಿಯಿಂದ ಮರದ ಬುಡಕ್ಕೆ ಗುಂಡು ಹಾರಿಸಿದ್ದಾರೆ. ಈ ಸಂದರ್ಭ ಮರದ ಮೇಲೆ ಕುಳಿತು ಕೊಂಬೆ ಕತ್ತರಿಸುತ್ತಿದ್ದ ಕಳ್ಳ ನೆಲಕ್ಕೆ ಬಿದ್ದು, ಓಡಿದ್ದಾನೆ. ಈತನನ್ನು ಬೆನ್ನು ಹತ್ತಿದ ಕಾರ್ಯಪ್ಪ ಹಾಗೂ ಅವರ ಪುತ್ರ ಅಭಿಲಾಷ್ ಅವರುಗಳು ಸುಮಾರು ಒಂದು ಕಿ.ಮೀ. ಅಟ್ಟಿಕೊಂಡು ಹೋಗಿದ್ದಾರೆ. ಈ ಸಂದರ್ಭ ಕಳ್ಳ ತನ್ನ ಬಳಿಯಿದ್ದ ಗರಗಸದಿಂದ ಅಭಿಲಾಷ್ ಮೇಲೆ ಹಲ್ಲೆಗೆ ಯತ್ನಿಸಿ ಕತ್ತಲಲ್ಲಿ ಕಣ್ಮರೆಯಾಗಿದ್ದಾನೆ.

ಈ ಬಗ್ಗೆ ಇಂದು ಕಾರ್ಯಪ್ಪ ಅವರು ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಹಾಗೂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ಸಂದರ್ಭ ಅಧಿಕಾರಿ ವಲಯದಿಂದ ಯಾವದೇ ಸ್ಪಂದನೆ ದೊರೆತಿಲ್ಲ ಎನ್ನಲಾಗಿದೆ.

ಎರಡು ಶ್ರೀಗಂಧದ ಮರವನ್ನು ಕಳವು ಮಾಡಿ, ಮೂರನೇ ಮರಕ್ಕೂ ಕಣ್ಣಿಟ್ಟಿದ್ದ ಕಳ್ಳರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾರ್ಯಪ್ಪ ಅವರು ದೂರು ನೀಡಿದ್ದರೂ ಸಹ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಕನಿಷ್ಟ ಸ್ಥಳ ಪರಿಶೀಲನೆಯನ್ನೂ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ.

ದೂರು ಅರ್ಜಿಯನ್ನು ಸ್ವೀಕರಿಸಿದ ಬಗ್ಗೆ ಅರ್ಜಿದಾರರಿಗೆ ಕನಿಷ್ಟ ಪಕ್ಷ ಸ್ವೀಕೃತಿ ಪತ್ರವನ್ನೂ ನೀಡದೇ ಅರಣ್ಯ ಇಲಾಖೆಯವರು ತಮ್ಮ ಕರ್ತವ್ಯ ನಿಷ್ಠೆಯನ್ನು(!)ಸಾಬೀತುಗೊಳಿಸಿದ್ದಾರೆ. ತಕ್ಷಣ ಶ್ರೀಗಂಧ ಮರ ಕಳ್ಳತನ ಮಾಡಲು ಯತ್ನಿಸಿದ ಕಳ್ಳರ ಗುಂಪನ್ನು ಕಂಡುಹಿಡಿದು ಕಾನೂನು ಕ್ರಮ ಜರುಗಿಸುವ ಮೂಲಕ ಇತರ ಶ್ರೀಗಂಧಗಳನ್ನು ಉಳಿಸಿಕೊಡ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.