ಕುಶಾಲನಗರ, ಸೆ. 17: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಹೋಬಳಿಯ ಆನೆಕಾಡು ಅರಣ್ಯದಂಚಿಗೆ ಹೊಂದಿಕೊಂಡಿರುವ ಹೇರೂರು ಗಿರಿಜನ ಹಾಡಿಯಲ್ಲಿ ಸ್ಕೇಬೀಸ್ ಎಂಬ ತುರಿಕಜ್ಜಿ ರೋಗ ಕಾಣಿಸಿಕೊಂಡಿದ್ದು. ಸ್ಥಳೀಯ ಆರೋಗ್ಯ ಸಹಾಯಕಿರ ಗಮನಕ್ಕೆ ಬಾರದೆ ತಾಲೂಕು ಆರೋಗ್ಯಾಧಿಕಾರಿಯವರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಹೆಚ್ಚು ಮಕ್ಕಳು ಈ ರೋಗಕ್ಕೆ ತುತ್ತಾಗಿ ಮನೆಯಲ್ಲಿಯೇ ಇರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಿರಿಜನರ ಅಶುಚಿತ್ವದಿಂದ ಸ್ಕೇಬೀಸ್ ರೋಗ ಕೈಯಲ್ಲಿ, ಹೊಟ್ಟೆಯಲ್ಲಿ, ಬೆನ್ನಿನ ಭಾಗ, ಮಲ-ಮೂತ್ರ ಮಾಡುವ ಜಾಗದಲ್ಲಿ ಹರಡಿದ್ದು ಸರಿಯಾಗಿ ಸ್ನಾನ ಮಾಡದಿರುವದು, ತಿಂದ ತಟ್ಟೆಗಳನ್ನು ತೊಳೆಯದಿರುವದು ಅಲ್ಲದೆ ಮಕ್ಕಳು ಮನೆಯಲ್ಲಿಯೇ ಕುಳಿತ ಜಾಗದಲ್ಲಿಯೇ ಮೂತ್ರ ಮಾಡಿಕೊಳ್ಳುವ ಕಾರಣ ಮನೆಯ ಅಶುಚಿತ್ವದಿಂದ ಈ ಖಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡಿದ್ದು. ಹಾಡಿಯಲ್ಲಿ ಅಶುಚಿತ್ವ ತುಂಬಿ ತುಳುಕುತ್ತಿದೆ.

ಆರೋಗ್ಯ ಬಂಧು ಕಾರ್ಯಕ್ರಮದಡಿ ಗಿರಿಜನ ಹಾಡಿಗಳಿಗೆ ಸಂಚಾರಿ ಆಸ್ಪತ್ರೆಯ ವ್ಯವಸ್ಥೆ ಕಲ್ಪಿಸಿದ್ದರೂ ಸಹ ಯಾವದೇ ವೈದ್ಯರಾಗಲೀ, ಆರೋಗ್ಯ ಸಹಾಯಕಿಯರಾಗಲೀ ಭೇಟಿ ನೀಡದೆ ಇರುವದರಿಂದ ಈ ಯೋಜನೆ ಸಹ ಸ್ಥಗಿತಗೊಂಡಿದೆ. ಹೊಸ ನೀತಿ ಇನ್ನು ಜಾರಿಯಾಗದೆ ಇರುವದೇ ಇದಕ್ಕೆ ಕಾರಣ. ಆರೋಗ್ಯ ಇಲಾಖೆಯು ಪಂಚಾಯಿತಿಯವರ ಸಹಕಾರದಲ್ಲಿ ಹಾಡಿಗಳಲಿ ಸ್ಕೇಬೀಸ್ ರೋಗ ಅರಿವು ಮೂಡಿಸಬೇಕಾಗಿದೆ. ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲ. ಒಟ್ಟಾರೆ ಅಂಗನವಾಡಿ ಮೂಲಕ ಒಂದಷ್ಟು ಆಹಾರವನ್ನು ಇವರಿಗೆ ಸರಬರಾಜು ಮಾಡಿದರೆ ತಮ್ಮ ಜವಾಬ್ದಾರಿ ಮುಗಿಯಿತು ಎಂಬ ಭಾವನೆ ಐ.ಟಿ.ಡಿ.ಪಿ. ಅಧಿಕಾರಿಗಳಲ್ಲಿ ಇರುವಂತೆ ಕಂಡು ಬರುತ್ತದೆ.

ಈ ವಿಷಯದ ಸಂಬಂಧ ಇಲ್ಲಿನ ಹೆಸರು ಹೇಳಲು ಇಚ್ಚಿಸದ ಗ್ರಾಮಸ್ಥರು ನಾವಿಲ್ಲಿ 50 ಕುಟುಂಬಗಳು ವಾಸಿಸುತ್ತಿದ್ದು. ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಂಗಳಿಗೊಮ್ಮೆಯಾದರೂ ಹಾಡಿಗೆ ಭೇಟಿ ನೀಡುತ್ತಿಲ್ಲ ಎಂದು ಆರೋಪಿಸಿದರು. ಸಂಬಂಧಿಸಿದ ಆರೋಗ್ಯ ಇಲಾಖೆಯ ಜಿಲ್ಲಾಧಿಕಾರಿಗಳು ಹಾಡಿಗೆ ದಿಢೀರ್ ಭೇಟಿ ನೀಡಿ ಎಲ್ಲಾ ಕುಟುಂಬದವರಿಗೂ ಚಿಕಿತ್ಸೆ ನೀಡಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ.